ಚಾಮರಾಜನಗರದ ಯಡಪುರ ಸಮೀಪದಲ್ಲಿರುವ ಸಿಮ್ಸ್ ಆಸ್ಪತ್ರೆಯ ಗೋಡೆಗಳಲ್ಲಿ ಅಳವಡಿಸಿರುವ ಟೈಲ್ಸ್‌ಗಳು ಕಳಚಿರುವುದು.
- ಸಿಮ್ಸ್ ಆಸ್ಪತ್ರೆಯಲ್ಲಿ ಸಾರ್ವಜನಿಕರಿಗೆ ಆತಂಕ
- ಮೂಲಸೌಕರ್ಯ ಕೊರತೆಗೆ ಆಕ್ರೋಶ
- ಕಳಪೆ ಕಾಮಗಾರಿ ಆರೋಪ
ಚಾಮರಾಜನಗರ: ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಮತ್ತು ಬೋಧನಾ ಆಸ್ಪತ್ರೆಯ ಗೋಡೆಗಳ ಟೈಲ್ಸ್ಗಳು ಕಳಚಿ ಬೀಳುತ್ತಿದ್ದು, ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ.
ನಗರದ ಹೊರ ವಲಯದಲ್ಲಿರುವ ಸಿಮ್ಸ್ ಆಸ್ಪತ್ರೆ 450 ಹಾಸಿಗೆಗಳನ್ನು ಒಳಗೊಂಡಿದ್ದು, ಹೊರರೋಗಿ ವಿಭಾಗ, ಒಳರೋಗಿ ವಿಭಾಗ, ತುರ್ತು ಚಿಕಿತ್ಸೆ ವಿಭಾಗ, 9 ಆಪರೇಷನ್ ಥಿಯೇಟರ್ ಮತ್ತು ಸುಪರ್-ಸ್ಪೆಷಾಲಿಟಿ ವಿಭಾಗಗಳನ್ನು ಹೊಂದಿದೆ. ಈ ಆಸ್ಪತ್ರೆ ನುರಿತ ವೈದ್ಯರು ಹಾಗೂ ಸಿಬ್ಬಂದಿಯನ್ನು ಒಳಗೊಂಡಿದೆ. ಆದರೆ ಅತ್ಯುತ್ತಮವಾದ ಕಟ್ಟಡವನ್ನು ಒಳಗೊಂಡಿರುವ ಸಿಮ್ಸ್ ಆಸ್ಪತ್ರೆಯ ಗೋಡೆಗಳ ಟೈಲ್ಸ್ಗಳು ಇತ್ತೀಚೆಗೆ ಅಲ್ಲಲ್ಲಿ ಕಳಚಿ ಬೀಳುತ್ತಲೇ ಇದ್ದು, ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ. ನೆಲ ಮಹಡಿ, ಮೊದಲನೇ ಮಹಡಿ, ಎರಡನೇ ಮಹಡಿಯ ಗೋಡೆಗಳು, ಮಹಡಿಗಳಿಗೆ ಹೋಗುವ ಮೆಟ್ಟಿಲುಗಳ ಗೋಡೆಗಳಲ್ಲಿ ಅಳವಡಿಸಿದ್ದ ಟೈಲ್ಸ್ಗಳು ಅಲ್ಲಲ್ಲಿ ಕಳಚಿ ಬೀಳುತ್ತಲೇ ಇದೆ. ಈವರೆಗೂ ಇದರಿಂದ ಯಾವುದೇ ಅನಾಹುತಗಳು ಸಂಭವಿಸಿಲ್ಲ. ಆದರೆ ನಿತ್ಯವೂ ಸಾವಿರಾರು ಜನರು ಸಿಮ್ಸ್ ಆಸ್ಪತ್ರೆಯಲ್ಲಿ ಓಡಾಡುವುದರಿಂದ ಮುಂದಿನ ದಿನಗಳಲ್ಲಿ ಯಾವುದಾದರೂ ಅನಾಹುತಗಳು ಸಂಭವಿಸದಂತೆ ಸಿಮ್ಸ್ ಆಡಳಿತ ಮಂಡಳಿ ಎಚ್ಚರಿಕೆ ವಹಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಸಿಮ್ಸ್ ಆಸ್ಪತ್ರೆಯ ಕಟ್ಟಡವನ್ನು ಬಹಳ ಸುಸಜ್ಜಿತವಾಗಿ ನಿರ್ಮಾಣ ಮಾಡಲಾಗಿದೆ. ಆದರೆ ನೆಲ ಅಂತಸ್ತು, ಮೊದಲನೇ ಮಹಡಿ, ಎರಡನೇ ಮಹಡಿ, ಮೂರನೇ ಮಹಡಿಯಲ್ಲೂ ಗೋಡೆಗೆ ಅಂಟಿಸಿರುವ ಟೈಲ್ಸ್ಗಳು ಕಳಚಿ ಬಿದ್ದಿರುವುದು ಕಂಡು ಬರುತ್ತದೆ. ಮಹಡಿಗಳನ್ನು ತಲುಪಲು ಇರುವ ಮೆಟ್ಟಿಲುಗಳ ಸಮೀಪದ ಗೋಡೆಗಳಲ್ಲಿ ಹೆಚ್ಚಾಗಿ ಟೈಲ್ಸ್ಗಳು ಕಳಚಿ ಬೀಳುತ್ತಿದ್ದು, ಜನರು ಮೆಟ್ಟಿಲುಗಳನ್ನು ಹತ್ತುವಾಗ ಟೈಲ್ಸ್ ಕಳಚಿ ಬಿದ್ದರೇ ಏನು ಮಾಡುವುದು ಎಂಬ ಆತಂಕವನ್ನು ಸಾರ್ವಜನಿಕರು ವ್ಯಕ್ತಪಡಿಸುತ್ತಿದ್ದಾರೆ. ಮಹಡಿಗಳಿಗೆ ಹೋಗುವ ಲ್‌ಟಿಗಳ ಗೋಡೆಗಳಲ್ಲೂ ಟೈಲ್ಸ್ ಕಳಚಿ ಬೀಳುವ ಹಂತದಲ್ಲಿದ್ದು, ಇನ್ನೂ ಹಲವೆಡೆ ಗೋಡೆಗಳಲ್ಲಿ ಅಂಟಿಸಿರುವ ಟೈಲ್ಸ್ ಕಳಚಿ ಬೀಳುವ ಸ್ಥಿತಿಯಲ್ಲಿದೆ. ಈ ಸಂಬಂಧ ಸಿಮ್ಸ್ ಆಡಳಿತ ಮಂಡಳಿ ಯಾವುದೇ ಕ್ರಮವನ್ನು ವಹಿಸಿದೆ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದೆ ಎಂದು ಅಂಗವಿಕಲರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ರಮೇಶ್ ಅವರು ಬೇಸರ ವ್ಯಕ್ತಪಡಿಸಿದರು.
ಸಿಮ್ಸ್ ಆಸ್ಪತ್ರೆಯ ಗೋಡೆಗಳಿಗೆ ಟೈಲ್ಸ್‌ಗಳ ಅಳವಡಿಕೆ ಕಾಮಗಾರಿ ಕಳಪೆಯಿಂದ ಕೂಡಿರುವುದರಿಂದ ಅಂಟಿಸಿರುವ ಟೈಲ್ಸ್ಗಳು ಕಳಚಿ ಬೀಳುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಸಿಮ್ಸ್ ಆಸ್ಪತ್ರೆಯನ್ನು ಬಡ ಮತ್ತು ಮಧ್ಯಮ ವರ್ಗದ ಜನರೇ ಹೆಚ್ಚಾಗಿ ಅವಲಂಬಿಸಿದ್ದಾರೆ. ಆದರೇ ಅಂತಹ ಆಸ್ಪತ್ರೆಯನ್ನು ನಿರ್ಮಾಣ ಮಾಡುವವರು ಕಳಪೆ ಕಾಮಗಾರಿ ನಡೆಸಿದ ಕಾರಣ ಇಂತಹ ಸಮಸ್ಯೆ ಎದುರಾಗುತ್ತಿದೆ. ತಮ್ಮ ಖಾಯಿಲೆಗಳನ್ನು ಗುಣ ಮಾಡಿಕೊಳ್ಳಲು ಆಸ್ಪತ್ರೆಗೆ ಬರುವ ಬಡ ಮತ್ತು ಮಧ್ಯಮ ಜನರಿಗೆ ಒಂದು ವೇಳೆ ಟೈಲ್ಸ್ ಗಳು ಕಳಚಿ ಬಿದ್ದು, ಅನಾಹುತಗಳು ಸಂಭವಿಸಿದರೇ ಏನು ಮಾಡುವುದು ಎಂಬ ಪ್ರಶ್ನೆ ಮೂಡುತ್ತದೆ. ಈ ನಿಟ್ಟಿನಲ್ಲಿ ಸಂಬಂಧಪಟ್ಟವರು ಎಚ್ಚೆತ್ತುಕೊಂಡು ಯಾವುದೇ ಟೈಲ್ಸ್ ಗಳು ಕಳಚಿ ಬೀಳದಂತೆ ಕ್ರಮವಹಿಸಬೇಕು. ಜನರು ಆತಂಕದಲ್ಲಿ ಸಿಮ್ಸ್ ಆಸ್ಪತ್ರೆಗೆ ಬರುವುದನ್ನು ದೂರ ಮಾಡಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ.
ಸಿಮ್ಸ್ ಆಸ್ಪತ್ರೆಯಲ್ಲಿ ಕುಡಿಯುವ ನೀರು ಹಾಗೂ ಇನ್ನಿತರೆ ಮೂಲಸೌಕರ್ಯ ಕೊರತೆ ಕಂಡುಬರುತ್ತಿದೆ. ಜಿಲ್ಲಾ ಕೇಂದ್ರದಲ್ಲಿ ಈಗಾಗಲೇ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗುತ್ತಲೇ ಇದೆ. ಮುಂದಿನ ದಿನಗಳಲ್ಲಿ ಬೇಸಿಗೆ ಬರುತ್ತಿದ್ದು, ಸಾರ್ವಜನಿಕರು ಹೆಚ್ಚಾಗಿ ಓಡಾಡುವ ಸ್ಥಳಗಳಲ್ಲಿ ಎಲ್ಲೂ ಕುಡಿಯುವ ನೀರಿನ ವ್ಯವಸ್ಥೆಯನ್ನು ಸೂಕ್ತ ರೀತಿಯಲ್ಲಿ ಮಾಡಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ. ಶೌಚಾಲಯಗಳಲ್ಲೂ ಕೂಡ ಅಶುಚಿತ್ವ ತಾಂಡವವಾಡುತ್ತಿದೆ. ಒಟ್ಟಾರೆಯಾಗಿ ಅಗತ್ಯ ಮೂಲ ಸೌಕರ್ಯ ಕಲ್ಪಿಸುವಲ್ಲಿ ಸಿಮ್ಸ್ ಆಡಳಿತ ಮಂಡಳಿ ವಿಫಲವಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಿಮ್ಸ್ ಆಸ್ಪತ್ರೆಯಲ್ಲಿ ಕಳಪೆ ಕಾಮಗಾರಿಯಿಂದ ಗೋಡೆಗಳಿಗೆ ಅಂಟಿಸಿರುವ ಟೈಲ್ಸ್ಗಳು ಕಳಚಿ ಬೀಳುತ್ತಿದೆ. ಇದರಿಂದ ಜನರು ಆತಂಕದಲ್ಲೇ ಓಡಾಡುವಂತಾಗಿದೆ. ಆಸ್ಪತ್ರೆಯ ಪ್ರಮುಖ ಜಾಗದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದೇ ಸಾರ್ವಜನಿಕರು ಸಮಸ್ಯೆ ಅನುಭವಿಸುತ್ತಿದ್ದಾರೆ.
-ರಮೇಶ್, ಜಿಲ್ಲಾಧ್ಯಕ್ಷ, ಅಂಗವಿಕಲರ ಕ್ಷೇಮಾಭಿವೃದ್ಧಿ ಸಂಘ, ಚಾಮರಾಜನಗರ
ಸಿಮ್ಸ್ ಆಸ್ಪತ್ರೆಯ ಗೋಡೆಗಳಲ್ಲಿ ಕಳಚಿ ಬೀಳುತ್ತಿರುವ ಟೈಲ್ಸ್‌ಗಳ ಸಮಸ್ಯೆಗೆ ಕಾರಣ ಗೊತ್ತಿಲ್ಲ. ಅದನ್ನು ಸರಿಪಡಿಸಲು ಪಿಡಬ್ಲೂೃ ಇಲಾಖೆ ವತಿಯಿಂದ ಟೆಂಡರ್ ಕರೆಯಲಾಗಿದೆ. ಓಪಿಡಿಯಲ್ಲಿ ಕುಡಿಯುವ ನೀರಿನ ಫಿಲ್ಟರ್ ಅಳವಡಿಸಲು ಕ್ರಮವಹಿಸಲಾಗಿದೆ. ನಿತ್ಯವೂ ಎರಡು ಆಸ್ಪತ್ರೆಗಳನ್ನು ಪರಿಶೀಲನೆ ನಡೆಸಲಾಗುತ್ತಿದ್ದು, ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ.
-ಡಾ.ಮಾರುತಿ, ಆಡಳಿತಾಧಿಕಾರಿ, ಸಿಮ್ಸ್, ಚಾಮರಾಜನಗರ