ಚಾಮರಾಜನಗರದ ನಿವಾಸದಲ್ಲಿ ಶಾಸಕ ಎ.ಆರ್.ಕೃಷ್ಣಮೂರ್ತಿ ಅವರನ್ನು ಆಕ್ಸಿಜನ್ ದುರಂತದ ಸಂತ್ರಸ್ತರು ಗುರುವಾರ ಭೇಟಿ ಮಾಡಿ ಕೃತಜ್ಞತೆ ಸಲ್ಲಿಸಿದರು. ಅಬ್ರಾರ್ ಅಹಮದ್, ಕಲೀಲ್‌ವುಲ್ಲಾ, ಮಹೇಶ್‌ಗಾಳೀಪುರ ಇದ್ದರು.
- ಕೊಳ್ಳೇಗಾಲ ಶಾಸಕ ಎಆರ್‌ಕೆ ಭೇಟಿ ಮಾಡಿದ ಆಕ್ಸಿಜನ್ ದುರಂತದಲ್ಲಿ ನೊಂದ ಕುಟುಂಬ
- ಎ.ಆರ್.ಕೃಷ್ಣಮೂರ್ತಿಗೆ ಸಂತ್ರಸ್ತರು ಭಾವುಕತೆಯ ಕೃತಜ್ಞತೆ ಸಲ್ಲಿಸಿದರು.
ಚಾಮರಾಜನಗರ: ಆಕ್ಸಿಜನ್ ದುರಂತದಲ್ಲಿ ಮೃತಪಟ್ಟಿದ್ದ 25 ಜನರ ಕುಟುಂಬಸ್ಥರಿಗೆ ಸರ್ಕಾರಿ ಉದ್ಯೋಗ ಕೊಡಿಸುವಲ್ಲಿ ಪ್ರಮುಖ ಪಾತ್ರವಹಿಸಿದ ಕೊಳ್ಳೇಗಾಲ ಶಾಸಕ ಎ.ಆರ್.ಕೃಷ್ಣಮೂರ್ತಿಗೆ ಸಂತ್ರಸ್ತರು ಭಾವುಕತೆಯ ಕೃತಜ್ಞತೆ ಸಲ್ಲಿಸಿದರು.
ನಗರದ ನಿವಾಸದಲ್ಲಿ ಗುರುವಾರ ಎಆರ್‌ಕೆ ಅವರನ್ನು ಭೇಟಿ ಮಾಡಿದ ಸಂತ್ರಸ್ತರು ಶಾಸಕರಿಗೆ ಸನ್ಮಾನ ಮಾಡಿ ಸಿಹಿ ತಿನ್ನಿಸಿದರು. ನಮಗೆ ಸರ್ಕಾರಿ ಉದ್ಯೋಗ ಕೊಡಿಸುವ ಸಲುವಾಗಿ ರಾಜ್ಯ ಸರ್ಕಾರದ ಮೇಲೆ ಒತ್ತಡ ತರುವ ಜತೆಗೆ ಸದನದಲ್ಲಿ ಧ್ವನಿ ಎತ್ತಿ, ಸಚಿವ ಸಂಪುಟದಲ್ಲಿ ಒಪ್ಪಿಗೆ ಪಡೆದುಕೊಂಡು ನಮ್ಮೆಲ್ಲರಿಗೂ ಸರ್ಕಾರಿ ಉದ್ಯೋಗ ದೊರೆಯುವವರೆಗೆ ಸಹಕಾರ ನೀಡಿದ್ದಕ್ಕೆ ಆಭಾರಿಗಳಾಗಿದ್ದೇವೆ ಎಂದು ಭಾವುಕರಾದರು.
ಆಡಳಿತ ಪಕ್ಷದ ಶಾಸಕರಾಗಿದ್ದರೂ ಸಹ ಸರ್ಕಾರವನ್ನು ಎಚ್ಚರಿಸುವ ಜತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಸಚಿವರ ಗಮನ ಸೆಳೆದಿದ್ದು ಸಹಾಯವಾಯಿತು. ನಮ್ಮ ಹೋರಾಟಕ್ಕೆ ಬೆನ್ನುಲುಬಾಗಿ ನಿಂತು ನಮಗೆ ಉದ್ಯೋಗವನ್ನು ಕಲ್ಪಿಸಿಕೊಡುವಲ್ಲಿ ತೋರಿದ ಆಸಕ್ತಿ, ಶ್ರಮಕ್ಕೆ ಕೃತಜ್ಞತೆ ಸಲ್ಲಿಸಿದರು.
ಸನ್ಮಾನ ಸ್ವೀಕರಿಸಿದ ಶಾಸಕ ಎ.ಆರ್.ಕೃಷ್ಣಮೂರ್ತಿ ಮಾತನಾಡಿ, ನಮ್ಮ ಸರ್ಕಾರ ನುಡಿದಂತೆ ನಡೆದುಕೊಂಡಿದೆ. ನಾನಾ ಕಾರಣಗಳಿಂದ ನಿಮ್ಮೆಲ್ಲರಿಗೂ ಉದ್ಯೋಗ ದೊರೆತಿರುವುದು ತಡವಾಗಿರಬಹುದು. ಆದರೆ, ಪಕ್ಷದ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ಅವರ ಭರವಸೆ, ಸಿಎಂ, ಡಿಸಿಎಂ ಅವರು ವಿಶೇಷ ಆಸಕ್ತಿಯನ್ನು ಹೊಂದಿದ್ದರು. ಹೀಗಾಗಿ ಇದೊಂದು ವಿಶೇಷ ಪ್ರಕರಣ ಎಂದು ಪರಿಗಣಿಸಿ ನಿಮ್ಮೆಲ್ಲರಿಗೂ ಉದ್ಯೋಗ ನೀಡಿದ್ದಾರೆ. ನಿಮ್ಮ ಹೋರಾಟ ಹಾಗೂ ನಿಮ್ಮೊಂದಿಗೆ ನಿಂತ ಎಸ್‌ಡಿಪಿಐ, ದಲಿತ, ಪ್ರಗತಿಪರ ಸಂಘಟನೆಗಳು, ಕನ್ನಡ ಸಂಘಟನೆಗಳ ಹೋರಾಟವು ಮುಖ್ಯವಾಗಿದೆ. ಎಲ್ಲರಿಗೂ ಒಳ್ಳೆಯದಾಗಲಿ, ಇನ್ನುಳಿದವರಿಗೆ ಉದ್ಯೋಗ ಕೊಡಿಸುವ ಪ್ರಯತ್ನ ಮಾಡೋಣ ಎಂದರು. ಎಸ್‌ಡಿಪಿಐ ಮುಖಂಡರಾದ ಅಬ್ರಾರ್ ಅಹಮದ್, ಕಲೀಲ್ ವುಲ್ಲಾ, ಮಹೇಶ್ ಇದ್ದರು.