ಮಹಾ ಶಿವರಾತ್ರಿ ಜಾತ್ರೆ ಹಿನ್ನೆಲೆಯಲ್ಲಿ ಲೊಕ್ಕನಹಳ್ಳಿ ದೊಡ್ಡ ಸಂಪಿಗೇಶ್ವರ ದೇಗುಲದಲ್ಲಿ ಅಚರ್ಕರು ಅಗ್ನಿ ಕುಂಡವನ್ನು ಪ್ರದರ್ಶಿಸಿದರು.  
ಚಾಮರಾಜನಗರ

ದೊಡ್ಡ ಸಂಪಿಗೇಶ್ವರ ಸನ್ನಿಧಿಯಲ್ಲಿ ಅಗ್ನಿಕುಂಡ ದರ್ಶನ

ಪ್ರಮುಖ ಮುಖ್ಯಾಂಶಗಳು

  • ಮಹಾ ಶಿವರಾತ್ರಿ ಜಾತ್ರೆ ಪ್ರಯುಕ್ತ ವಿಶೇಷ ಪೂಜೆ
  • ಹರನಾಮ ಪಠಿಸಿದ ಸಾವಿರಾರು ಭಕ್ತರು
ಹನೂರು: ತಾಲೂಕಿನ ಲೊಕ್ಕನಹಳ್ಳಿ ಗ್ರಾಮದ ದೊಡ್ಡ ಸಂಪಿಗೇಶ್ವರ ಸ್ವಾಮಿ ದೇಗುಲದಲ್ಲಿ ಮಹಾ ಶಿವರಾತ್ರಿ ಜಾತ್ರೆ ಅಂಗವಾಗಿ ಸೋಮವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅಗ್ನಿಕುಂಡ ದರ್ಶನವು ವಿಜೃಂಭಣೆಯಿಂದ ಜರುಗಿತು.
ಮಹಾ ಶಿವರಾತ್ರಿ ಜಾತ್ರೆ ಹಿನ್ನೆಲೆ ದೇಗುಲವನ್ನು ತಳಿರು, ತೋರಣ, ವಿವಿಧ ಪುಷ್ಪ ಹಾಗೂ ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುವಂತೆ ವ್ಯವಸ್ಥೆ ಮಾಡಲಾಗಿತ್ತು. ಶನಿವಾರ ಭಕ್ತರು ದೇಗುಲಕ್ಕೆ ಜಾಗರವನ್ನು ಸಮರ್ಪಿಸಿದ್ದರು. ಭಾನುವಾರ ಗ್ರಾಮದ ಆದಿ ಮಾರಮ್ಮನ ದೇಗುಲದಲ್ಲಿ ಅರ್ಚಕರೊಂದಿಗೆ ಪೂಜೆ ಸಲ್ಲಿಸಿದ ಭಕ್ತರು ಬಾಯಿ ಬೀಗ ಹಾಕಿಸಿಕೊಂಡು ಮುಖ್ಯ ರಸ್ತೆಯಲ್ಲಿ ಮೆರವಣಿಗೆಯ ಮೂಲಕ ಹಾಲರವಿ ಹೊತ್ತು ಸಾಗಿ ಸ್ವಾಮಿಗೆ ಮಜ್ಜನ ಸೇವೆ ನೆರವೇರಿಸಿದರು. ಜಾಗರಣೆಯ ಹಿನ್ನೆಲೆ ರಾತ್ರಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ದೇಗುಲದ ಆವರಣದಲ್ಲಿ ನೆರೆದು ಶಿವನ ಸ್ಮರಣೆ ಮಾಡಿದರು.
ಸೋಮವಾರ ಅಗ್ನಿಕುಂಡ ದರ್ಶನದ ಅಂಗವಾಗಿ ಬೆಳಗಿನ ಜಾವ ದೇವರಿಗೆ ವಿಶೇಷ ಅಭಿಷೇಕವನ್ನು ನೆರವೇರಿಸುವುದರ ಮೂಲಕ ಪೂಜೆ ಸಲ್ಲಿಸಲಾಯಿತು. ಜತೆಗೆ ಬೆಳಗ್ಗೆ 6 ಗಂಟೆಗೆ ದೇಗುಲದ ಮುಂಭಾಗದಲ್ಲಿ ಮೂರು ಕವಡಿನ ಕಂಬದಲ್ಲಿ ಇರಿಸಲಾಗಿದ್ದ ಅಗ್ನಿಕುಂಡಕ್ಕೆ ಉಪವಾಸವಿದ್ದ ಅರ್ಚಕರು ದೀಪ, ದೂಪಧಾರತಿ ಸೇವೆಯನ್ನು ನೆರವೇರಿಸಿ ಪೂಜೆ ಸಲ್ಲಿಸಿದರು. ಬಳಿಕ ನೆರೆದಿದ್ದ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅರ್ಚಕರು ಅಗ್ನಿ ಕುಂಡವನ್ನು ಎತ್ತಿ ಪ್ರದರ್ಶಿಸಿದರು. ಈ ವೇಳೆ ಭಕ್ತರು ಜಯಘೋಷ ಮೊಳಗಿಸಿ ಭಕ್ತಿಭಾವ ಮೆರೆದರು.
ಹನೂರು ಸೇರಿದಂತೆ ಉದ್ದನೂರು, ಬೆಳತ್ತೂರು, ಸಿರಗೋಡು, ಕಂಡಯ್ಯನಪಾಳ್ಯ, ಮಾಲಾಪುರ, ಬೂದಿಪಡಗ, ಪಿ.ಜಿ ಪಾಳ್ಯ ಹಾಗೂ ಈ ಭಾಗದ ಇನ್ನಿತರ ಗ್ರಾಮಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ನೆರೆದಿದ್ದರು. ಅಗ್ನಿಕುಂಡ ದರ್ಶನದ ಬಳಿಕ ದೇಗುಲಕ್ಕೆ ತೆರಳಿ ದೇವರ ದರ್ಶನ ಪಡೆದರು. ಕೆಲವರು ಹಣ್ಣು ಕಾಯಿ ನೀಡಿ ಪೂಜೆ ಸಲ್ಲಿಸಿದರು. ಹನೂರು ಪೊಲೀಸ್ ಠಾಣೆ ವತಿಯಿಂದ ಸೂಕ್ತ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು.