ಮಲೆಮಹದೇಶ್ವರ ಬೆಟ್ಟದಲ್ಲಿ ಕೊಳ್ಳೇಗಾಲ ವಾಸವಿ ಪ್ರಥಮ ದರ್ಜೆ ಕಾಲೇಜು ವತಿಯಿಂದ ಆಯೋಜಿಸಿದ್ದ ಎನ್‌ಎಸ್‌ಎಸ್ ಶಿಬಿರದಲ್ಲಿ ಡಾ.ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿದರು. ಅನಿತಾ ಗಿರೀಶ್, ಸಪ್ನಾ ಶೇಖರ್, ರವಿಕುಮಾರ್ ಇದ್ದರು. 
ಚಾಮರಾಜನಗರ

ಶಿಕ್ಷಣದ ಜತೆಗೆ ನೈತಿಕ ಮೌಲ್ಯಗಳು ಅಗತ್ಯ

ಲಲಾಟಾಕ್ಷ ಎಸ್
ಹನೂರು: ಶಿಕ್ಷಣದ ಜತೆಗೆ ನೈತಿಕ ಮೌಲ್ಯಗಳನ್ನು ಕಲಿತು ಜೀವನದಲ್ಲಿ ಅಳವಡಿಸಿಕೊಂಡಾಗ ಭವಿಷ್ಯದಲ್ಲಿ ಉತ್ತಮ ಬದುಕು ರೂಪಿಸಿಕೊಳ್ಳಬಹುದು ಎಂದು ಸಾಲೂರು ಬೃಹನ್ಮಠದ ಪೀಠಾಧಿಪತಿ ಡಾ.ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ತಿಳಿಸಿದರು.
ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಕೊಳ್ಳೇಗಾಲ ವಾಸವಿ ಪ್ರಥಮ ದರ್ಜೆ ಕಾಲೇಜು ವತಿಯಿಂದ ಮಂಗಳವಾರ ಆಯೋಜಿಸಿದ್ಧ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ಶಿಬಿರದಲ್ಲಿ ಅವರು ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಸಮಾಜದಲ್ಲಿ ಅಹಿತಕರ ಘಟನೆಗಳು ಹೆಚ್ಚಾಗುತ್ತಿವೆ. ಇದಕ್ಕೆ ಕಾರಣ ನೈತಿಕ ಮೌಲ್ಯಗಳ ಬಗ್ಗೆ ಅರಿವಿಲ್ಲದಿರುವುದು. ಪ್ರತಿಯೊಬ್ಬರೂ ಶಿಕ್ಷಣದ ಜತೆಗೆ ನೈತಿಕ ಮೌಲ್ಯಗಳಿಗೆ ಹೆಚ್ಚಿನ ಒತ್ತು ನೀಡಬೇಕು. ಆಧ್ಯಾತ್ಮಿಕತೆ ಮನುಷ್ಯನನ್ನು ನಾಗರಿಕನಾಗಿ ರೂಪುಗೊಳಿಸುತ್ತದೆ. ಮನುಷ್ಯನ ಬದುಕನ್ನು ಸಂಪನ್ನಗೊಳಿಸುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಈ ಬಗ್ಗೆ ಮನದಟ್ಟು ಮಾಡಿಕೊಳ್ಳಬೇಕು. ಎನ್‌ಎಸ್‌ಎಸ್ ವಿದ್ಯಾರ್ಥಿಗಳು ಶಿಸ್ತು ಅಳವಡಿಸಿಕೊಳ್ಳುವುದರ ಮೂಲಕ ಸಾಮಾಜಿಕ ಸೇವಾ ಕಾರ್ಯದಲ್ಲಿ ಹೆಚ್ಚು ತೊಡಗಿಸಿಕೊಳ್ಳಬೇಕು ಎಂದು ತಿಳಿಸಿದರು.
ಸಂಯೋಜಕಿ ಅನಿತಾ ಗಿರೀಶ್ ಮಾತನಾಡಿದರು. ಶಿಬಿರಾರ್ಥಿಗಳು ಮ.ಬೆಟ್ಟದ ಪ್ರಮುಖ ರಸ್ತೆಯಲ್ಲಿ ಜಾಥಾ ನಡೆಸಿ ಸ್ವಚ್ಛತೆ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು. ದೇಗುಲದ ಆವರಣದಿಂದ ಸಾಲೂರು ಬೃಹನ್ಮಠದವರೆಗೂ ಶ್ರಮದಾನ ಮಾಡಿದರು. ವಾಸವಿ ಪಪೂ ಕಾಲೇಜಿನ ಸಂಯೋಜಕಿ ಸಪ್ನಾ ಶೇಖರ್, ಪ್ರಾಂಶುಪಾಲ ಜೆ.ರವಿಕುಮಾರ್, ಎನ್‌ಎಸ್‌ಎಸ್ ಸಂಯೋಜನಾಧಿಕಾರಿ ಆನಂದ್, ಉಪನ್ಯಾಸಕರು, ವಿದ್ಯಾರ್ಥಿಗಳು ಇದ್ದರು.