ಉಡುತೊರೆ ಹಳ್ಳ ಜಲಾಶಯದ ನೀರಾವರಿ ಯೋಜನೆ ಅನುಮೋದನೆಯಾದ ಹಿನ್ನೆಲೆ ಹನೂರಿನಲ್ಲಿ ಶಾಸಕ ಎಂ.ಆರ್ ಮಂಜುನಾಥ್ ಅವರನ್ನು ಕಾರ್ಯಕರ್ತರು, ಮುಖಂಡರು ಸನ್ಮಾನಿಸಿದರು. ಉದ್ದನೂರು ಪ್ರಸಾದ್, ಆನಂದ್, ಚಿಕ್ಕಸ್ವಾಮಿ, ವಿಜಯಕುಮಾರ್, ಅಮಿನ್ ಇತರರಿದ್ದರು 
ಚಾಮರಾಜನಗರ

ಕ್ಷೇತ್ರದ ಜನತೆಗೆ ಸಂದ ಜಯ

ಪ್ರಮುಖ ಮುಖ್ಯಾಂಶಗಳು

  • ಶಾಸಕ ಎಂ.ಆರ್. ಮಂಜುನಾಥ್ ಹೇಳಿಕೆ
ಹನೂರು: ಕ್ಷೇತ್ರದ ಉಡುತೊರೆ ಹಳ್ಳ ಜಲಾಶಯದ ನೀರಾವರಿ ಯೋಜನೆಗೆ ಬಜೆಟ್‌ನಲ್ಲಿ ಅನುಮೋದನೆ ದೊರೆತ ಬಳಿಕ ಶನಿವಾರ ರಾತ್ರಿ ಹನೂರಿಗೆ ಆಗಮಿಸಿದ ಶಾಸಕ ಎಂ.ಆರ್. ಮಂಜುನಾಥ್ ಅವರನ್ನು ಕಾರ್ಯಕರ್ತರು ಹಾಗೂ ಮುಖಂಡರು ಅದ್ದೂರಿಯಾಗಿ ಸ್ವಾಗತಿಸಿ ಸನ್ಮಾನಿಸಿದರು.
ರಾತ್ರಿ 8ರ ವೇಳೆಯಲ್ಲಿ ಬೆಂಗಳೂರಿನಿಂದ ಹನೂರಿಗೆ ಆಗಮಿಸುವ ಸುದ್ದಿ ತಿಳಿದು ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದ ಬಳಿ ರೈತರು, ಕಾರ್ಯಕರ್ತರು, ಮುಖಂಡರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಶಾಸಕರು ಆಗಮಿಸುತಿದ್ದಂತೆ ನೀರಾವರಿ ಯೋಜನೆಗೆ ಶ್ರಮಿಸಿದ ಶಾಸಕರ ಕಾರ್ಯವೈಖರಿಯ ಬಗ್ಗೆ ಜಯಘೋಷಗಳನ್ನು ಮೊಳಗಿಸಿದರು. ಹೂವಿನ ಹಾರ, ಶಾಲು ಹೊದಿಸಿ ಸ್ವಾಗತಿಸಿ ಸನ್ಮಾನಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ವೇಳೆ ಸುದ್ದಿಗಾರರೊಂದಿಗೆ ಶಾಸಕರು ಮಾತನಾಡಿ, ತಾಲೂಕಿನಲ್ಲಿ ಕಳೆದ ಹಲವು ವರ್ಷಗಳಿಂದ ಸಮರ್ಪಕ ಮಳೆಯಾಗದ ಪರಿಣಾಮ. ಕೃಷಿ ಹಾಗೂ ಜನ, ಜಾನುವಾರುಗಳ ಕುಡಿಯುವ ನೀರಿಗೆ ತೀವ್ರ ಸಮಸ್ಯೆಯಾಗಿದ್ದು, ಜನತೆ ಸಂಕಷ್ಟದಲ್ಲಿದ್ದರು. ಅದರಲ್ಲೂ ರಾಮಾಪುರ ಹೋಬಳಿ ವ್ಯಾಪ್ತಿಯ ರೈತರು ಹಾಗೂ ಜನರು ತುಂಬಾ ಸಮಸ್ಯೆಯನ್ನು ಎದುರಿಸುತ್ತಿದ್ದರು. ಇದನ್ನು ಮನಗಂಡು ರಾಮನಗುಡ್ಡೆ ಕೆರೆಗೆ ನೀರು ತುಂಬಿಸುವ ವೇಳೆ ಆಗಮಿಸಿದ್ದ ನೀರಾವರಿ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಸಮಗ್ರವಾಗಿ ಚರ್ಚಿಸಲಾಗಿತ್ತು. ಉಡುತೊರೆಹಳ್ಳ ಜಲಾಶಯದ ನೀರಾವರಿ ಯೋಜನೆಗೆ ಆರಂಭದಲ್ಲಿ 330 ಕೋಟಿ ರೂ., ಡಿಪಿಆರ್ ಸಿದ್ದಪಡಿಸಲಾಗಿತ್ತು. ಈ ವೇಳೆ ಮಾರ್ಟಳ್ಳಿ ಹಾಗೂ ಕುರಟ್ಟಿ ಭಾಗದಲ್ಲಿನ ರೈತರಿಂದ ನೀರಾವರಿಯ ಯೋಜನೆಯ ಬಗ್ಗೆ ಕೂಗು ಕೇಳಿ ಬಂದಿತ್ತು. ಈ ಹಿನ್ನೆಲೆ ಡಿಪಿಆರ್ ಅನ್ನು 490 ಕೋಟಿ ರೂ., ಸಿದ್ಧಪಡಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಈ ಬಗ್ಗೆ ಸಿಎಂ ಅವರ ಗಮನಕ್ಕೂ ತರಲಾಗಿತ್ತು. ಡಿಸಿಎಂ ಡಿ.ಕೆ ಶಿವಕುಮಾರ್, ಸಚಿವರಾದ ಡಾ.ಎಚ್. ಸಿ. ಮಹದೇವಪ್ಪ, ಕೆ.ವೆಂಕಟೇಶ್, ಸಂಸದ ಸುನೀಲ್ ಬೋಸ್ ಅವರು ಈ ಯೋಜನೆಯ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸಿದ್ದರು. ಜತೆಗೆ ರೈತ ಸಂಘಟನೆಯು ಸಹ ಕೈಜೋಡಿಸಿತ್ತು. ಇದರ ಫಲ ಸಿಎಂ ಸಿದ್ದರಾಮಯ್ಯ ಅವರು ಬಜೆಟ್‌ನಲ್ಲಿ ಅನುಮೋದನೆ ನೀಡಿರುವುದು ಕ್ಷೇತ್ರದ ಇತಿಹಾಸದಲ್ಲೇ ಐತಿಹಾಸಿಕ ಸುದಿನ. ಕ್ಷೇತ್ರದ ಜನತೆಗೆ ಸಂದ ಜಯ. ರಾಮಾಪುರ ಹೋಬಳಿಯ ಸಮರ್ಪಕ ನೀರಾವರಿ ಸೌಕರ್ಯಕ್ಕೆ ಸಹಕಾರಿಯಾಗಿದೆ. ಈ ಯೋಜನೆ ಶೀಘ್ರ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಈಗಾಗಲೇ ಅಧಿಕಾರಿಗಳೊಂದಿಗೆ ಚರ್ಚಿಸಿದ್ದು, ಇನ್ನಿಲ್ಲದ ಶ್ರಮ ವಹಿಸಿ ಕಾರ್ಯೋನ್ಮುಖರಾಗಿದ್ದೇವೆ ಎಂದು ತಿಳಿಸಿದರು.
ಚಾಮುಲ್ ಮಾಜಿ ಅಧ್ಯಕ್ಷ ಗುರುಮಲ್ಲಪ್ಪ, ಹಾಲಿ ನಿರ್ದೇಶಕ ಉದ್ದನೂರು ಪ್ರಸಾದ್, ಪಿಎಸಿಸಿ ನಿದೇರ್ಶಕ ಮಂಜೇಶ್, ಪಪಂ ಮಾಜಿ ಉಪಾಧ್ಯಕ್ಷ ಆನಂದ್, ಮಾಜಿ ಸದಸ್ಯ ಸಿದ್ದರಾಜು, ಮಂಗಲ ಗ್ರಾಪಂ ಮಾಜಿ ಉಪಾಧ್ಯಕ್ಷ ಕೆ. ಚಿಕ್ಕಸ್ವಾಮಿ, ಮುಖಂಡರಾದ ರಾಜುಗೌಡ, ವಿಜಯಕುಮನಾರ್, ಅಮಿನ್, ಪ್ರಸನ್ನ ಇನ್ನಿತರರಿದ್ದರು.