ಹರಳೆ ಜಾಕ್‌ವೆಲ್‌ಗೆ ಶಾಸಕ ಎಂ.ಆರ್.ಮಂಜುನಾಥ್ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿದರು. ನಾಗರಾಜು, ರಾಮೇಗೌಡ ಇತರರಿದ್ದರು.
- ಸಹಕರಿಸಲು ಶಾಸಕ ಎಂ.ಆರ್.ಮಂಜುನಾಥ್ ಮನವಿ
- ಸೆ.2ರವರೆಗೆ ಹರಳೆ ಜಾಕ್‌ವೆಲ್‌ನಲ್ಲಿ ಮೋಟಾರ್ ಅಳವಡಿಕೆ ಕಾಮಗಾರಿ ಪರಿಶೀಲನೆ
ಪಟ್ಟಣಕ್ಕೆ ಕಾವೇರಿ ನೀರು ಪೂರೈಕೆಯಾಗುವ ಹರಳೆ ಜಾಕ್‌ವೆಲ್‌ನಲ್ಲಿ ಮೋಟಾರ್ ಅಳವಡಿಸುವ ಕಾಮಗಾರಿ ಕೈಗೊಂಡಿರುವುದರಿಂದ ಸೆ.2ರವರೆಗೆ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ಜನರು ಸಹಕರಿಸುವಂತೆ ಶಾಸಕ ಎಂ.ಆರ್.ಮಂಜುನಾಥ್ ಹೇಳಿದರು.
ಕೊಳ್ಳೇಗಾಲ ಸಮೀಪದ ಹರಳೆ ಜಾಕ್‌ವೆಲ್‌ಗೆ ಭಾನುವಾರ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿದ ಬಳಿಕ ಮಾತನಾಡಿದರು.
ಪಟ್ಟಣಕ್ಕೆ ಹರಳೆ ಹಾಗೂ ಸಿದ್ದಯ್ಯನಪುರದ ಜಾಕ್‌ವೆಲ್‌ನಿಂದ ಕಾವೇರಿ ಕುಡಿಯುವ ನೀರು ಪೂರೈಕೆಯಾಗುತ್ತಿದೆ. ಆದರೆ ಅಳವಡಿಸಿರುವ 2 ಮೋಟಾರ್‌ಗಳಲ್ಲಿ ಒಂದು ದುರಸ್ತಿಯಾಗಿತ್ತು. ಮತ್ತೊಂದು ಮೋಟಾರ್ ಆಗಾಗ್ಗೆ ದುರಸ್ತಿಯಾಗುತ್ತಿತ್ತು. ರಿಪೇರಿಗೆ ಪಪಂನಿಂದ ಲಕ್ಷಾಂತರ ರೂ.ವ್ಯಯವಾಗುತ್ತಿತ್ತು. ಇದನ್ನು ಮನಗಂಡು ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ 2 ಜಾಕ್‌ವೆಲ್‌ನಲ್ಲೂ 67 ಲಕ್ಷ ರೂ.ವೆಚ್ಚದಲ್ಲಿ ಹೊಸ ಮೋಟಾರ್ ಅಳವಡಿಸಲಾಗುತ್ತಿದೆ. ಜತೆಗೆ 33 ಲಕ್ಷ ರೂ.ವೆಚ್ಚದಲ್ಲಿ ನೀರು ಶುದ್ಧೀಕರಣ ಯಂತ್ರದ ಬದಲಾವಣೆಯ ಕಾರ್ಯವನ್ನು ಕೈಗೊಳ್ಳಲಾಗಿದೆ. ಈ ಕಾರ್ಯ ಸೆ.2ರವರೆಗೆ ನಡೆಯಲಿದೆ. ಆದ್ದರಿಂದ ಪಟ್ಟಣದ ಜನರು ಬೋರ್ ಹಾಗೂ ಟ್ಯಾಂಕರ್ ನೀರನ್ನು ಅಗತ್ಯಕ್ಕೆ ತಕ್ಕಂತೆ ಮಿತವಾಗಿ ಬಳಸುವುದರ ಮೂಲಕ ಸಹಕರಿಸುವಂತೆ ತಿಳಿಸಿದರು.
ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸುವಂತೆ ಗುತ್ತಿಗೆದಾರ ರಾಮೇಗೌಡ ಅವರಿಗೆ ಸೂಚಿಸಿದರು. ಪಪಂ ಇಂಜಿನಿಯರ್ ನಾಗರಾಜು ಇದ್ದರು.