ಲೊಕ್ಕನಹಳ್ಳಿ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಅಗ್ನಿಶಾಮಕ ಠಾಣಾ ವತಿಯಿಂದ ಅಗ್ನಿ ಸುರಕ್ಷತೆ ಕುರಿತು ಪ್ರಾತ್ಯಕ್ಷಿಕೆ ನಡೆಯಿತು. ಮಾದೇಶ್, ಮಹೇಶ್, ಲಿಂಗೇಶ್, ಹರ್ಷ ಇತರರಿದ್ದರು.
ಹನೂರು: ಬೆಂಕಿ ಅವಘಡಗಳು ಸಂಭವಿಸದಂತೆ ಪ್ರತಿಯೊಬ್ಬರೂ ಎಚ್ಚರಿಕೆ ವಹಿಸುವುದರ ಜತೆಗೆ ನಂದಿಸುವ ವಿಧಾನವನ್ನು ತಿಳಿದುಕೊಳ್ಳಬೇಕು ಎಂದು ಅಗ್ನಿಶಾಮಕ ಪ್ರಭಾರ ಠಾಣಾಧಿಕಾರಿ ಮಹೇಶ್ ತಿಳಿಸಿದರು.
ತಾಲೂಕಿನ ಲೊಕ್ಕನಹಳ್ಳಿ ಕರ್ನಾಟಕ ಪಬ್ಲಿಕ್ ಶಾಲೆ ಆವರಣದಲ್ಲಿ ಶನಿವಾರ ಅಗ್ನಿಶಾಮಕ ಠಾಣೆ ವತಿಯಿಂದ ಅಗ್ನಿ ಸುರಕ್ಷತೆ ಕುರಿತು ಆಯೋಜಿಸಿದ್ದ ಅರಿವು ಕಾರ್ಯಕ್ರಮದಲ್ಲಿ ಪ್ರಾತ್ಯಕ್ಷಿಕೆಯೊಂದಿಗೆ ಮಾತನಾಡಿದರು.
ಬೆಂಕಿ ಅವಘಡ ಸಂಭವಿಸುವುದರಿಂದ ವಸ್ತುಗಳು ಹಾನಿಯಾಗುವುದರ ಜತೆಗೆ ಸಾವು, ನೋವುಗಳ ಸಂಭವಿಸುವ ಸಾಧ್ಯತೆ ಇರುತ್ತದೆ. ಮನೆಗಳಲ್ಲಿ ಸಿಲಿಂಡರ್ ಅನಿಲ ಸೋರಿಕೆಯಿಂದಲೂ ಅಗ್ನಿ ಅವಘಡ ಸಂಭವಿಸುತ್ತದೆ. ಆದ್ದರಿಂದ ಈ ಬಗ್ಗೆ ಪ್ರತಿಯೊಬ್ಬರೂ ಎಚ್ಚರ ವಹಿಸಬೇಕು. ಮನೆಯವರಿಗೂ ಅರಿವು ಮೂಡಿಸಬೇಕು. ಒಂದು ವೇಳೆ ಗ್ಯಾಸ್ ಹೊತ್ತಿಕೊಂಡಲ್ಲಿ ಗಾಬರಿಯಾಗುವ ಬದಲು ಅಗ್ನಿಶಾಮಕ ಠಾಣೆಗೆ ಮಾಹಿತಿ ತಿಳಿಸಿ ಆರಿಸುವ ವಿಧಾನವನ್ನು ಅನುಸರಿಸಬೇಕು. ಮೊದಲು ಜೀವ ರಕ್ಷಣೆಗೆ ಆದ್ಯತೆ ನೀಡಬೇಕು ಎಂದು ತಿಳಿಸಿದರು.
ಮುಖ್ಯ ಶಿಕ್ಷಕ ಮಾದೇಶ್, ಅಗ್ನಿಶಾಮಕ ಸಿಬ್ಬಂದಿ ಲಿಂಗೇಶ್, ಹರ್ಷ, ನಾಗಪ್ಪ, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಇದ್ದರು.