ಬಿದರಹಳ್ಳಿ ಗ್ರಾಮದಲ್ಲಿ ತಲೆದೂರಿರುವ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸುವಂತೆ ಮಹಿಳೆಯರು ಒತ್ತಾಯಿಸಿದರು.
- ಮಾರ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ತಲೆದೂರಿದ ಸಮಸ್ಯೆ
ಹನೂರು: ತಾಲೂಕಿನ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿದರಹಳ್ಳಿ ಗ್ರಾಮದಲ್ಲಿ ತಲೆದೂರಿರುವ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಗ್ರಾಮವು ಸುಮಾರು 1200ಕ್ಕೂ ಹೆಚ್ಚಿನ ಜಸಂಖ್ಯೆಯನ್ನು ಹೊಂದಿದ್ದು, ಬಹುತೇಕ ಕುಟುಂಬಗಳು ಕೂಲಿಯನ್ನೇ ನಂಬಿಕೊಂಡು ಜೀವನ ನಡೆಸುತ್ತಿವೆ. ಆದರೆ ಸಮರ್ಪಕ ಮಳೆಯಾಗದ ಪರಿಣಾಮ ಅಂತರ್ಜಲ ಮಟ್ಟ ಕುಸಿದಿದೆ. ಇದರಿಂದ ತೊಂಬೆಗಳಿಗೆ ನೀರು ಪೂರೈಕೆಯಾಗುತ್ತಿಲ್ಲ. ಇದರಿಂದ ಇಲ್ಲಿನ ಜನರಿಗೆ ಬೇಸಿಗೆ ಮುನ್ನವೇ ಜೀವಜಲದ ಸಮಸ್ಯೆ ಎದುರಾಗಿದೆ.
ಗ್ರಾಪಂ ವತಿಯಿಂದ ಟ್ಯಾಂಕರ್ ಮೂಲಕ 5 ದಿನಕ್ಕೊಮ್ಮೆ ಮಾತ್ರ ಗ್ರಾಮಕ್ಕೆ ನೀರು ಪೂರೈಕೆ ಮಾಡಲಾಗುತ್ತಿದ್ದು, ರಾತ್ರಿ ವೇಳೆ ಮಹಿಳೆಯರು, ಮಕ್ಕಳು ನೀರು ಹಿಡಿಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಪೂರೈಸುತ್ತಿರುವ ನೀರು ಜನಸಂಖ್ಯೆಗೆ ಅನುಗುಣವಾಗಿ ಸಾಕಾಗುತ್ತಿಲ್ಲ. ಮನೆ ಬಳಕೆಗೂ ತೊಂದರೆಯಾಗಿದೆ. ಇದರಿಂದ ಗ್ರಾಮದಲ್ಲಿ ನೀರಿನದ್ದೇ ಒಂದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಬಿಂದಿಗೆ ನೀರಿಗೂ ತುಂಬಾ ತೊಂದರೆ ಅನುಭವಿಸುವಂತಾಗಿದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಇನ್ನಾದರೂ ಇತ್ತ ಗಮನಹರಿಸಿ ಬೋರ್ ಕೊರೆಸುವುದರ ಮೂಲಕ ಗ್ರಾಮಕ್ಕೆ ಸಮರ್ಪಕ ನೀರು ಪೂರೈಕೆ ಮಾಡುವಂತೆ ಗ್ರಾಮದ ಶಿವು ಒತ್ತಾಯಿಸಿದ್ದಾರೆ.