ಹನೂರಿನಲ್ಲಿ ಶಾಸಕ ಎಂ.ಆರ್.ಮಂಜುನಾಥ್ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಪ್ರಜಾಸೇವೆ ಆಂದೋಲನದಲ್ಲಿ ಸಾರ್ವಜನಿಕರು ಸಮಸ್ಯೆ ಹೇಳಿಕೊಂಡರು. ಚೈತ್ರಾ, ವಿರಾಜ್ ಹೊಸೂರ್, ಪ್ರತಿಭಾ, ವೇಣು ಇತರರಿದ್ದರು.
- ಕುಡಿವ ನೀರು, ಮೇವು ಒದಗಿಸಲು ರೈತರು, ಮಹಿಳೆಯರ ಆಗ್ರಹ
ಹನೂರು: ಗ್ರಾಮಗಳಲ್ಲಿ ಜನ, ಜಾನುವಾರುಗಳಿಗೆ ಕುಡಿಯುವ ನೀರು ಹಾಗೂ ಮೇವನ್ನು ಒದಗಿಸಬೇಕು, ವೃದ್ಧಾಪ್ಯ ವೇತನ ಮಂಜೂರು ಮಾಡಿಸಿ ಕೊಡಬೇಕು, ನಿಗದಿತ ಅವಧಿಯೊಳಗೆ ಇ-ಸ್ವತ್ತು ನೀಡಬೇಕು, ಸ್ಮಶಾನ ಸೌಕರ್ಯ ಕಲ್ಪಿಸಬೇಕು...
ಇದು ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯದ ಭವನದಲ್ಲಿ ಶನಿವಾರ ತಾಲೂಕು ಆಡಳಿತದ ವತಿಯಿಂದ ಶಾಸಕ ಎಂ.ಆರ್.ಮಂಜುನಾಥ್ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಪ್ರಜಾಸೇವೆ ಆಂದೋಲನದಲ್ಲಿ ಸಾರ್ವಜನಿಕರಿಂದ ಕೇಳಿ ಬಂದ ಪ್ರಮುಖ ಒತ್ತಾಯಗಳು.
ರೈತರು, ಮಹಿಳೆಯರು, ವೃದ್ಧರು ಹಾಗೂ ಜನರು ಆಗಮಿಸಿ ಸಮಸ್ಯೆಗಳನ್ನು ಹೇಳಿಕೊಂಡರು. ಕೂಡಲೇ ಅಗತ್ಯ ಕ್ರಮವಹಿಸಿ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಸಂಬಂಧಪಟ್ಟ ಆಯಾ ಇಲಾಖೆಯ ಅಧಿಕಾರಿಗಳಿಗೆ ಶಾಸಕರು ಸೂಚನೆ ನೀಡಿದರು.
ಕಂದಾಯ ಇಲಾಖೆಗೆ ಸಂಬಂಧಿಸಿದಂತೆ 37, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ 21, ಲೋಕೋಪಯೋಗಿ ಇಲಾಖೆಗೆ 8, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಸಾರಿಗೆ, ಭೂ ಮಾಪನ, ಪಶುಪಾಲನಾ, ಸಮಾಜ ಕಲ್ಯಾಣ, ಅರಣ್ಯ ಇಲಾಖೆಗೆ ತಲಾ 3 ಅರ್ಜಿಗಳು, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ 4 ಹಾಗೂ ಇನ್ನಿತರ ಇಲಾಖೆ ಸೇರಿದಂತೆ ಒಟ್ಟು 94 ಅರ್ಜಿಗಳು ಸಾರ್ವಜನಿಕರಿಂದ ಸ್ವೀಕೃತವಾದವು.
ಗ್ರಾಪಂ ಮಟ್ಟದಲ್ಲಿ ಗೋ ಶಾಲೆ ತೆರೆಯಿರಿ:
ಬಿಜೆಪಿ ಮಂಡಲದ ಮಾಜಿ ಅಧ್ಯಕ್ಷ ಸಿದ್ದಪ್ಪ, ರೈತ ಮುಖಂಡ ಶಾಗ್ಯ ಪ್ರಸಾದ್ ಮಾತನಾಡಿ, ಸರ್ಕಾರ ತಾಲೂಕನ್ನು ಬರ ಪೀಡಿತ ಪ್ರದೇಶವಾಗಿ ಘೋಷಿಸಿ 20 ದಿನ ಕಳೆದಿದೆ. ಆದರೆ ಪರಿಹಾರದ ಕ್ರಮಗಳು ಕಾರ್ಯರೂಪಕ್ಕೆ ಬಂದಿಲ್ಲ. ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದ್ದು, ಜನರು ಬಿಂದಿಗೆ ನೀರಿಗೂ ತೊಂದರೆಪಡುತ್ತಿದ್ದಾರೆ. ಜಾನುವಾರುಗಳಿಗೆ ಮೇವಿಲ್ಲದೆ ರೈತರು ಕಷ್ಟಕ್ಕೆ ಸಿಲುಕಿದ್ದಾರೆ. ಆದ್ದರಿಂದ ಈ ಬಗ್ಗೆ ಕ್ರಮವಾಗಬೇಕು ಎಂದು ಒತ್ತಾಯಿಸಿದರು.
ಈ ಬಗ್ಗೆ ಪಶುಪಾಲನಾ ಇಲಾಖೆ ಸಹಾಯಕ ನಿರ್ದೇಶಕ ಡಾ. ಶಿವರಾಜು ಅವರಿಂದ ಮಾಹಿತಿ ಪಡೆದ ಶಾಸಕರು ಗ್ರಾಪಂ ಮಟ್ಟದಲ್ಲಿ ಗೋ ಶಾಲೆಯನ್ನು ತೆರೆದು ಮೇವು ಪೂರೈಸುವಂತೆ ಸೂಚಿಸಿದರು.
ಹನೂರಿನ ರಂಗಮ್ಮ, ಭೈರನತ್ತ ಗ್ರಾಮದ ಬಸವಯ್ಯ ಹಾಗೂ ಇನ್ನಿತರ ಗ್ರಾಮದ ಕೆಲ ಮಹಿಳೆಯರು ಮಾತನಾಡಿ, ಕಳೆದ ಹಲವು ವರ್ಷದಿಂದಲೂ ಸಾಮಾಜಿಕ ಭದ್ರತಾ ಯೋಜನೆಯಡಿ ಪಿಂಚಣಿ ಪಡೆಯುತ್ತಿದ್ದೇವು. ಆದರೆ ಕಳೆದ 7 ತಿಂಗಳಿನಿಂದ ಪಿಂಚಣಿ ಹಣ ಸ್ಥಗಿತಗೊಂಡಿದೆ. ಇದರಿಂದ ಜೀವನ ನಿರ್ವಹಣೆ ಕಷ್ಟವಾಗಿದ್ದು, ತೊಂದರೆಯನ್ನು ಅನುಭವಿಸುತ್ತಿದ್ದೇವೆ. ಆದ್ದರಿಂದ ಪಿಂಚಣಿ ಹಣ ಮಂಜೂರು ಮಾಡಿಸಿಕೊಡುವಂತೆ ಅಳಲು ತೋಡಿಕೊಂಡರು.
ರೈತ ಸಂಘದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಅಮ್ಜಾದ್ ಖಾನ್ ಮಾತನಾಡಿ, ಮಾರ್ಟಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ವಿಬಿ ಜಿ ರಾಮ್ ಜಿ ಯೋಜನೆಯ ಕಾಮಗಾರಿಯನ್ನು ಜೆಸಿಬಿ ಮೂಲಕ ಕೈಗೊಳ್ಳಲಾಗುತ್ತಿದೆ. ಇದರಿಂದ ಜನರಿಗೆ ಉದ್ಯೋಗ ಸಿಗುತ್ತಿಲ್ಲ. ಮ.ಬೆಟ್ಟದಲ್ಲಿ ಪಿಡಬ್ಲ್ಯುಡಿ ರಸ್ತೆಗೆ ವಾಹನಗಳಿಂದ ವಸೂಲಿ ಮಾಡುತ್ತಿದ್ದ ಸುಂಕವನ್ನು ಪ್ರತಿಭಟನೆ ನಡೆಸಿ ಸ್ಥಗಿತಗೊಳಿಸಲಾಗಿತ್ತು. ಈಗ ಮತ್ತೆ ಆರಂಭಿಸಲಾಗಿದೆ. ಈ ಬಗ್ಗೆ ಕಡಿವಾಣ ಹಾಕುವಂತೆ ಒತ್ತಾಯಿಸಿದರೆ, ಕಣ್ಣೂರು ಗ್ರಾಮದ ಬಸವರಾಜಪ್ಪ ಮಾತನಾಡಿ, ಸ್ಮಶಾನ ಸೌಕರ್ಯವಿಲ್ಲದ ಪರಿಣಾಮ ಅಂತ್ಯ ಸಂಸ್ಕಾರವನ್ನು ಜಮೀನುಗಳಲ್ಲಿ ನಡೆಸಲಾಗುತ್ತಿದೆ. ಆದ್ದರಿಂದ ಸ್ಮಶಾನ ಸೌಕರ್ಯ ಕಲ್ಪಿಸುವಂತೆ ಮನವಿ ಮಾಡಿದರು.
ಶಾಗ್ಯದ ರವಿ ಮಾತನಾಡಿ, ಶಾಗ್ಯ ಗ್ರಾಪಂ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದ್ದು, ಬೋರ್ ಕೊರೆಯಿಸುವಂತೆ ಮನವಿ ಮಾಡಿದರು. ಮಂಗಲ ಗ್ರಾಮದ ವಿಶ್ವೇಶ್ವರ ಪ್ರಸಾದ್ ಅವರು ತಾಲೂಕು ಕಚೇರಿಯಲ್ಲಿ ನಿಗದಿತ ಅವಧಿಯೊಳಗೆ ಖಾತೆ ಮಾಡಿಕೊಡುತ್ತಿಲ್ಲ ಎಂದು ದೂರಿದರೆ, ಹನೂರಿನ ಕಿರಣ್ ಅವರು ಪಟ್ಟಣ ಪಂಚಾಯಿತಿಯಲ್ಲಿ ಸಕಾಲಕ್ಕೆ ಇ- ಸ್ವತ್ತು ಸಿಗುತ್ತಿಲ್ಲ. ಇದರಿಂದ ಜನರು ಕಚೇರಿಗೆ ಅಲೆಯುವಂತಾಗಿದೆ. ಇತ್ತ ಅಧಿಕಾರಿಗಳ ನಿರ್ಲಕ್ಷ್ಯದಿಂದ ಅಂಗಡಿ ಮಳಿಗೆಗಳಿಂದ ಬಾಡಿಗೆ ವಸೂಲಾತಿ ಆಗುತ್ತಿಲ್ಲ. ಇದರಿಂದ ಪಪಂಗೆ ಬರುವ ಆದಾಯ ಕೈ ತಪ್ಪಿದೆ ಎಂದು ತಿಳಿಸಿದರು.
ಇದೇ ವೇಳೆ ಹಲವರು ಹೇಳಿಕೊಂಡ ಸಮಸ್ಯೆಗಳಿಗೆ ಅಗತ್ಯ ಕ್ರಮವಹಿಸಿ ಬಗೆಹರಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಶಾಸಕರು ಸೂಚಿಸಿದರು.
ಶಾಸಕ ಎಂ.ಆರ್.ಮಂಜುನಾಥ್ ಮಾತನಾಡಿ, ಸರ್ಕಾರ ಜಾರಿಗೆ ತಂದಿರುವ ಪ್ರಜಾಸೇವೆ ಆಂದೋಲನ ಸಾರ್ವಜನಿಕರ ಸಮಸ್ಯೆಗಳಿಗೆ ನ್ಯಾಯ ದೊರಕಿಸಿ ಕೊಡಿಸುವುದಾಗಿದ್ದು, ಜನರಿಗೆ ಅನುಕೂಲವಾಗಿದೆ. ಇದರಿಂದ ಜನರು ಕಚೇರಿಗೆ ಅಲೆಯುವುದು ತಪ್ಪುತ್ತದೆ. ಸಭೆಯಲ್ಲಿ ಜನರಿಂದ ಕೇಳಿ ಬಂದ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಭರವಸೆ ನೀಡಿದರು. ಅಧಿಕಾರಿಗಳು ಈ ಬಗ್ಗೆ ಕೂಡಲೇ ಅಗತ್ಯ ಕ್ರಮವಹಿಸಿ ಸಮಸ್ಯೆಗಳಿಗೆ ಮುಕ್ತಿ ನೀಡಬೇಕು. ಇದರಲ್ಲಿ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಸಲ್ಲದು ಎಂದು ಸೂಚಿಸಿದರು.
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ರಾಚಯ್ಯ, ತಹಸೀಲ್ದಾರ್ ಕೆ.ಎನ್.ಚೈತ್ರಾ, ಪ್ರಭಾರ ಡಿಸಿಎಫ್ ವಿರಾಜ್ ಹೊಸೂರ್, ತಾಪಂ ಇಒ ವೇಣು, ಬಿಇಒ ಪ್ರತಿಭಾ, ಪಪಂ ಮುಖ್ಯಾಧಿಕಾರಿ ರೇಖಾ, ಇನ್‌ಸ್ಪೆಕ್ಟರ್‌ಗಳಾದ ಆನಂದಮೂರ್ತಿ, ಚಿಕ್ಕರಾಜಶೆಟ್ಟಿ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.