ಗುಂಡ್ಲುಪೇಟೆ ತಾಲೂಕಿನ ಹುಲಿಗಿನಮೊರಡಿ ವೆಂಕಟರಮಣಸ್ವಾಮಿ ದೇವಾಲಯ 
ಚಾಮರಾಜನಗರ

15ರಂದು ವೆಂಕಟರಮಣ ಸ್ವಾಮಿ ರಥೋತ್ಸವ

ಪ್ರಮುಖ ಮುಖ್ಯಾಂಶಗಳು

  • ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ದಿವ್ಯರಥೋತ್ಸವ
  • ರಾಜ್ಯದ ಮತ್ತು ನೆರೆಯ ರಾಜ್ಯಗಳಿಂದಲೂ ಅಪಾರ ಭಕ್ತರು ಆಗಮಿಸುವ ನಿರೀಕ್ಷೆ
  • ದೇವಾಲಯಕ್ಕೆ ಸುಣ್ಣಬಣ್ಣಗಳನ್ನು ತುಂಬಿಸಿ ಶುಚಿಗೊಳಿಸಿ ನಾನಾ ವರ್ಣದ ಬಟ್ಟೆಗಳಿಂದ ರಥ ಸಿಂಗಾರ
ಗುಂಡ್ಲುಪೇಟೆ: ತಾಲೂಕಿನ ಹುಲಿಗಿನ ಮುರಡಿ ವೆಂಕಟರಮಣ ಸ್ವಾಮಿ ಬೆಟ್ಟದಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ಜ.15 ರಂದು ಮಕರ ಸಂಕ್ರಾಂತಿಯಂದು ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ದಿವ್ಯರಥೋತ್ಸವ ನಡೆಯಲಿದೆ.
ಪ್ರತಿ ವರ್ಷವೂ ಸಂಕ್ರಾಂತಿಯಂದು ನಡೆಯುವ ರಥೋತ್ಸವಕ್ಕೆ ರಾಜ್ಯದ ಮತ್ತು ನೆರೆಯ ರಾಜ್ಯಗಳಿಂದಲೂ ಅಪಾರ ಭಕ್ತರು ಬರುತ್ತಿದ್ದಾರೆ. ಜ 8ರಿಂದ 18ರವರೆಗೆ ಹತ್ತು ದಿನಗಳ ಕಾಲ ವಿಶೇಷ ಪೂಜಾ ಕೈಂಕರ್ಯಗಳನ್ನು ಕೈಗೊಳ್ಳಲಾಗಿದೆ. ಈ ಅಂಗವಾಗಿ ದೇವಾಲಯಕ್ಕೆ ಸುಣ್ಣಬಣ್ಣಗಳನ್ನು ತುಂಬಿಸಿ ಶುಚಿಗೊಳಿಸಲಾಗಿದ್ದು ಬಿದಿರಿನ ಬಂಬುಗಳು ಹಾಗೂ ನಾನಾ ವರ್ಣದ ಬಟ್ಟೆಗಳಿಂದ ರಥವನ್ನು ಸಿದ್ದಪಡಿಸಲಾಗುತ್ತಿದೆ. 
ಪೌರಾಣಿಕ ಹಿನ್ನೆಲೆ
ಒಮ್ಮೆ ವಾಯು ಹಾಗೂ ಆದಿಶೇಷ ಇಬ್ಬರೂ ನಮ್ಮಲ್ಲಿ ಯಾರು ಶಕ್ತಿಶಾಲಿಗಳು ಎಂದು ಪರೀಕ್ಷಿಸುವ ಜಿದ್ದಿಗೆ ಬಿದ್ದರು. ಆದಿಶೇಷನು ಮೇರು ಪರ್ವತದ ಶಿಖರವನ್ನು ಸುತ್ತಿಕೊಂಡರೆ ವಾಯು ಜೋರಾಗಿ ಗಾಳಿ ಬೀಸಿ ಆದಿಶೇಷನ ಬಂಧನ ಬಿಡಿಸಲು ಪ್ರಯತ್ನಿಸಿದಾಗ ಶಿಖರವೇ ಎರಡು ಭಾಗವಾಗಿ ಮುರಿದು ಬಿದ್ದಿತಂತೆ. ಇದರಲ್ಲಿ ಒಂದು ವೃಷಭಾದ್ರಿ (ಈಗಿನ ತಿರುಪತಿ) ಮತ್ತೊಂದು ಹೋಳು ದಕ್ಷಿಣ ಶೇಷಾದ್ರಿ(ಹುಲಿಗಿನ ಮುರಡಿ) ಎಂದು ಹೆಸರಾಯಿತು. 
ಐತಿಹಾಸಿಕ ಹಿನ್ನೆಲೆ 
ಕ್ರಿ.ಶ.1498ರಲ್ಲಿ ತೆರಕಣಾಂಬಿಯ ಸಾಹುಕಾರ ದಾಸಕೇಶವಶೆಟ್ಟಿ ಈ ದೇವಸ್ಥಾನವನ್ನು ಕಟ್ಟಿಸಿದ್ದರು. ಕ್ರಿ.ಶ. 1620ರಲ್ಲಿ ಚಿಕ್ಕಹಳ್ಳಿ ಅಪ್ಪಣ್ಣಗೌಡರು 4 ಅಂಕ ಕೈಸಾಲೆಯನ್ನು, ಕ್ರಿ.ಶ.1629ರಲ್ಲಿ ತೆರಕಣಾಂಬಿ ದೊಡ್ಡನಾರಣಪ್ಪ ಶ್ರೀ ವೈಕುಂಠನಾರಾಯಣಸ್ವಾಮಿ ಗುಡಿ ಮತ್ತು ಅಮ್ಮನವರ ಗುಡಿಗಳನ್ನು ಕಟ್ಟಿಸಿದ್ದಾರೆ. ಕ್ರಿ.ಶ.1678ರಲ್ಲಿ ತೆರಕಣಾಂಬಿಯ ಚೆನ್ನಯ್ಯಶೆಟ್ಟಿ ಎಂಬುವರು ಪಾತಾಳಮಂಟಪ ಮತ್ತು ಕ್ರಿ.ಶ.1696 ರಲ್ಲಿ ಮೈಸೂರು ಸಂಸ್ಥಾನದ ಚಿಕ್ಕದೇವರಾಜಒಡೆಯರ ಧರ್ಮಪತ್ನಿ ದೊಡ್ಡಮುದ್ದಮ್ಮ ಬೆಟ್ಟದಮೇಲಿನ ಕೋಟೆಯನ್ನು ಕಟ್ಟಿಸಿದರೆಂಬುದಕ್ಕೆ ದಾಖಲೆಗಳಿವೆ.
ದೇವಾಲಯದ ವಿಶೇಷ
300 ಅಡಿಗಳಷ್ಟು ಎತ್ತರದ ಬೆಟ್ಟದ ಮೇಲಿರುವ ದೇವಾಲಯದಲ್ಲಿ ಪೂರ್ವಾಭಿಮುಖವಾಗಿ ಪ್ರಸನ್ನವದನನಾದ ಶ್ರೀನಿವಾಸ ಅಭಯಹಸ್ತನಾಗಿ ಶಂಖ, ಚಕ್ರಗಳನ್ನು ಧರಿಸಿದ್ದಾನೆ. ಎಡಪಾರ್ಶ್ವದಲ್ಲಿ ಅಂಡಾಳ್ ಅಥವಾ ನೀಳದೇವಿ, ಒಳಭಾಗದ ಪಾರ್ಶ್ವದಲ್ಲಿ ವೈಕುಂಠನಾಥಸ್ವಾಮಿ ಶ್ರೀದೇವಿ ಮತ್ತು ಭೂದೇವಿ ಸಹಿತನಾಗಿದ್ದು ಮೂರು ದ್ವಾರಗಳಲ್ಲೂ ದ್ವಾರಪಾಲಕರು ಇದ್ದಾರೆ. ಸ್ಥಳಪುರಾಣದ ಪ್ರಕಾರ ವರಾಹ ಪುರಾಣದ ಉತ್ತರಖಂಡದಲ್ಲಿ ಈ ಬೆಟ್ಟಕ್ಕೆ ಕೃತಯುಗದಲ್ಲಿ ಶೇಷಾದ್ರಿ, ತ್ರೇತಾಯುಗದಲ್ಲಿ ಕನಕಾದ್ರಿ, ದ್ವಾಪರಯುಗದಲ್ಲಿ ವೆಂಕಟಾದ್ರಿ ಹಾಗೂ ಕಲಿಯುಗದಲ್ಲಿ ವ್ಯಾಘ್ರಾದ್ರಿ (ಹುಲಿಗಿನ ಮುರಡಿ) ಎಂದೂ ಕರೆಯಲಾಗಿದೆ.
ತಲುಪುವುದು ಹೇಗೆ?: ಹುಲಿಗಿನ ಮುರಡಿ ವೆಂಕಟರಮಣಸ್ವಾಮಿ ದೇವಸ್ಥಾನವು ತೆರಕಣಾಂಬಿ ಗ್ರಾಮದಿಂದ 8 ಕಿ.ಮೀ. ದೂರದ ಬೆಟ್ಟದ ಮೇಲಿದೆ. ತಾಲೂಕು ಕೇಂದ್ರದಿಂದ ತೆರಕಣಾಂಬಿ ಮಾರ್ಗವಾಗಿ 20 ಕಿ.ಮೀ. ಜಿಲ್ಲಾಕೇಂದ್ರದಿಂದ 30 ಕಿ.ಮೀ. ದೂರದಲ್ಲಿದೆ. ತಿರುಪತಿಗೆ ತೆರಳಲು ಸಾಧ್ಯವಾಗದ ಭಕ್ತರು ಇಲ್ಲಿಗೆ ಬಂದು ತಮ್ಮ ಹರಕೆಗಳನ್ನು ತೀರಿಸಿಕೊಳ್ಳುವುದರಿಂದ ಇದಕ್ಕೆ ಚಿಕ್ಕತಿರುಪತಿ ಎಂದೂ ಕರೆಯಲಾಗುತ್ತಿದೆ.
ಪುಣ್ಯತೀರ್ಥಗಳು
ಈ ದಕ್ಷಿಣ ಶೇಷಾದ್ರಿಗೆ ವ್ಯಾಘ್ರಾಚಲ, ಹುಲಿಗಿನ ಮರಡಿ, ವೆಂಕಟಚಲಗಿರಿ ಎಂದು ಕರೆಯಲಾಗುತ್ತಿದೆ. ಈ ದೇವಾಲಯದ ಆವರಣದಲ್ಲಿ ಪುರಾಣ ಪ್ರಸಿದ್ಧವಾದ ಧನುಸ್ಕೋಟಿ ತೀರ್ಥ, ವೇದ ಪುರಿಷ್ಕಣಿ ತೀರ್ಥ ಮತ್ತು ವೈಕುಂಠ ತೀರ್ಥಗಳೆಂಬ ಕೊಳಗಳಿವೆ. ಶ್ರೀರಾಮನು ಲಂಕೆಗೆ ಹೊರಟ ಸಂದರ್ಭದಲ್ಲಿ ದೇವರ ಅನುಗ್ರಹ ಪಡೆಯಲು ತನ್ನ ಸ್ನಾನಕ್ಕಾಗಿ ಧನಸ್ಸಿನ ತುದಿಯಿಂದ ಚುಚ್ಚಿ ಕಲ್ಲುಬಂಡೆಯಿಂದ ನೀರು ತೆಗೆದ ಸ್ಥಳವೇ ಧನುಷ್ಕೋಟಿ ತೀರ್ಥ, ರಾಕ್ಷಸರಿಂದ ವೇದಗಳನ್ನು ರಕ್ಷಿಸಿದ ಸಂದರ್ಭದಲ್ಲಿ ಪರಮಪುರುಷನ ಶರೀರದಿಂದ ತೊಟ್ಟಿಕ್ಕಿದ ಬೆವರು ಬಿದ್ದ ಸ್ಥಳವೇ ವೇದಪುಷ್ಕರಿಣಿ ತೀರ್ಥ, ವೈಕುಂಠದಿಂದ ಬಂದ ಪರಮಪುರುಷನಿಂದಲೇ ನಿರ್ಮಿತವಾದ ಕೊಳವೇ ವೈಕುಂಠತೀರ್ಥ ಎಂದು ಕರೆಯಲಾಗುತ್ತಿದೆ. 
ಮಾಂಡವ್ಯ ಮಹರ್ಷಿಗಳು ಸ್ಥಾಪಿಸಿದ ಶ್ರೀನಿವಾಸ-
ಮಾಂಡವ್ಯ ಮಹರ್ಷಿಗಳು ಶ್ರೀಮನ್ ನಾರಾಯಣನ ಸಾನ್ನಿಧ್ಯವನ್ನು ಪಡೆಯಲು ದಿವ್ಯ ಕ್ಷೇತ್ರದಲ್ಲಿ ತಪಸ್ಸು ಮಾಡಿದರೂ ಸಿದ್ಧಿಸದ ಕಾರಣ ಅವರು ತಿರುಪತಿಗೆ ಬಂದು ತಪಸ್ಸು ಮಾಡಿದರು. ಇವರ ತಪಸ್ಸಿಗೆ ಮೆಚ್ಚಿದ ನಾರಾಯಣನು ವೃದ್ಧ ಬ್ರಾಹ್ಮಣವೇಷದಲ್ಲಿ ಬಂದು ದಕ್ಷಿಣ ಶೇಷಾದ್ರಿ (ಹುಲಿಗಿನ ಮುರಡಿ)ಯಲ್ಲಿ ಅಷ್ಠಾಕ್ಷರಾನುಸಂಧಾನಪೂರ್ವಕವಾಗಿ ಭಕ್ತಿಯಿಂದ ತಪಸ್ಸು ಮಾಡಿದರೆ ಅವರ ಇಷ್ಟಾರ್ಥ ನೆರವೇರುವುದು ಎಂದು ಹೇಳಿ ಅಂತರ್ಧಾನನಾದನು. ನಂತರ ಮಾಂಡವರು ಇಲ್ಲಿಗೆ ಬಂದು ತಪಸ್ಸನ್ನು ಆಚರಿಸಿ ಶ್ರೀನಿವಾಸನ ದರ್ಶನ ಪಡೆಯುತ್ತಾರೆ ಎಂದು ಹೇಳಲಾಗುತ್ತದೆ. ಒಮ್ಮೆ ಅಗಸ್ತ್ಯ ಮುನಿಗಳು ವೈಕುಂಠತೀರ್ಥದ ಬಳಿ ನೀರುತರಲು ಹೋಗಿದ್ದಾಗ ರಾಕ್ಷಸನೊಬ್ಬ ಅವರನ್ನು ಹಿಡಿದು ಕೊಂಡನಂತೆ. ಆಗ ಅವರು ಶ್ರೀನಿವಾಸನನ್ನು ಪ್ರಾರ್ಥಿಸಿದಾಗ ವ್ಯಾಘ್ರ ರೂಪದಲ್ಲಿ ಬಂದು ರಾಕ್ಷಸನನ್ನು ಸಂಹರಿಸುತ್ತಾನೆ. ಹೀಗೆ ಶ್ರೀನಿವಾಸನು ವ್ಯಾಘ್ರನ ರೂಪದಿಂದ ಬಂದ ಗಿರಿಯು ವ್ಯಾಘ್ರಚಲವೆಂದು ಪ್ರತೀತಿಯಿದೆ.
ವ್ಯಾಸರಿಂದ ಪ್ರತಿಷ್ಟಾಪಿಸಿದ ಆಂಜನೇಯ ಮೂರ್ತಿ
ವ್ಯಾಸರಾಯರು ಭಾರತಾದ್ಯಂತ ಹಲವಾರು ಕಡೆಗಳಂತೆ ಇಲ್ಲಿಯೂ ಆಂಜನೇಯಸ್ವಾಮಿ ಪ್ರತಿಷ್ಠಾಪಿಸಿದ್ದಾರೆ. ದೇವಾಲಯದ ಬಲಭಾಗದಲ್ಲಿ ಬಾಲದಲ್ಲಿ ಗಂಟೆ ಹಾಗೂ ಕೈನಲ್ಲಿ ಪುಷ್ಪ ಹಿಡಿದಿರುವ ಆಳೆತ್ತರದ ಆಂಜನೇಯನ ಮೂರ್ತಿಯಿದೆ.
"

ಮಾಂಡವ್ಯ ಮಹರ್ಷಿಗಳಿಂದ ಪ್ರತಿಷ್ಠಾಪಿಸಿದ ಮೂರ್ತಿಗಳಿಗೆ ಋಷಿಯು ಈಗಲೂ ಮಂಡೂಕ ರೂಪದಲ್ಲಿ ಬಂದು ಸ್ವಾಮಿಯನ್ನು ಆರಾಧಿಸುತ್ತಿದ್ದಾರೆ ಎಂಬ ಪ್ರತೀತಿಯಿದೆ. ಅವಿವಾಹಿತರು ಇಲ್ಲಿ ಬಂದು ಕಂಕಣ ಕಟ್ಟಿಸಿಕೊಂಡರೆ ಕಂಕಣಬಾಗ್ಯ ಹಾಗೂ ಮಕ್ಕಳಿಲ್ಲದ ದಂಪತಿಗಳು ಸಂಕ್ರಾಂತಿಯಂದು ರಥೋತ್ಸವ ಹಾಗೂ ಮೊದಲನೇ ಶ್ರಾವಣ ಶನಿವಾರ ಚಿಕ್ಕ ರಥೋತ್ಸವ ಸಂದರ್ಭದಲ್ಲಿ ಗರುಡಬುತ್ತಿ ಪಡೆದುಕೊಂಡರೆ ಸಂತಾನ ಭಾಗ್ಯ ದೊರಕುತ್ತಿದೆ ಎಂಬ ನಂಬಿಕೆ ಚಾಲ್ತಿಯಲ್ಲಿದೆ.

------ 
ಫೋಟೋಗಳು 5 ಇವೆ
1
2 ಗುಂಡ್ಲುಪೇಟೆ ತಾಲೂಕಿನ ಹುಲಿಗಿನಮೊರಡಿ ದೇವಾಲಯದಲ್ಲಿರುವ ವೆಂಕಟರಮಣಸ್ವಾಮಿಯವರ ಆಳೆತ್ತರದ ಕಲ್ಲಿನ ವಿಗ್ರಹ
 3 ಗುಂಡ್ಲುಪೇಟೆ ತಾಲೂಕಿನ ಹುಲಿಗಿನಮೊರಡಿ ದೇವಾಲಯದಲ್ಲಿರುವ ನೀಲಾದೇವಿಯವರ ಕಲ್ಲಿನ ವಿಗ್ರಹ
4 ಗುಂಡ್ಲುಪೇಟೆ ತಾಲೂಕಿನ ಹುಲಿಗಿನಮೊರಡಿ ದೇವಾಲಯದಲ್ಲಿರುವ ಲಕ್ಷ್ಮೀನರದಿಂಹ ಮೂರ್ತಿ
5 ಗುಂಡ್ಲುಪೇಟೆ ತಾಲೂಕಿನ ಹುಲಿಗಿನಮೊರಡಿ ದೇವಾಲಯದ ಆವರಣದಲ್ಲಿರುವ ವೇದಪುಷ್ಕರಣೀ ತೀರ್ಥಕೊಳ.
6 ದೇವಾಲಯದ ಒಳನೋಟ.