ಚಾಮರಾಜನಗರದ ಜಿಲ್ಲಾ ಪಂಚಾಯಿತಿ ಕೆಡಿಪಿ ಸಭಾಂಗಣದಲ್ಲಿ ಆಯೋಜಿಸಿದ್ದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ವಿನೋತ್‌ಪ್ರಿಯಾ, ಡಿಸಿ ಶ್ರೀರೂಪಾ, ಮೋನಾರೋತ್, ಟಿ.ಜವರೇಗೌಡ, ದಿನೇಶ್ ಕುಮಾರ್ ಮೀನಾ, ಡಿ.ಸಿ. ಶೃತಿ ಹಾಜರಿದ್ದರು.  
ಚಾಮರಾಜನಗರ

ಹಾಸ್ಟಲ್, ವಸತಿ ನಿಲಯಗಳಿಗೆ ಭೇಟಿನೀಡಿ ಪರಿಶೀಲಿಸಿ

ಎ.ಎಸ್.ಮಣಿಕಂಠ

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ವಿನೋತ್‌ಪ್ರಿಯಾ ಸೂಚನೆ
  • ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆ
  • ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ ಕ್ರಮವಹಿಸಲು ಮನವಿ
ಚಾಮರಾಜನಗರ: ವಿವಿಧ ಇಲಾಖೆಗಳಡಿ ನಿರ್ವಹಣೆಯಾಗುತ್ತಿರುವ ವಿದ್ಯಾರ್ಥಿನಿಲಯ, ವಸತಿ ಶಾಲೆಗಳಿಗೆ ಸಂಬಂಧಪಟ್ಟ ಅಧಿಕಾರಿಗಳು ವ್ಯಾಪಕವಾಗಿ ಭೇಟಿ ನೀಡಿ ಗುಣಮಟ್ಟದ ಆಹಾರ, ಮೂಲಸೌಕರ್ಯಗಳು ತಲುಪುತ್ತಿರುವ ಬಗ್ಗೆ ಪರಿಶೀಲಿಸಬೇಕೆಂದು ಪಶು ಪಾಲನೆ ಮತ್ತು ಮೀನುಗಾರಿಕೆ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಹಾಗೂ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಆರ್.ವಿನೋತ್ ಪ್ರಿಯಾ ಸೂಚನೆ ನೀಡಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ನಡೆದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಅದ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಸಮಾಜ ಕಲ್ಯಾಣ, ಪರಿಶಿಷ್ಟ ವರ್ಗಗಳ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವ್ಯಾಪ್ತಿಗೆ ಬರುವ ಹಾಸ್ಟಲ್, ಆಶ್ರಮ ಶಾಲೆ, ವಸತಿ ಶಾಲೆಗಳಿಗೆ ಆಯಾ ಇಲಾಖೆಯ ಹಿರಿಯ ಅಧಿಕಾರಿಗಳು ಭೇಟಿಕೊಟ್ಟು ಅಲ್ಲಿ ನೀಡಲಾಗುತ್ತಿರುವ ಊಟ, ಉಪಹಾರ, ಇನ್ನಿತರೆ ಮೂಲ ಸೌಲಭ್ಯಗಳ ಬಗ್ಗೆ ಸಮಗ್ರವಾಗಿ ಪರಿಶೀಲನೆ ಮಾಡಬೇಕು. ಭೇಟಿ ಮಾಡಿದ ವರದಿಯನ್ನು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯಿತಿ ಸಿಇಓ ಅವರಿಗೆ ಸಲ್ಲಿಸಬೇಕು ಎಂದರು.
ವಿದ್ಯಾರ್ಥಿಗಳು ಹಾಸ್ಟಲ್, ವಸತಿ ಶಾಲೆಗಳಿಗೆ ದಾಖಲಾದ ಮೇಲೆ ವಿದ್ಯಾರ್ಥಿಗಳ ಹಾಜರಾತಿಯನ್ನು ಗಮನಿಸಬೇಕು. ವಿದ್ಯಾರ್ಥಿಗಳು ಗೈರು ಹಾಜರಾದರೆ ಅಥವಾ ಹೊರಗುಳಿದಿದ್ದರೆ ಇದಕ್ಕೆ ಇರಬಹುದಾದ ಕಾರಣಗಳನ್ನು ತಿಳಿದುಕೊಳ್ಳಬೇಕು. ಸಮಸ್ಯೆಗಳಿದ್ದಲ್ಲಿ ತಿಳಿದು ಪರಿಹರಿಸಬೇಕು. ಈ ಹಿಂದಿನ ವರ್ಷದ ಎಸ್‌ಎಸ್‌ಎಲ್ಸಿ, ಪಿಯುಸಿ ಫಲಿತಾಂಶದ ವಿವರ ಪಡೆದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ವಿದ್ಯಾರ್ಥಿಗಳು ಉತ್ತಮ ಅಂಕಗಳೊಂದಿಗೆ ತೇರ್ಗಡೆಯಾಗಿ ಜಿಲ್ಲೆಗೆ ಉತ್ತಮ ಫಲಿತಾಂಶ ಬರಬೇಕು. ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಬೇಕು. ಶಾಲಾ ನೊಂದಣಿಯಲ್ಲಿ ಶೇ. 100ರಷ್ಟು ಪ್ರಮಾಣ ಇರಬೇಕು. ಮಕ್ಕಳ ಹಾಜರಾತಿ ಕುಂಠಿತವಾದರೆ ಅವರ ಪಾಲಕರನ್ನು ಭೇಟಿಮಾಡಿ ಮರಳಿ ಶಾಲೆಗೆ ಕರೆತಂದು ನಿರಂತರವಾಗಿ ಹಾಜರಾಗಲು ಉತ್ತೇಜಿಸಬೇಕು ಎಂದು ಸೂಚಿಸಿದರು.
ಅಂಗನವಾಡಿಗಳಲ್ಲಿ ಮಕ್ಕಳ ಆರೋಗ್ಯ ಹಾಗೂ ದೈಹಿಕ ಬೆಳವಣಿಗೆಯನ್ನು ಗಮನಿಸುವ ಕಾರ್ಯ ಪರಿಣಾಮಕಾರಿಯಾಗಿ ನಡೆಯಬೇಕು. ಮಕ್ಕಳ ಪೌಷ್ಠಿಕತೆ, ಆರೋಗ್ಯ ತಪಾಸಣೆಯಾಗಬೇಕು. ವಯಸ್ಸಿಗನುಗುಣವಾಗಿ ಮಕ್ಕಳು ಇರಬೇಕಾದ ತೂಕ, ಆರೋಗ್ಯ ಸ್ಥಿತಿಯನ್ನು ತಿಳಿಯಲು ವೈದ್ಯರಿಂದ ಕಾಲಕಾಲಕ್ಕೆ ಪರೀಕ್ಷಿಸಬೇಕು. ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು ಎಂದು ತಿಳಿಸಿದರು.
ಬೇಸಿಗೆ ಆರಂಭವಾಗಿದ್ದು ಟ್ಯಾಂಕರ್‌ಗಳಲ್ಲಿ ನೀರು ಪೂರೈಸುವಾಗ ಪಾರದರ್ಶಕ ಕ್ರಮಗಳನ್ನು ಅನುಸರಿಸಬೇಕು. ನಗರ, ಪಟ್ಟಣ, ಗ್ರಾಮಾಂತರ ಪ್ರದೇಶ ಯಾವುದೇ ಇರಲಿ ಆಯಾ ಭಾಗದ ಅಧಿಕಾರಿಗಳು ಕುಡಿಯುವ ನೀರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್ ಮಾತನಾಡಿ, ಕುಡಿಯುವ ನೀರಿಗೆ ತೀವ್ರ ಸಮಸ್ಯೆ ಇರುವ ಗ್ರಾಮಗಳನ್ನು ಗುರುತಿಸಲಾಗಿದೆ. ಅಂತಹ ಕಡೆ ತುರ್ತು ಕ್ರಮಗಳನ್ನು ತೆಗೆದುಕೊಂಡು ನೀರು ಒದಗಿಸಬೇಕಿದೆ. ಮುಂಬರುವ ದಿನಗಳಲ್ಲಿ ಸಮಸ್ಯೆ ಎದುರಾಗಬಹುದಾದ ಗ್ರಾಮಗಳ ವಿವರ ಸಹ ಪಡೆಯಲಾಗುತ್ತಿದೆ ಎಂದರು.
ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ, ಉಪ ವಿಭಾಗಾಧಿಕಾರಿ ದಿನೇಶ್ ಕುಮಾರ್ ಮೀನಾ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಡಿ.ಸಿ. ಶೃತಿ ಹಾಗೂ ಇನ್ನಿತರರು ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು. ಸಮಸ್ಯಾತ್ಮಕ ಗ್ರಾಮಗಳಿಗೆ ವಿಶೇಷ ನಿಗಾ ವಹಿಸಿ ಪರ್ಯಾಯ ವಿಧಾನಗಳ ಮೂಲಕ ನೀರು ಪೂರೈಸಬೇಕು.
ವಿನೋತ್‌ಪ್ರಿಯಾ, ಜಿಲ್ಲಾ ಉಸ್ತವಾರಿ ಕಾರ್ಯದರ್ಶಿ
ಅಮೃತ್ ಯೋಜನೆಯಡಿ ಕೈಗೆತ್ತಿಕೊಂಡಿರುವ ಕುಡಿಯುವ ನೀರಿನ ಯೋಜನೆಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ರಸ್ತೆಗಳಲ್ಲಿ ನೀರು ಹರಿಯದಂತೆ ದುರಸ್ತಿ ಕಾರ್ಯಗಳನ್ನು ಮಾಡಬೇಕು. ಎಲ್ಲಾ ಭಾಗಗಳಲ್ಲಿಯೂ ಸಮರ್ಪಕವಾಗಿ ನೀರು ಸರಬರಾಜು ಮಾಡಬೇಕು.
ಶ್ರೀರೂಪಾ, ಜಿಲ್ಲಾಧಿಕಾರಿ, ಚಾಮರಾಜನಗರ