ಗುಂಡ್ಲುಪೇಟೆ ಪಟ್ಟಣದ ಸಿಎಂಎಸ್ ಕಲ್ಯಾಣ ಮಂಟಪದಲ್ಲಿ ಗುಂಡ್ಲುಪೇಟೆ ಬಿಜೆಪಿ ಮಂಡಲದ ವತಿಯಿಂದ ಆಯೋಜಿಸಿದ್ದ ವಿಕಸಿತ ಭಾರತ ಜಿ ರಾಮ್ ಜಿ ತಾಲೂಕು ಸಮಾವೇಶದಲ್ಲಿ ಸಿ.ಎಸ್.ನಿರಂಜನಕುಮಾರ್ ಮಾತನಾಡಿದರು. ಪ್ರೊ.ಕೆ.ಆರ್.ಮಲ್ಲಿಕಾರ್ಜುನಪ್ಪ, ಮಲ್ಲೇಶ್, ಮಹದೇವಪ್ರಸಾದ್, ಸುರೇಶ್ ಇದ್ದರು.
ಗುಂಡ್ಲುಪೇಟೆ: ವಿಬಿ-ಜಿ ರಾಮ್ ಜಿ ನೂತನ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಿಂದ ಈವರೆಗೆ ಮನರೇಗಾದಲ್ಲಿ ನಡೆಯುತ್ತಿದ್ದ ಅಕ್ರಮಗಳಿಗೆ ಕಡಿವಾಣ ಬೀಳಲಿದೆ ಎಂದು ಮಾಜಿ ಶಾಸಕರೂ ಆದ ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಎಸ್.ನಿರಂಜನ್ ಕುಮಾರ್ ತಿಳಿಸಿದರು.
ಪಟ್ಟಣದ ಸಿಎಂಎಸ್ ಕಲ್ಯಾಣ ಮಂಟಪದಲ್ಲಿ ಗುಂಡ್ಲುಪೇಟೆ ಬಿಜೆಪಿ ಮಂಡಲದ ವತಿಯಿಂದ ಆಯೋಜಿಸಿದ್ದ ವಿಕಸಿತ ಭಾರತ ಜಿ ರಾಮ್ ಜಿ ತಾಲೂಕು ಸಮಾವೇಶದಲ್ಲಿ ಮಾತನಾಡಿ, ಕೇಂದ್ರ ಸರ್ಕಾರವು ದೂರದೃಷ್ಟಿಯನ್ನಿರಿಸಿ ಮನರೇಗಾ ಯೋಜನೆಯಲ್ಲಿ ಗಮನಾರ್ಹ ಸುಧಾರಣೆಗಳೊಂದಿಗೆ ಹೆಸರನ್ನು ಬದಲಾಯಿಸಲು ಮುಂದಾಗಿದೆ. ಇದರ ವಿರುದ್ಧ ಕಾಂಗ್ರೆಸ್‌ನಿಂದ ಸುಖಾ ಸುಮ್ಮನೆ ಗೊಂದಲ ಸೃಷ್ಟಿಸುವ ಕೆಲಸ ನಿಯಮಿತವಾಗಿ ನಡೆಯುತ್ತಿದೆ. ತಮ್ಮ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಕೇಂದ್ರ ಸರ್ಕಾರದ ಕಡೆ ಬೊಟ್ಟು ಮಾಡಿ ತೋರಿಸಿ ಜನರ ದಿಕ್ಕು ತಪ್ಪಿಸುವ ಕೆಲಸದಲ್ಲಿ ತೊಡಗಿದ್ದಾರೆ. ಒಮ್ಮೆಲೆ ಮನರೇಗಾ ಬದಲಾವಣೆಯಾದಲ್ಲಿ ಕೆಲಸಕ್ಕೆ ಕತ್ತರಿ ಹಾಕಲಾಗುತ್ತದೆ. ಪ್ರಸ್ತುತ ನಿಗದಿಗೊಂಡಿರುವ ಅವಧಿ ಕಡಿಮೆಯಾಗಲಿದೆ ಎಂಬ ಸುಳ್ಳು ಸುದ್ದಿ ಹರಡಿ ಜನತೆಯ ದಾರಿತಪ್ಪಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸಮಾವೇಶ ನಡೆಸಿ ಸಾಧಕ ಬಾಧಕಗಳ ಕುರಿತು ಅರಿವು ಮೂಡಿಸಲಾಗುತ್ತಿದೆ ಎಂದರು.
ವಿಧಾನ ಪರಿಷತ್ ಮಾಜಿ ಸದಸ್ಯ ಪ್ರೊ.ಕೆ.ಆರ್.ಮಲ್ಲಿಕಾರ್ಜುನಪ್ಪ ಮಾತನಾಡಿ, ಮನರೇಗಾ ಯೋಜನೆಯಲ್ಲಿ ಕೇವಲ 100 ದಿನಗಳ ಕಾಲ ಕೆಲಸ ನೀಡಲಾಗುತ್ತಿತ್ತು. ಬದಲಾದ ಯೋಜನೆಯಲ್ಲಿ 125 ದಿನಗಳಿಗೆ ವಿಸ್ತರಣೆ ಮಾಡಿದ್ದು ಫಲಾನುಭವಿಗಳಿಗೆ ಆರ್ಥಿಕ ಭದ್ರತೆಯನ್ನ ಒದಗಿಸುತ್ತದೆ. ಯೋಜನೆಯು ಗ್ರಾಮೀಣಾಭಿವೃದ್ಧಿ ಮತ್ತು ಉದ್ಯೋಗ ಸೃಷ್ಟಿಯ ಮೂಲಕ ಆತ್ಮನಿರ್ಭರ ಭಾರತದ ನೇರ ಗುರಿಯನ್ನು ಹೊಂದಿದೆ. ಪಾರದರ್ಶಕತೆ ಕಾಪಾಡುವ ಸಲುವಾಗಿ ಬಯೋಮೆಟ್ರಿಕ್ ಕಡ್ಡಾಯಗೊಳಿಸಿದ್ದು ಇದರಿಂದ ಇಷ್ಟು ವರ್ಷಗಳವರೆಗೆ ನಡೆಯುತ್ತಿದ್ದ ಅಕ್ರಮ ತಡೆಗೆ ಸಹಕಾರಿಯಾಗಲಿದೆ ಎಂದು ಹೇಳಿದರು.
ಬಿಜೆಪಿ ಮಂಡಲ ಅಧ್ಯಕ್ಷ ಸಿ.ಮಹದೇವ ಪ್ರಸಾದ್, ಮಾಜಿ ಅಧ್ಯಕ್ಷರಾದ ಎಲ್.ಸುರೇಶ್, ಎನ್.ಮಲ್ಲೇಶ್, ಎಸ್ಸಿ ಮೋರ್ಚಾ ಅಧ್ಯಕ್ಷ ಡಾ.ನವೀನ್ ಮೌರ್ಯ, ಪ್ರಧಾನ ಕಾರ್ಯದರ್ಶಿ ಸುನಿಲ್ ಮೂಡ್ಲು, ಮಂಜು, ನಂಜಪ್ಪ, ಶಿವಪ್ರಸಾದ್, ಅಗತಗೌಡನಹಳ್ಳಿ ಬಸವರಾಜು, ಮಾಡ್ರಹಳ್ಳಿ ಮಲ್ಲೇಶ್, ನಾಗೇಂದ್ರ, ಮಹೇಶ್ ಕಲ್ಲಹಳ್ಳಿ, ಕಾರ್ಯಕರ್ತರು ಹಾಜರಿದ್ದರು.