ಕೌದಳ್ಳಿಯಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಮಾಜಿ ಶಾಸಕ ಆರ್.ನರೇಂದ್ರ ಮಾತನಾಡಿದರು. ಎಸ್. ನಾರಾಯಣ್, ನಂಜುಂಡಸ್ವಾಮಿ, ಮುಕುಂದವರ್ಮ, ಈಶ್ವರ್ ಇತರರಿದ್ದರು.
ಹನೂರು: ಕಾಂಗ್ರೆಸ್ ಸರ್ಕಾರ ಜಾರಿಗೆ ತಂದ ಯೋಜನೆಗಳ ಹೆಸರನ್ನು ಕೇಂದ್ರದ ಸರ್ಕಾರ ಬದಲಿಸುವುದರ ಮೂಲಕ ಜನರು ಹಾಗೂ ಕೂಲಿ ಕಾರ್ಮಿಕರ ಮೇಲೆ ಪ್ರಹಾರ ನಡೆಸುತ್ತಿದೆ ಎಂದು ಮಾಜಿ ಶಾಸಕ ಆರ್.ನರೇಂದ್ರ ಆರೋಪಿಸಿದರು.
ತಾಲೂಕಿನ ಕೌದಳ್ಳಿ ಹಾಗೂ ಎಲ್ಲೇಮಾಳ ಗ್ರಾಮದಲ್ಲಿ ಶನಿವಾರ ಆಯೋಜಿಸಿದ್ದ ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಉಳಿಸಿ, ವಿಬಿ ಜಿ ರಾಮ್ ಜಿ ಅಳಿಸಿ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಾಂಗ್ರೆಸ್ ಸರ್ಕಾರ ಆಹಾರ ಭದ್ರತಾ ಕಾಯ್ದೆ, ಮನರೇಗಾ, ಕಡ್ಡಾಯ ಶಿಕ್ಷಣ ನೀತಿ, ಮಾಹಿತಿ ಹಕ್ಕು ಸೇರಿದಂತೆ ಇನ್ನಿತರೆ ಅನೇಕ ಉತ್ತಮ ಯೋಜನೆಗಳನ್ನು ಜಾರಿಗೊಳಿಸುವುದರ ಮೂಲಕ ಜನತೆಗೆ ಅನುಕೂಲ ಕಲ್ಪಿಸಿತ್ತು. ಮನರೇಗಾ ಯೋಜನೆಯು ಗ್ರಾಮದ ಅಭಿವೃದ್ಧಿಗೆ ಪೂರಕವಾಗಿದ್ದು, ಆರ್ಥಿಕ ಪ್ರಗತಿಗೆ ಸಹಕಾರಿಯಾಗಿತ್ತು. ಕೂಲಿ ಕಾರ್ಮಿಕರ ಜೀವನ ಮಟ್ಟದ ಸುಧಾರಣೆಗೆ ಅನುಕೂಲವಾಗಿತ್ತು. ಹೀಗಿರುವಾಗ ಕೇಂದ್ರ ಬಿಜೆಪಿ ಸರ್ಕಾರ ಮನರೇಗಾ ಯೋಜನೆಯ ಹೆಸರನ್ನು ಬದಲಾಯಿಸಿರುವುದು ಎಷ್ಟರ ಮಟ್ಟಿಗೆ ಸರಿ? ಆದ್ದರಿಂದ ಮನರೇಗಾ ಹೆಸರು ಉಳಿಸಿಕೊಂಡು ಜಿ ರಾಮ್ ಜಿ ಹೆಸರನ್ನು ರದ್ದುಗೊಳಿಸಬೇಕು. ಅಲ್ಲಿಯವರೆಗೂ ಪ್ರತಿ ಹಳ್ಳಿಯಲ್ಲೂ ಜಾಗೃತಿ ಮೂಡಿಸಬೇಕಾಗಿದ್ದು, ಇದಕ್ಕೆ ಪ್ರತಿಯೊಬ್ಬರೂ ಕೈ ಜೋಡಿಸಬೇಕು ಎಂದು ತಿಳಿಸಿದರು.
ಕಾಂಗ್ರೆಸ್ ಪ್ರಚಾರ ಸಮಿತಿ ರಾಜ್ಯ ಸಂಚಾಲಕ ಎಸ್. ನಾರಾಯಣ್ ಮಾತನಾಡಿ, ಯುಪಿಎ ಸರ್ಕಾರ ಗ್ರಾಮೀಣ ವಿಕಾಸ ಗುರಿಯೊಂದಿಗೆ ಮನರೇಗಾ ಯೋಜನೆಯನ್ನು ಜಾರಿಗೆ ತಂದಿತ್ತು. ಇದರಿಂದ ಗ್ರಾಮದ ಅಭಿವೃದ್ಧಿಗೆ ಅಗತ್ಯವಾದ ಕಾಮಗಾರಿಯನ್ನು ಗ್ರಾಮದಲ್ಲೇ ಕೈಗೊಳ್ಳಬಹುದಾಗಿತ್ತು. ಆದರೆ, ಎನ್‌ಡಿಎ ಸರ್ಕಾರ ಹೆಸರು ಬದಲಾಯಿಸಿರುವುದರಿಂದ ಮನರೇಗಾದ ಮೂಲ ಆಶಯವನ್ನೇ ತೆಗೆದು ಹಾಕಿದಂತಾಗಿದೆ. ಜತೆಗೆ ಈ ಹಿಂದೆ ಕೇಂದ್ರ ಸರ್ಕಾರ ಮನರೇಗಾಕ್ಕೆ ಶೇ.90 ಅನುದಾನವನ್ನು ನೀಡುತ್ತಿತ್ತು. ಆದರೆ ಹೊಸ ಯೋಜನೆಯಿಂದ ಶೇ.60ಕ್ಕೆ ಸಿಮೀತಗೊಳಿಸಿದೆ. ಇದರಿಂದ ರಾಜ್ಯಕ್ಕೆ ಆರ್ಥಿಕ ಹೊರೆಯಾಗಲಿದೆ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಹನೂರಿನ ಮುಕುಂದವರ್ಮ, ರಾಮಾಪುರದ ಈಶ್ವರ್, ಚಾಮುಲ್ ಅಧ್ಯಕ್ಷ ನಂಜುಂಡಸ್ವಾಮಿ, ನಿರ್ದೇಶಕ ಶಾಹುಲ್ ಆಹಮದ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ರಾಚಯ್ಯ, ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಮಧುಸೂದನ್, ಕಾಂಗ್ರೆಸ್ ವಕ್ತಾರ ಶಿವಕುಮಾರ್, ಮುಖಂಡ ಚೇತನ್ ದೊರೆರಾಜು ಇದ್ದರು.