ಹನೂರಿನಲ್ಲಿ ಶಾಸಕ ಎಂ.ಆರ್ ಮಂಜುನಾಥ್ ಅವರು ಮಗುವಿಗೆ ಪಲ್ಸ್ ಪೋಲಿಯೋ ಹನಿ ಹಾಕುವುದರ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದರು. ಕೆ.ಎನ್ ಚೈತ್ರಾ, ಪ್ರಕಾಶ್, ವಿಜಯಕುಮಾರ್, ಜಸ್ಸಿಂಪಾಷ ಇತರರಿದ್ದರು.  
ಚಾಮರಾಜನಗರ

5 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ಹಾಕಿಸಿ

ಪ್ರಮುಖ ಮುಖ್ಯಾಂಶಗಳು

  • ಶಾಸಕ ಎಂ.ಆರ್ ಮಂಜುನಾಥ್ ಹೇಳಿಕೆ
ಹನೂರು: ಪಾಲಕರು 5 ವರ್ಷದೊಳಗಿನ ಮಗುವಿಗೆ ಕಡ್ಡಾಯವಾಗಿ ಪಲ್ಸ್ ಪೋಲಿಯೋ ಹನಿ ಹಾಕಿಸುವುದರ ಮೂಲಕ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಶಾಸಕ ಎಂ.ಆರ್ ಮಂಜುನಾಥ್ ತಿಳಿಸಿದರು.
ಪಟ್ಟಣದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಭಾನುವಾರ ಆರೋಗ್ಯ ಇಲಾಖೆ ವತಿಯಿಂದ ಆಯೋಜಿಸಿದ್ದ ಪೋಲಿಯೋ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ಪಲ್ಸ್ ಪೋಲಿಯೋ ಹನಿ ಜೀವ ರಕ್ಷಣೆ ಹಾಗೂ ಉತ್ತಮ ಆರೋಗ್ಯದ ದೃಷ್ಟಿಯಿಂದ ಪ್ರತಿ ಮಗುವಿಗೂ ಅವಶ್ಯ. ಯಾವುದೇ ಅಡ್ಡ ಪರಿಣಾಮ ಬೀರುವುದಿಲ್ಲ. ಆದ್ದರಿಂದ ಪಾಲಕರು ಮಕ್ಕಳಿಗೆ ಕಡ್ಡಾಯವಾಗಿ 2 ಹನಿ ಲಸಿಕೆ ಹಾಕಿಸಬೇಕು. ಇದರಲ್ಲಿ ಯಾವುದೇ ನಿರ್ಲಕ್ಷ್ಯ ಸಲ್ಲದು. ಈ ಅಭಿಯಾನವು ಶಾಲೆ, ಅಂಗನವಾಡಿ, ಬಸ್ ನಿಲ್ದಾಣದ ಲಸಿಕಾ ಕೇಂದ್ರಗಳಲ್ಲಿ ಆರಂಭವಾಗಿದೆ. ತಾಲೂಕಿನಲ್ಲಿ 133 ಕೇಂದ್ರಗಳನ್ನು ತೆರೆಯಲಾಗಿದೆ. ಪ್ರತಿ ಬೂತ್‌ಗೆ ನಾಲ್ವರಂತೆ 532 ಸಿಬ್ಬಂದಿ ನಿಯೋಜಿಸಲಾಗಿದೆ ಎಂದರು.
ಇನ್ನು 3 ದಿನಗಳ ಕಾಲ ಆರೋಗ್ಯ ಇಲಾಖೆಯ ಸಿಬ್ಬಂದಿ, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತರು ಮನೆಮನೆಗೆ ಆಗಮಿಸಿ ಲಸಿಕೆ ನೀಡಲಿದ್ದಾರೆ. ಆದ್ದರಿಂದ ಮಗುವಿನ ಆರೋಗ್ಯದ ದೃಷ್ಟಿಯಿಂದ ಯಾವುದೇ ಮಗು ಪೋಲಿಯೋ ಲಸಿಕೆಯಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು. ಈ ಬಗ್ಗೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಮುತುವರ್ಜಿ ವಹಿಸಬೇಕು ಎಂದು ತಿಳಿಸಿದರು.
ಮಾದರಿಯಾದ ತಹಸೀಲ್ದಾರ್: ಈ ಸಂಬಂಧ ಅಗತ್ಯ ಮುನ್ನೆಚ್ಚರಿಕೆ ಕ್ರಮವಹಿಸುವಂತೆ ವೈದ್ಯ ಡಾ.ರಾಜೀವ್ ಅವರಿಗೆ ಸೂಚಿಸಿದರು. ಇದಕ್ಕೂ ಮೊದಲು ತಹಸೀಲ್ದಾರ್ ಕೆ.ಎನ್ ಚೈತ್ರಾ ಅವರು ಪುತ್ರ ಲವನೀತ್‌ನನ್ನು ಸರ್ಕಾರಿ ಆಸ್ಪತ್ರೆಗೆ ಕರೆ ತಂದು ಲಸಿಕೆ ಹಾಕಿಸುವುದರ ಮೂಲಕ ಮಾದರಿಯಾದರು. ಪಪಂ ಆರೋಗ್ಯಾಧಿಕಾರಿ ಪ್ರಕಾಶ್, ಮುಖಂಡ ಜಸ್ಸೀಂಪಾಷ, ಅಮಿನ್, ವಿಜಯಕುಮಾರ್, ಚಿನ್ನವೆಂಕಟ, ರಾಜಣ್ಣ, ಮಹದೇವ, ಆರೋಗ್ಯ ಇಲಾಖೆ ಸಿಬ್ಬಂದಿ ಇನ್ನಿತರರು ಇದ್ದರು.