ಯಳಂದೂರು ತಾಲೂಕಿನ ಬಿಳಿಗಿರಿರಂಗನಬೆಟ್ಟದ ಬಂಗ್ಲೆಪೋಡಿನ ನಿವಾಸಿ ಕೇತಮ್ಮ ಅವರು ರಾಜ್ಯ ಮಟ್ಟದ ವಾಲ್ಮೀಕಿ ಸೇವಾ ಪಶಸ್ತಿ ಪಡೆದುಕೊಂಡಿರುವ ಹಿನ್ನೆಲೆಯಲ್ಲಿ ಎ.ಆರ್.ಕೃಷ್ಣಮೂರ್ತಿ ಅಭಿಮಾನಿ ಬಳಗ ಕಂದಹಳ್ಳಿ ನಂಜುಂಡಸ್ವಾಮಿ, ಪ್ರಭುಪ್ರಸಾದ್, ಗುಂಬಳ್ಳಿರಾಜಣ್ಣ, ಜೆ.ಶ್ರೀನಿವಾಸ ಇನ್ನಿತರರು ಸನ್ಮಾನಿಸಿದರು. ಯಳಂದೂರು
ಚಾಮರಾಜನಗರ

ವಾಲ್ಮೀಕಿ ಪ್ರಶಸ್ತಿ ಪುರಸ್ಕೃತೆ ಕೇತಮ್ಮ ಹೆಮ್ಮೆ

ಎಆರ್‌ಕೆ ಅಭಿಮಾನಿ ಬಳಗದಿಂದ ಸನ್ಮಾನ

ಯಳಂದೂರು: ತಾಲೂಕಿನ ಬಿಳಿಗಿರಿರಂಗನಬೆಟ್ಟದ ಬಂಗ್ಲೆಪೋಡಿನ ನಿವಾಸಿ ಸೋಲಿಗ ಸಮುದಾಯದ ಮಹಿಳೆ ಕೇತಮ್ಮ ಅವರಿಗೆ ಈ ಬಾರಿ ರಾಜ್ಯ ಮಟ್ಟದ ಮಹರ್ಷಿ ವಾಲ್ಮೀಕಿ ಸೇವಾ ಪ್ರಶಸ್ತಿ ಲಭಿಸಿರುವುದು ತಾಲೂಕಿಗೆ ಹೆಮ್ಮೆಯ ವಿಚಾರವಾಗಿದೆ ಎಂದು ಎ.ಆರ್.ಕೃಷ್ಣಮೂರ್ತಿ ಅಭಿಮಾನಿ ಬಳಗದ ಕಂದಹಳ್ಳಿ ನಂಜುಂಡಸ್ವಾಮಿ ತಿಳಿಸಿದರು.

ತಾಲೂಕಿನ ಬಿಳಿಗಿರಿರಂಗನಬೆಟ್ಟದಲ್ಲಿ ಮಂಗಳವಾರ ಎ.ಆರ್.ಕೃಷ್ಣಮೂರ್ತಿ ಅಭಿಮಾನಿ ಬಳಗದಿಂದ ಅವರನ್ನು ಸನ್ಮಾನಿಸಿ ಮಾತನಾಡಿದರು. ಗ್ರಾ.ಪಂ.ಮಟ್ಟದಿಂದ ಆಯ್ಕೆಯಾಗಿ, ಎರಡು ಬಾರಿ ಯರಗಂಬಳ್ಳಿ ತಾಲೂಕು ಪಂಚಾಯಿತಿ ಕ್ಷೇತ್ರದಿಂದ ಸದಸ್ಯರಾಗಿ ಆಯ್ಕೆಯಾಗಿ ತಾಪಂ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಇದಾದ ಬಳಿಕ ಯಳಂದೂರು ಕಸಬಾ ಕ್ಷೇತ್ರದಿಂದ 2011 ರಲ್ಲಿ ಜಿಲ್ಲಾ ಪಂಚಾಯಿತಿಗೆ ಸ್ಪರ್ಧಿಸಿ ಅಲ್ಲೂ ಕೂಡ ಜಯಗಳಿಸಿ ಸದಸ್ಯರಾಗಿ, ಉಪಾಧ್ಯಕ್ಷರಾಗಿ, ಪ್ರಭಾರ ಅಧ್ಯಕ್ಷೆಯಾಗಿಯೂ ಸೇವೆ ಸಲ್ಲಿಸಿದ್ದಾರೆ. ಇದರೊಂದಿಗೆ ಗಿರಿಜನರ ವಿವಿಧೋದ್ದೇಶ ಸಹಕಾರ ಸಂಘದಲ್ಲಿ, ಸೋಲಿಗ ಮಹಿಳಾ ಸ್ವಸಹಾಯ ಸಂಘಗಳಲ್ಲಿ ಕರ್ನಾಟಕ ಕುರಿ ಮತ್ತು ಉಣ್ಣೆ ನಿಗಮದ ರಾಜ್ಯ ಮಟ್ಟದ ನಿರ್ದೇಶಕರಾಗಿ ಬಿಳಿಗಿರಿರಂಗನಾಥಸ್ವಾಮಿ ದೇಗುಲದ ಧರ್ಮದರ್ಶಿ ಮಂಡಳಿ ಸದಸ್ಯರಾಗಿ, ಪ್ರಸ್ತುತ ವ್ಯವಸ್ಥಾಪನಾ ಸಮಿತಿ ಸದಸ್ಯರಾಗಿ ರಾಜ್ಯಮಟ್ಟದ ಅರಣ್ಯ ಕಾರ್ಯಪಡೆಯ ಸಮಿತಿ ಸದಸ್ಯರಾಗಿ ಸೇವೆಯನ್ನು ಸಲ್ಲಿಸಿದ್ದಾರೆ ಎಂದು ಪ್ರಶಂಸಿಸಿದರು.

ರಸ್ತೆ, ಚರಂಡಿ, ಕುಡಿಯುವ ನೀರು, ಸರ್ಕಾರದ ಸೌಲಭ್ಯಗಳನ್ನು ಜನರಿಗೆ ದೊರೆಯುವ ನಿಟ್ಟಿನಲ್ಲಿ ಉತ್ತಮ ಸೇವೆಯನ್ನು ನೀಡಿದ್ದಾರೆ. ಇವರ ಸೇವೆಗೆ ಕರ್ನಾಟಕ ಬುಡಕಟ್ಟು ಜನಾಂಗದ ವತಿಯಿಂದ ನೀಡಲಾಗುವ ಸದ್ಭಾವನಾ ಪ್ರಶಸ್ತಿ, ನಾಗಾಸ್ ವನಶ್ರೀ ಪ್ರಶಸ್ತಿ, ಆದರ್ಶ ಮಹಿಳೆ ಪ್ರಶಸ್ತಿ, ವಿಕಾಸ ಸ್ತ್ರೀ ಪ್ರಶಸ್ತಿ ಸೇರಿದಂತೆ ಹತ್ತು ಹಲವು ಪ್ರಶಸ್ತಿಗಳನ್ನು ಪಡೆದಿರುವ ಅವರು 2009ರಲ್ಲಿ ನವದೆಹಲಿಯಲ್ಲಿ ನಡೆದ ಗಣರಾಜರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸೋಲಿಗ ಜನಾಂಗದ ಪ್ರತಿನಿಧಿಯಾಗಿಯೂ ಭಾಗವಹಿಸಿದ್ದಾರೆ ಎಂದು ಹೇಳಿದರು.

ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನದ ಅಧ್ಯಕ್ಷ ಕಿನಕಹಳ್ಳಿ ಪ್ರಭುಪ್ರಸಾದ್, ಬಿಳಿಗಿರಿರಂಗನಬೆಟ್ಟ ದೇವಸ್ಥಾನ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಗುಂಬಳ್ಳಿ ರಾಜಣ್ಣ, ಸದಸ್ಯ ಜೆ.ಶ್ರೀನಿವಾಸ್, ತಾ.ಪಂ.ಮಾಜಿ ಸದಸ್ಯ ನಾಗರಾಜು ವೈ.ಕೆ.ಮೋಳೆ, ನಾಗೇಂದ್ರ, ಮುನ್ನವಾರ್ ಬೇಗ್, ಶಿವನಂಜಯ್ಯ, ಪ್ರದೀಪ್, ಉಪ್ಪಿನಮೋಳೆ ಗೋವಿಂದ್ ಹಾಜರಿದ್ದರು.