ಕೊಳ್ಳೇಗಾಲ ಪಟ್ಟಣದಲ್ಲಿ ಮಂಗಳವಾರ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಭಾವಚಿತ್ರವುಳ್ಳ ಬೆಳ್ಳಿ ರಥದ ಮೆರವಣಿಗೆಗೆ ಶಾಸಕ ಎ.ಆರ್.ಕೃಷ್ಣಮೂರ್ತಿ ಚಾಲನೆ ನೀಡಿದರು. ಆರ್.ನರೇಂದ್ರ, ಎಂ.ನಂಜುಂಡಸ್ವಾಮಿ, ಬಿ.ತೋಟೇಶ್, ರಾಮಚಂದ್ರ, ಜಯರಾಮ್ ಇತರರು ಇದ್ದರು.  ಕೊಳ್ಳೇಗಾಲ
ಚಾಮರಾಜನಗರ

ಕೊಳ್ಳೇಗಾಲದಲ್ಲಿ ವಾಲ್ಮೀಕಿ ಜಯಂತ್ಯುತ್ಸವ ಸಡಗರ

ಬೆಳ್ಳಿರಥದಲ್ಲಿ ಮಹರ್ಷಿ ಭಾವಚಿತ್ರ ಮೆರವಣಿಗೆ

ಕೊಳ್ಳೇಗಾಲ: ಪಟ್ಟಣದಲ್ಲಿ ಮಂಗಳವಾರ ಮಹರ್ಷಿ ಶ್ರೀ ವಾಲ್ಮೀಕಿ ಜಯಂತ್ಯುತ್ಸವದ ಪ್ರಯುಕ್ತ ಬೆಳ್ಳಿ ರಥದಲ್ಲಿ ಶ್ರೀ ವಾಲ್ಮೀಕಿ ಭಾವಚಿತ್ರ ಮೆರವಣಿಗೆ ವಿಜೃಂಭಣೆಯಿಂದ ನೆರವೇರಿತು.

ಪಟ್ಟಣದ ನಾಯಕರ ಸಮುದಾಯ ಭವನದಲ್ಲಿ ಅಲಂಕೃತಗೊಂಡಿದ್ದ ಬೆಳ್ಳಿ ರಥಕ್ಕೆ ಕೊಳ್ಳೇಗಾಲ ಶಾಸಕ ಎ.ಆರ್. ಕೃಷ್ಣ ಮೂರ್ತಿ ಚಾಲನೆ ನೀಡಿದರು. ಬಳಿಕ, ಪಟ್ಟಣದ ಪ್ರವಾಸಿ ಮಂದಿರ ರಸ್ತೆ, ಎಡಿಬಿ ವೃತ್ತ, ಡಾ.ಬಿ.ಆರ್.ಅಂಬೇಡ್ಕರ್ ರಸ್ತೆ, ಚಿನ್ನದ ಅಂಗಡಿ ಬೀದಿ ರಸ್ತೆ, ಚಿಕ್ಕನಾಯಕರ ಬೀದಿಯ ಮೂಲಕ ಸಾಗಿದ ಮೆರವಣಿಗೆ ಕೊನೆಗೆ ವಾಲ್ಮೀಕಿ ವೃತ್ತ ತಲುಪಿತು. ಮೆರವಣಿಗೆಯಲ್ಲಿ ವೀರಗಾಸೆ ಕುಣಿತ, ಡೊಳ್ಳು ಕುಣಿತ, ಬ್ಯಾಂಡ್ ಸೆಟ್, ತಮಟೆ, ಗಾರುಡಿ ಗೊಂಬೆ, ಮಂಗಳವಾದ್ಯ ಗಮನ ಸೆಳೆಯಿತು. ರಾಮ, ಲಕ್ಷ್ಮಣ, ಆಂಜ ನೇಯ ವೇಷಧಾರಿಗಳು ಆಕರ್ಷಿಸಿದರು. ಡೊಳ್ಳು ಶಬ್ದಕ್ಕೆ ಯುವಕರು, ಮುಖಂಡರು ಕುಣಿದು ಕುಪ್ಪಳಿಸಿದರು.

ಬಳಿಕ ವೇದಿಕೆ ಕಾರ್ಯಕ್ರಮ ಉದ್ದೇಶಿಸಿ ಶಾಸಕ ಎ.ಆರ್.ಕೃಷ್ಣ ಮೂರ್ತಿ ಮಾತನಾಡಿ, ಎಸ್ಸಿ-ಎಸ್ಟಿಗಳಿಗೆ ಪರಿಪೂರ್ಣ ಮೀಸಲಾತಿ ಕಲ್ಪಿಸಲು ಉಪವಾಸ ಸತ್ಯಾಗ್ರಹ ಮಾಡಿದ ****ಪೂಜ್ಯ ವಾಲ್ಮೀಕಿ ಸ್ವಾಮೀಜಿ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಇತ್ತೀಚೆಗೆ ಬೆಂಗಳೂರಿನಲ್ಲಿರುವ ಸಚಿವ ಜಾರಕಿಹೊಳಿ ಅವರ ನಿವಾಸದಲ್ಲಿ ಸ್ವಾಮೀಜಿ ಅವರನ್ನು ಭೇಟಿಯಾದಾಗ ಶೇ.56 ಮೀಸಲಾತಿ ವಿಚಾರದಲ್ಲಿ ಒಗ್ಗೂಡಿ ಹೋರಾಟ ನಡೆಸಿ ಎಂದು ಮಾರ್ಗದರ್ಶನ ನೀಡಿದ್ದಾರೆ ಎಂದರು.

1999-2004ನೇ ಸಾಲಿನಲ್ಲಿ ಎಸ್.ಎಂ.ಕೃಷ್ಣ ಅವರ ಅಧಿಕಾರಾವಧಿಯಲ್ಲಿ ಮನೆ ಮನೆ ಸಮೀಕ್ಷೆ ನಡೆಯಿತು. ಆ ವೇಳೆ ನಾನು ಎರಡನೇ ಬಾರಿ ಶಾಸಕನಾಗಿದ್ದೆ. ಅಂದು ನ್ಯಾಯಯುತ ಸಮೀಕ್ಷೆಯ ವರದಿಯನ್ನು ಒಪ್ಪಿಸಿದರೂ ಹೊರಗಡೆ ಬರಲಿಲ್ಲ. ಎಸ್ಸಿ-ಎಸ್ಟಿ ಜನಾಂಗ ಹೆಚ್ಚಿರುವ ವಾಸ್ತವಕ್ಕೆ ಅನುಗುಣವಾದ ವರದಿ ಇದಾಗಿತ್ತು. ಇದನ್ನು ಹೆಚ್ಚಾಗಿ ಬಿಡಿಸಿ ಹೇಳುವುದಿಲ್ಲ ಎಂದು ಮಾರ್ಮಿಕವಾಗಿ ಹೇಳಿದರು.

ಮೆರವಣಿಗೆಯಲ್ಲಿ ಹನೂರು ಕ್ಷೇತ್ರದ ಮಾಜಿ ಶಾಸಕ ಆರ್.ನರೇಂದ್ರ, ಚಾಮುಲ್ ಅಧ್ಯಕ್ಷ ಎಂ.ನಂಜುಂಡಸ್ವಾಮಿ, ಮಲೈ ಮಹದೇಶ್ವರ ಬೆಟ್ಟ ಪ್ರಾಧಿಕಾರ ನಿರ್ದೇಶಕ ಬಿ.ತೋಟೇಶ್, ಮೈಸೂರು ಮತ್ತು ಚಾಮರಾಜನಗರ ನಾಯಕ ಸಂಘದ ಅಧ್ಯಕ್ಷ ರಾಮಚಂದ್ರ, ಎಂಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಜಯರಾಮ್, ಬಿಜೆಪಿ ಮುಖಂಡ ಎಸ್.ದತ್ತೇಶ್ ಕುಮಾರ್, ನಗರಸಭೆ ಮಾಜಿ ಅಧ್ಯಕ್ಷ ಜಿ.ಸೆಲ್ವರಾಜು, ತಾಲೂಕು ನಾಯಕ ಸಂಘದ ಅಧ್ಯಕ್ಷ ಜಗದೀಶ್ ನಾಯಕ, ಕಾರ್ಯ ದರ್ಶಿ ಶಾಂತರಾಜು, ಜಿಪಂ ಮಾಜಿ ಅಧ್ಯಕ್ಷೆ ಶಿವಮ್ಮಕೃಷ್ಣ, ಜಿಪಂ ಮಾಜಿ ಸದಸ್ಯ ಕೊಪ್ಪಾಳಿ ಮಹದೇವ ನಾಯಕ, ಮುಖಂಡ ಪಾಳ್ಯ ಕೃಷ್ಣ, ಬಿಜೆಪಿ ಎಸ್‌ಟಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಜಯಸುಂದರ್, ನಾಯಕ ಜನಾಂಗದ ಕಸಬಾ ಯಜಮಾನರಾದ ಚಿಕ್ಕಮಾದನಾಯಕ, ಸುಂದರನಾಯಕ, ಈಶ್ವರ, ಮಹದೇವ ನಾಯಕ, ಸುರೇಂದ್ರ, ವೆಂಕಟರಮಣ, ಶಾಂತರಾಜು, ರಾಜೇಶ್, ಗೋವಿಂದರಾಜು, ಶಂಕರ ಇತರರು ಇದ್ದರು.

ನೇಮಕಾತಿಯಲ್ಲಿ ಅನ್ಯಾಯ: ಸ್ವಾಮೀಜಿ ಅವರ ಹೋರಾಟದ ಫಲ ಎಸ್ಸಿ-ಎಸ್ಟಿ ಮೀಸಲಾತಿ ಹೆಚ್ಚಳವಾಗಿರುವ ಸಂದರ್ಭದಲ್ಲಿ ಒಳ ಮೀಸಲಾತಿ ಬಿಲ್ ಮಂಡನೆ ಆಗಿದೆ. ಇದಕ್ಕೂ ಮುನ್ನ ನಡೆದ ವಿಶೇಷ ಅಧಿವೇಶನದಲ್ಲಿ ನಮ್ಮ ಸರ್ಕಾರ ನಾಗಮೋಹನ್ ದಾಸ್ ಅವರ ವರದಿ ಆಧಾರ ಮೇಲೆ ಬಿಲ್ ಮಂಡನೆ ಮಾಡಿತು. ಆದರೆ, ಈ ಬಿಲ್‌ನಿಂದ ಪರಿಶಿಷ್ಟ ಜಾತಿ ಬಲಗೈ ಸಮುದಾಯಕ್ಕೆ ಅನ್ಯಾಯವಾಗಿದೆ. ಅಂದು ನಡೆದ ವಿಶೇಷ ಅಧಿವೇಶನದಲ್ಲಿ ನಾನು ಒಬ್ಬನೇ ಬಿಲ್ ಮಂಡನೆ ಮಾಡಿರುವುದು ಒಪ್ಪಿಗೆ ಇಲ್ಲ ಎಂದು ವಿರೋಧ ವ್ಯಕ್ತಪಡಿಸಿದ್ದೆ. ಆಗ ನನ್ನ ಮೇಲೆ ಟಾರ್ಗೆಟ್ ಮಾಡಿದರು. ಆದರೀಗ ಒಳ ಮೀಸಲಾತಿ ಬಿಲ್ ಮಂಡನೆಯಲ್ಲಿ ಸ್ಪಷ್ಟತೆ ಇಲ್ಲ. ಡಿಪಿಆರ್ ಆರ್ಡರ್ ಆಗಿಲ್ಲ ಎಂದು ಅಧಿಕಾರಿಗಳು ವ್ಯಾಖ್ಯಾನಿಸಿದ್ದು, ಇತ್ತೀಚೆಗೆ ನಡೆದ ಪೊಲೀಸ್ ಕಾನ್‌ಸಟೇಬಲ್ ಹುದ್ದೆ ನೇಮಕಾತಿಯಲ್ಲಿ ಪರಿಶಿಷ್ಟ ಜಾತಿಯ ಎ,ಬಿ,ಸಿ ವರ್ಗಕ್ಕೆ ಅನ್ಯಾಯವಾಗಿದೆ ಎಂದರು.