ಭೂಮಿಗೆ ಅಧಿಕೃತ ದಾಖಲೆ ಮಂಜೂರು ಮಾಡಿಸಿಕೊಡುವಂತೆ ಆಗ್ರಹಿಸಿ ಶ್ರೀರಂಗಪಟ್ಟಣದ ತಾಲೂಕು ಕಚೇರಿಯ ಮುಂಭಾಗದಲ್ಲಿ ಮಂಗಳವಾರ ಜಮಾವಣೆಗೊಂಡ ಮಹದೇವಪುರ ಗ್ರಾಮಸ್ಥರು ಭೂಮಿತಾಯಿ ಹೋರಾಟ ಸಮಿತಿಯೊಂದಿಗೆ ಧರಣಿ ನಡೆಸಿದರು. 
ಚಾಮರಾಜನಗರ

ಭೂಮಿತಾಯಿ ಹೋರಾಟ ಸಮಿತಿಯೊಂದಿಗೆ ಗ್ರಾಮಸ್ಥರ ಪ್ರತಿಭಟನೆ

ಕೃಷಿ ಅನುಭವದಲ್ಲಿರುವ ಜಮೀನಿಗೆ ಖಾತೆ ಮಾಡಿಕೊಡಲು ಆಗ್ರಹ

ಶ್ರೀರಂಗಪಟ್ಟಣ: ತಾಲೂಕಿನ ಮಹದೇವಪುರ ಗ್ರಾಮ ವ್ಯಾಪ್ತಿಯ ಸರ್ಕಾರಿ ಭೂಮಿ ಸರ್ವೇ ನಂ.342ರಲ್ಲಿ ಕೃಷಿ ಅನುಭವದಲ್ಲಿರುವ ನೂರಾರು ರೈತಾಪಿ ಕುಟುಂಬದ ಜನರಿಗೆ ಅಕ್ರಮ-ಸಕ್ರಮದಡಿ ಅಗತ್ಯ ದಾಖಲೆಗಳೊಂದಿಗೆ ಅಧಿಕೃತ ಖಾತೆ ಮಾಡಿಕೊಡುವಂತೆ ಆಗ್ರಹಿಸಿ ಗ್ರಾಮದ ಗ್ರಾಮಸ್ಥರು ಭೂಮಿತಾಯಿ ಹೋರಾಟ ಸಮಿತಿಯೊಂದಿಗೆ ಪ್ರತಿಭಟನೆ ನಡೆಸಿದರು.
ಪಟ್ಟಣದ ತಾಲೂಕು ಕಚೇರಿಯ ಮುಂಭಾಗದಲ್ಲಿ ಮಂಗಳವಾರ ಜಮಾವಣೆಗೊಂಡ ಮಹದೇವಪುರ ಗ್ರಾಮಸ್ಥರು ತಾಲೂಕು ಮತ್ತು ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳ ವಿರುದ್ಧ ಸಾಲು ಸಾಲು ಘೋಷಣೆಗಳನ್ನು ಕೂಗಿ ಧರಣಿ ನಡೆಸಿದರು.
ಪ್ರತಿಭಟನೆ ನೇತೃತ್ವ ವಹಿಸಿದ್ದ ರೈತ ನಾಯಕ ಕೆ.ಎಸ್.ನಂಜುಂಡೇಗೌಡ ಮಾತನಾಡಿ, ತಾಲೂಕಿನ ಮಹದೇವಪುರ ಗ್ರಾಮ ವ್ಯಾಪ್ತಿಯ ಸರ್ವೇ ನಂ.342ರಲ್ಲಿ ಸುಮಾರು 700ಕ್ಕೂ ಹೆಚ್ಚು ಸರ್ಕಾರಿ ಭೂಮಿ ಹೊಂದಿದ್ದು, ಇಲ್ಲಿನ ಕೆಲ ಭೂಮಿಯಲ್ಲಿ ಸರಿ ಸುಮಾರು 40 ರಿಂದ 50 ವರ್ಷಗಳಿಂದ ನೂರಾರು ಬಡ ರೈತ ಕುಟುಂಬ ಅನುಭವದಲ್ಲಿದ್ದು ಕೃಷಿ ಸಾಗುವಳಿ ಮಾಡುತ್ತಿದೆ. ಇಂತಹ ಅಕ್ರಮ ಬೇಸಾಯದಲ್ಲಿದ್ದ ರೈತಾಪಿ ಜನರಿಗೆ ಹಿಂದೆ ಅಧಿಕಾರಿದಲ್ಲಿದ್ದ ಸರ್ಕಾರ ಅರ್ಜಿ ಕರೆದು ಕೆಲ ನಿರ್ದಿಷ್ಟ ಫಾರಂ ಭರ್ತಿ ಮೂಲಕ ದರ್ಖಾಸ್ತು ಸಮಿತಿ, ಮಂಜೂರಾತಿ ಸಮಿತಿ ರಚನೆ ಮೂಲಕ ಅಧಿಕೃತಗೊಳಿಸಲು ಘೋಷಣೆ ಮಾಡಿದ್ದು, ಕೆಲವರ ಹೆಸರಲ್ಲಿ ಕೇವಲ ಆರ್‌ಟಿಸಿ ಮಾತ್ರ ಲಭ್ಯವಾಗಿದ್ದರೂ ಇಂದಿಗೂ ದಾಖಲೆ ಇಲ್ಲ.
ನ್ಯಾಯಸಮ್ಮತವಾಗಿ ರೈತರ ಜೀವನಕ್ಕೆ ಬೆನ್ನೆಲುಬಾಗಬೇಕಾಗಿದ್ದು, ಪ್ರಸ್ತುತ ಸಾಮಾನ್ಯ ರೈತರ ಯಾವ ಕೆಲಸ ಕಾರ್ಯಗಳು ಜನಪ್ರತಿನಿಧಿಗಳಿಂದಾಗಲಿ ಅಥವಾ ಅಧಿಕಾರ ವರ್ಗದಿಂದಾಗಲಿ ಹಣ ನೀಡದೆ ಆಗುತ್ತಿಲ್ಲ. ಎಲ್ಲೆಲ್ಲೂ ನಿಯಂತ್ರಣವಿಲ್ಲದ ಭ್ರಷ್ಟಚಾರ ಮಿತಿಮೀರಿದೆ ಎಂದು ಅಸಮಾಧಾನ ಹೊರಹಾಕಿದರು. ಈ ಸಮಸ್ಯೆ ಶೀಘ್ರ ಬಗೆಹರಿಯದಿದ್ದರೆ ಜಿಲ್ಲಾ ಕೇಂದ್ರದಲ್ಲಿ ಉಗ್ರಹೋರಾಟ ಕೈಗೊಳ್ಳುವುದಾಗಿ ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.
ಬಳಿಕ ಉಪತಹಸೀಲ್ದಾರ್ ನಾಗೇಶ್ ಅವರ ಮೂಲಕ ತಮ್ಮ ಮನವಿಯನ್ನು ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತಕ್ಕೆ ರವಾನಿಸಿದರು.
ಮಹದೇವಪುರ ಗ್ರಾಮದ ರೈತರಾದ ರಾಮಕೃಷ್ಣ, ಜವರೇಗೌಡ, ನಿಂಗರಾಜು, ಪುಟ್ಟಸ್ವಾಮಿಗೌಡ, ಸೌಭಾಗ್ಯ, ಗಿರಿಜಾ, ರತ್ನಮ್ಮ ಇತರರು ಸೇರಿದಂತೆ ಭೂಮಿತಾಯಿ ಹೋರಾಟ ಸಮಿತಿಯ ಅಧ್ಯಕ್ಷ ಬಿ.ಸಿ.ಕೃಷ್ಣೇಗೌಡ, ಉಪಾಧ್ಯಕ್ಷ ಮೇಳಾಪುರ ಜಯರಾಮೇಗೌಡ, ಪ್ರಧಾನ ಕಾರ್ಯದರ್ಶಿ ಎಂ.ವಿ.ಕೃಷ್ಣ, ಖಜಾಂಚಿ ಉಂಡುವಾಡಿ ಮಹದೇವು, ದರಸಗುಪ್ಪೆ ಗ್ರಾಪಂ ಮಾಜಿ ಅಧ್ಯಕ್ಷ ರವಿಲಕ್ಷ್ಮಣ, ಹೆಬ್ಬಾಡಿಹುಂಡಿ ಸಿದ್ದೇಗೌಡ, ಮಹಲಿಂಗು ಹಲವರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.