ಗುಂಡ್ಲುಪೇಟೆ ಪಟ್ಟಣದ ಶ್ರೀ ರಾಮೇಶ್ವರ ದೇವಾಲಯದಲ್ಲಿ ಶಿವರಾತ್ರಿ ಅಂಗವಾಗಿ ಶಿವಲಿಂಗಕ್ಕೆ ಭಸ್ಮದಿಂದ ಅಲಂಕಾರ ಮಾಡಲಾಗಿತ್ತು. ಹೆಚ್ಚಿನ ಸಂಖ್ಯೆಯ ಭಕ್ತರು ಆಗಮಿಸಿದ್ದರು.
ಗುಂಡ್ಲುಪೇಟೆ: ತಾಲೂಕಿನ ಪ್ರಮುಖ ಶೈವ ದೇವಾಲಯಗಳಲ್ಲಿ ಶಿವರಾತ್ರಿ ಆಚರಣೆ ಮಾಡಲಾಯಿತು.
ತಾಲೂಕಿನ ಪ್ರಮುಖ ದೇವಾಲಯಗಳಾದ ಕಂದೇಗಾಲ ಸಮೀಪದ ಸ್ಕಂದಗಿರಿ ಪಾರ್ವತಾಂಬೆ ಸೋಮೇಶ್ವರಸ್ವಾಮಿ ದೇವಾಲಯ, ತ್ರಿಯಂಭಕಪುರದ ತ್ರಿಯಂಭಕೇಶ್ವರ ದೇವಾಲಯ, ತೆರಕಣಾಂಬಿಯ ಮೂಲಸ್ಥಾನೇಶ್ವರ ದೇವಾಲಯ ಹಾಗೂ ಪಟ್ಟಣದ ಶ್ರೀ ರಾಮೇಶ್ವರ ದೇವಾಲಯಗಳಲ್ಲಿ ಶಿವರಾತ್ರಿ ಆಚರಣೆ ಮಾಡಲಾಯಿತು.
ಪಟ್ಟಣದ ಪುರಾತನ ಶ್ರೀ ರಾಮೇಶ್ವರ ಸ್ವಾಮಿ ದೇವಾಲಯದಲ್ಲಿ ಮಹಾಶಿವರಾತ್ರಿ ಆಚರಣೆಗೆ ನಾನಾ ರೀತಿಯಲ್ಲಿ ಸಿದ್ದತೆಗಳನ್ನು ಶನಿವಾರದಿಂದಲೇ ಮಾಡಿಕೊಳ್ಳಲಾಗಿತ್ತು. ದೇವಾಲಯದ ಸೆವಾರ್ಥದಾರ ಬಂಗಾರಶೆಟ್ಟರ ಮನೆಯವರು ಲಕ್ಷಾಂತರ ರೂ. ವೆಚ್ಚದಲ್ಲಿ ಚಾವಣಿಯಲ್ಲಿ ಬೆಳೆದಿದ್ದ ಗಿಡಗಂಟಿಗಳು ಹಾಗೂ ಮರದ ಬೇರುಗಳನ್ನು ತೆರವುಗೊಳಿಸಿ ರಿಪೇರಿ ಮಾಡಿಸಿ ಸುಣ್ಣ ಬಣ್ಣ ತುಂಬಿಸಿದ್ದಾರೆ.
ಭಾನುವಾರ ಬೆಳಗಿನ ಜಾವ ಶಿವಲಿಂಗಕ್ಕೆ ಪ್ರಧಾನ ಅರ್ಚಕ ಶಂಕರನಾರಾಯಣ ಜೋಯಿಸ್ ನೇತೃತ್ವದಲ್ಲಿ ಎಳ್ಳೆಣ್ಣೆಯಿಂದ ಅಭ್ಯಂಜನ ಮಾಡಿ ನಂತರ ಹಾಲು, ಮೊಸರು, ಜೇನುತುಪ್ಪ, ಸಕ್ಕರೆ, ಎಳನೀರು, ಮಂಗಳ ದ್ರವ್ಯಗಳಿಂದ ರುದ್ರಾಭಿಷೇಕ ಮಾಡಲಾಯಿತು. ನೂತನ ವಸ್ತ್ರಗಳು ಹಾಗೂ ಭಸ್ಮದಿಂದ ಅಲಂಕರಿಸಿ ಅಷ್ಟೋತ್ತರ ಮಹಾಮಂಗಳಾರತಿ ಮಾಡಿ ಭಕ್ತಾದಿಗಳಿಗೆ ವಿವಿಧ ಹಣ್ಣುಗಳಿಂದ ಪಾನಕ ಹಾಗೂ ಮಸಾಲೆ ಮಜ್ಜಿಗೆಯನ್ನು ವಿತರಿಸಲಾಯಿತು.
ಸಂಜೆ 7 ರಿಂದ ಪ್ರತಿ ಮೂರೂವರೆ ಗಂಟೆಗೊಮ್ಮೆ ನಸುಕಿನವರೆಗೂ ಅಭಿಷೇಕ ಪೂಜೆಗಳನ್ನು ನಡೆಸಲಾಯಿತು. ಉದ್ಯಮಿಗಳಾದ ನಂಜುಂಡಸ್ವಾಮಿ, ವೇಣು, ಆದಿಲ್ ಅಹಮದ್ ಹಾಗೂ ಅಬ್ದುಲ್ಲಾ ಎಂಬುವರು ಪುಳಿಯೋಗರೆ ಮತ್ತು ಮೊಸರನ್ನ ತಯಾರಿಸಲು ತಮ್ಮ ಕೊಡುಗೆ ನೀಡಿದ್ದಾರೆ. ನಾನಾ ಭಕ್ತರು ಸೇರಿ ದಸರೆ ಮಾದರಿಯಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ರಸ್ತೆಯಲ್ಲಿ ವಿದ್ಯುತ್ ದೀಲಾಲಂಕಾರ ಮಾಡಿಸಿದ್ದಾರೆ.