ಹೊಗೇನಕಲ್ ಫಾಲ್ಸ್‌ಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ನಿರ್ಮಾಣವಾಗಿದ್ದ ಗುಂಡಿಗಳಿಗೆ ಗ್ರಾಮಸ್ಥರೇ ಮಣ್ಣು ಹಾಕಿ ರಿಪೇರಿ ಪಡಿಸಿದರು.
ಹನೂರು: ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣ ಹೊಗೇನಕಲ್ ಫಾಲ್ಸ್‌ಗೆ ತೆರಳುವ ರಸ್ತೆ ಹದಗೆಟ್ಟಿದ ಹಿನ್ನೆಲೆಯಲ್ಲಿ ಬೇಸತ್ತ ಗ್ರಾಮಸ್ಥರು ಶುಕ್ರವಾರ ಗುಂಡಿಗಳಿಗೆ ಮಣ್ಣು ಹಾಕುವುದರ ಮೂಲಕ ತಾತ್ಕಾಲಿಕವಾಗಿ ರಿಪೇರಿ ಮಾಡಿದ್ದಾರೆ.
ಗೋಪಿನಾಥಂನಿಂದ ಹೊಗೇನಕಲ್ ಫಾಲ್ಸ್‌ಗೆ ಸಂಪರ್ಕ ಕಲ್ಪಿಸುವ ಈ ರಸ್ತೆಯು ಕಾವೇರಿ ವನ್ಯಜೀವಿಧಾಮದ ಮೂಲಕ ಹಾದು ಹೋಗಿದ್ದು, ಪ್ರವಾಸಿಗರು ಹಾಗೂ ಆಲಂಬಾಡಿ, ಮಾರಿಕೋಟೈ ಹಾಗೂ ಈ ಭಾಗದ ಇನ್ನಿತರ ಗ್ರಾಮದ ಜನರು ನಿತ್ಯ ಈ ರಸ್ತೆಯ ಮೂಲಕ ಸಂಚರಿಸುತ್ತಾರೆ. ಸಮರ್ಪಕ ಬಸ್ ಸೌಕರ್ಯ ಇಲ್ಲದ ಪರಿಣಾಮ ಪ್ರವಾಸಿಗರು ಕಾರು, ಟೆಂಪೋ ಟ್ರಾವೆಲ್ಲರ್, ಮಿನಿ ಬಸ್ ಹಾಗೂ ಇನ್ನಿತರ ವಾಹನದ ಮೂಲಕ ಹೊಗೇನಕಲ್ ಫಾಲ್ಸ್‌ಗೆ ಆಗಮಿಸುತ್ತಾರೆ.
ಇತ್ತ ಈ ಭಾಗದ ಜನರು ಹೆಚ್ಚಾಗಿ ಬೈಕ್‌ನಲ್ಲಿ ಸಂಚರಿಸುತ್ತಿದ್ದಾರೆ. ಈ ರಸ್ತೆಯನ್ನು ದಶಕದ ಹಿಂದೆ ಡಾಂಬರೀಕರಣಗೊಳಿಸಲಾಗಿತ್ತು. ಆದರೆ ಕಳೆದ ಮೂರ‌್ನಾಲ್ಕು ವರ್ಷಗಳಿಂದ ಈ ರಸ್ತೆಯು ಹದಗೆಟ್ಟಿರುವ ಹಿನ್ನೆಲೆಯಲ್ಲಿ ಅಲ್ಲಲ್ಲಿ ಗುಂಡಿಗಳು ನಿರ್ಮಾಣವಾಗಿದ್ದು, ಜಲ್ಲಿಕಲ್ಲುಗಳು ಆಚೀಚೆ ಹರಡಿಕೊಂಡಿದ್ದವು. ಗುಂಡಿ ಹಾಗೂ ಜಲ್ಲಿಕಲ್ಲುಗಳನ್ನು ತಪ್ಪಿಸಲು ಹೋಗಿ ಬೈಕ್ ಸವಾರರು ಆಯತಪ್ಪಿ ಬಿದ್ದು ಗಾಯಗೊಂಡಿರುವ ಘಟನೆಗಳು ಆಗಾಗ್ಗೆ ಜರುಗುತ್ತಲೇ ಇತ್ತು. ಹಾಗಾಗಿ ಈ ಹದಗೆಟ್ಟ ರಸ್ತೆಯಿಂದ ಸವಾರರು ತುಂಬ ತೊಂದರೆ ಅನುಭವಿಸುವಂತಾಗಿತ್ತು.
ರಸ್ತೆಯನ್ನು ಅಭಿವೃದ್ಧಿಪಡಿಸುವಂತೆ ಗ್ರಾಮಸ್ಥರು ಸಂಬಂಧಪಟ್ಟ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಇತ್ತೀಚೆಗೆ ರಸ್ತೆಯಲ್ಲಿ ಗುಂಡಿಗಳ ಸಂಖ್ಯೆ ಹೆಚ್ಚಾದ ಕಾರಣ ವಾಹನ ಸಂಚಾರಕ್ಕೆ ತುಂಬ ತೊಡಕಾಗಿ ಪರಿಣಮಿಸಿದ್ದರಿಂದ ಗ್ರಾಮಸ್ಥರೇ ಶ್ರಮದಾನದ ಮೂಲಕ ಗುಂಡಿಗಳಿಗೆ ಮಣ್ಣು ಹಾಕುವುದರ ಮೂಲಕ ತಕ್ಕಮಟ್ಟಿಗೆ ರಸ್ತೆ ರಿಪೇರಿ ಮಾಡಿದ್ದಾರೆ. ಅಲ್ಲದೆ ನಿರ್ಲಕ್ಷೃ ವಹಿಸಿದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.