ಬಂಡೀಪುರ ಹುಲಿ ಸಂರಕ್ಷಿತಾರಣ್ಯ ಪ್ರದೇಶದ ನಿರ್ದೇಶಕ ಪ್ರಭಾಕರನ್ 
ಚಾಮರಾಜನಗರ

ಮಾನವ-ಪ್ರಾಣಿ ಸಂಘರ್ಷ ತಡೆಗೆ ತಂತ್ರಜ್ಞಾನ ಬಳಕೆ

ಕಿರಣ್ ಮಾದರಹಳ್ಳಿ

ಪ್ರಮುಖ ಮುಖ್ಯಾಂಶಗಳು

  • ಬಂಡೀಪುರ ನಿರ್ದೇಶಕ ಪ್ರಭಾಕರನ್ ಹೇಳಿಕೆ
  • ಪ್ರೆಸ್ ಕ್ಲಬ್ ಸಂವಾದದಲ್ಲಿ ಮಾಹಿತಿ ಹಂಚಿಕೊಂಡ ಅರಣ್ಯಾಧಿಕಾರಿ
  • ಪ್ರೆಸ್ ಕ್ಲಬ್‌ನಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಡಿ.ವಿ.ಗುಂಡಪ್ಪ ಉಪನ್ಯಾಸ ಮಾಲೆ
ಚಾಮರಾಜನಗರ: ಮಾನವ-ಪ್ರಾಣಿ ಸಂಘರ್ಷ ತಡೆಗೆ ಆಧುನಿಕ ತಂತ್ರಜ್ಞಾನ ಬಳಸಿಕೊಳ್ಳಲಾಗುತ್ತಿದೆ ಎಂದು ಬಂಡೀಪುರ ಹುಲಿ ಸಂರಕ್ಷಿತಾರಣ್ಯ ಪ್ರದೇಶದ ನಿರ್ದೇಶಕ ಪ್ರಭಾಕರನ್ ತಿಳಿಸಿದರು.
ನಗರದ ಪ್ರೆಸ್ ಕ್ಲಬ್‌ನಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಡಿ.ವಿ.ಗುಂಡಪ್ಪ ಉಪನ್ಯಾಸ ಮಾಲೆ - 2ರಡಿ ಮಂಗಳವಾರ ಆಯೋಜಿಸಿದ್ದ ಸಂವಾದದಲ್ಲಿ ಅವರು ಮಾತನಾಡಿದರು. ಬಂಡೀಪುರದಲ್ಲಿ ಎಐ ಕ್ಯಾಮರಾಗಳು ಮತ್ತು ಕಮಾಂಡ್ ಸೆಂಟರ್ ಸ್ಥಾಪನೆ, ಥರ್ಮಲ್ ಡ್ರೋನ್‌ಗಳನ್ನು ಬಳಸಿ ಪ್ರಾಣಿಗಳ ಮೇಲೆ ನಿಗಾವಹಿಸಲಾಗಿದೆ ಎಂದರು.
ಮಾನವ-ಪ್ರಾಣಿ ಸಂಘರ್ಷ ತಪ್ಪಿಸಲು ದೀರ್ಘಾವಧಿಯ ಮತ್ತು ವೈಜ್ಞಾನಿಕ ಪರಿಹಾರಗಳನ್ನು ಅಳವಡಿಸಿಕೊಳ್ಳುತ್ತಿದೆ. ಕಾಡಿನಲ್ಲಿ ಹುಲಿಗಳ ಸಂಖ್ಯೆ ಹೆಚ್ಚಾಗಿದೆ. ವಾಸಸ್ಥಳದ ಕಿರಿದಾಗಿದ್ದು, ಎರಡು ಹುಲಿಗಳ ನಡುವೆ ಸಂಘರ್ಷ ಏರ್ಪಟ್ಟಾಗ ಬಲಿಹೀನ ಹುಲಿ ಸ್ಥಳ ಬದಲಾಯಿಸುತ್ತದೆ. ಈ ವೇಳೆ ಆಹಾರಕ್ಕಾಗಿ ಸಾಕುಪ್ರಾಣಿಗಳನ್ನು ಬೇಟೆಯಾಡುತ್ತದೆ. ಇದನ್ನು ತಡೆಯಲು ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಬಂಡೀಪುರ ವ್ಯಾಪ್ತಿಯಲ್ಲಿ 19 ಹುಲಿಗಳನ್ನು ಸೆರೆ ಹಿಡಿದಿದ್ದು, ಗಾಯಗೊಂಡ 3 ಹುಲಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವಿವರಿಸಿದರು.
ಬೆಂಕಿ ರೇಖೆ ನಿರ್ಮಾಣ: ಬೇಸಿಗೆಯಲ್ಲಿ ಸಂಭವಿಸಬಹುದಾದ ಕಾಡ್ಗಿಚ್ಚು ತಡೆಗೆ ಬೆಂಕಿ ರೇಖೆ ನಿರ್ಮಾಣ ಮಾಡಲಾಗುತ್ತಿದೆ. ಇದಕ್ಕಾಗಿಯೇ 500 ಬೆಂಕಿ ನಂದಿಸುವ ವೀಕ್ಷಕರನ್ನು ನೇಮಕ ಮಾಡಿಕೊಳ್ಳಲಾಗಿದೆ. ಈ ಕಾರ್ಯದಲ್ಲಿ ಅಗ್ನಿಶಾಮಕ ದಳದ ಸಹಕಾರ ಪಡೆದುಕೊಂಡು ಬೆಂಕಿ ನಂದಿಸುವ ಕುರಿತು ತಿಳಿದುಕೊಳ್ಳಲಾಗಿದೆ. ಸಂಘದ ಜಿಲ್ಲಾಧ್ಯಕ್ಷ ಆರ್.ಎನ್.ಸಿದ್ದಲಿಂಗಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಎಸಿಎಫ್ ಗಳಾದ ಸುರೇಶ್, ನವೀನ್ ಕುಮಾರ್, ಸಂಘದ ಪ್ರಧಾನ ಕಾರ್ಯದರ್ಶಿ ಪ್ರಸಾದ್ ಎಸ್.ಲಕ್ಕೂರು ಮತ್ತು ಪತ್ರಕರ್ತರು ಭಾಗವಹಿಸಿದ್ದರು.
ದೇಶದಲ್ಲಿ ಬಂಡೀಪುರ ಪ್ರಸಿದ್ಧಿ:
ವನ್ಯಜೀವಿಗಳು ವಿಶೇಷವಾಗಿ ಹುಲಿಗಳು ಮತ್ತು ಆನೆಗಳು ಬಂಡೀಪುರದಲ್ಲಿ ಹೆಚ್ಚಾಗಿವೆ. 1116 ಆನೆಗಳು, 190ಕ್ಕೂ ಹೆಚ್ಚು ಹುಲಿಗಳು ಮತ್ತು ಉಳಿದ ಪ್ರಾಣಿಗಳೂ ಸಹ ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ಬಂಡೀಪುರ ದೇಶದಲ್ಲೇ 2ನೇ ಸಂರಕ್ಷಿತಾರಣ್ಯ ಪ್ರದೇಶವಾಗಿದೆ.
ಕಾಡನ್ನೇ ನಂಬಿ ಜೀವನ ನಡೆಸುತ್ತಿರುವ ಆದಿವಾಸಿಗಳಿಗೆ ಕಿರು ಉತ್ವನ್ನಗಳ ಸಂಗ್ರಹಕ್ಕೆ ಅವಕಾಶ, ಮಕ್ಕಳ ಶಿಕ್ಷಣಕ್ಕೆ ಸಹಾಯ, ಸ್ವಾವಲಂಬಿ ಜೀವನ ನಡೆಸಲು ಹೊಲಿಗೆ ತರಬೇಲಿ, ಸೋಲಾರ್, ಗ್ಯಾಸ್ ಸಂಪರ್ಕಗಳನ್ನು ಒದಗಿಸಲಾಗಿದೆ.
ಪ್ರಭಾಕರನ್, ಬಂಡೀಪುರ ಹುಲಿ ಸಂರಕ್ಷಿತಾರಣ್ಯ ಪ್ರದೇಶದ ನಿರ್ದೇಶಕ