ಗುಂಡ್ಲುಪೇಟೆ ತಾಲೂಕಿನ ಬೇರಂಬಾಡಿ ಗ್ರಾಮದ ಚರಂಡಿಗಳಲ್ಲಿ ಹೂಳು ತುಂಬಿರುವುದು.
- ಬೇರಂಬಾಡಿ ಗ್ರಾಮ
- ಒಳಚರಂಡಿಗಳನ್ನು ಶುಚಿಗೊಳಿಸದ ಪರಿಣಾಮ ಗಬ್ಬೆದ್ದು ನಾರುತ್ತಿದ್ದು
ಗುಂಡ್ಲುಪೇಟೆ: ತಾಲೂಕಿನ ಬೇರಂಬಾಡಿ ಗ್ರಾಮದಲ್ಲಿ ಹಲವಾರು ತಿಂಗಳಿನಿಂದ ಒಳಚರಂಡಿಗಳನ್ನು ಶುಚಿಗೊಳಿಸದ ಪರಿಣಾಮ ಗಬ್ಬೆದ್ದು ನಾರುತ್ತಿದ್ದು, ಸ್ಥಳೀಯ ಗ್ರಾಮಪಂಚಾಯಿತಿ ಕ್ರಮ ಕೈಗೊಳ್ಳದಿರುವ ಕುರಿತು ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗ್ರಾಮದ ಬಹುತೇಕ ಎಲ್ಲ ಬೀದಿಗಳಲ್ಲಿನ ಚರಂಡಿಗಳಲ್ಲಿ ಹೂಳು ತುಂಬಿದೆ. ನಾಯಕ ಸಮುದಾಯ ಬಡಾವಣೆಯ ಸಿದ್ದಪಾಜಿ ದೇವಸ್ಥಾನ ಬಳಿಯ ಒಳಚರಂಡಿ ಸಂಪೂರ್ಣವಾಗಿ ಮುಚ್ಚಿ ಹೋಗಿದೆ. ಪರಿಣಾಮ ಮಡುಗಟ್ಟಿನಿಂತ ಕೊಳಚೆನೀರಿನಲ್ಲಿ ಸೊಳ್ಳೆಗಳ ಸಂತತಿ ಹೆಚ್ಚುತ್ತಿದೆ. ಈ ದುರ್ವಾಸನೆಯಿಂದ ಅಕ್ಕಪಕ್ಕದ ಮನೆಯವರು ವಾಸಿಸಲು ಸಾಧ್ಯವಾಗದ ಸ್ಥಿತಿ ಇದೆ. ಅಲ್ಲದೆ ಈ ಬೀದಿಯಲ್ಲಿ ಓಡಾಡುವ ಸಾರ್ವಜನಿಕರು ಮೂಗುಮುಚ್ಚಿ ಓಡಾಡಬೇಕಿದೆ. ಸಣ್ಣ ಮಕ್ಕಳು ಹಾಗೂ ಶಾಲೆಗಳಿಗೆ ಹೋಗುವ ವಿದ್ಯಾರ್ಥಿಗಳು ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾರೆ.
ಈ ಬಗ್ಗೆ ಹಲವಾರು ಬಾರಿ ಗ್ರಾಮ ಪಂಚಾಯಿತಿಗೆ ಮನವಿ ಮಾಡಲಾಯಿತಾದರೂ ಯಾವುದೇ ಉಪಯೋಗವಾಗಿಲ್ಲ. ಈಗಾಗಲೇ ಬೇಸಿಗೆ ಆರಂಭವಾಗಿದ್ದು ಸೊಳ್ಳೆಗಳ ಹೆಚ್ಚಳದಿಂದ ಸಾಂಕ್ರಾಮಿಕ ರೋಗಗಳು ವ್ಯಾಪಿಸುವ ಸಂಭವವಿದೆ. ಆದ್ದರಿಂದ ಇನ್ನಾದರೂ ಸಂಬಂಧಿಸಿದವರು ಚರಂಡಿಗಳ ಹೂಳೆತ್ತಿಸಿ ಸ್ವಚ್ಛತೆ ಕಾಪಾಡಲು ಕ್ರಮಕೈಗೊಳ್ಳಬೇಕು ಎಂದು ಗ್ರಾಮದ ನಿವಾಸಿಗಳಾದ ವೇಣುಗೋಪಾಲ ಹಾಗೂ ಪುನೀತ್ ಕುಮಾರ್ ಒತ್ತಾಯಿಸಿದ್ದಾರೆ.
ಪಂಚಾಯಿತಿ ವ್ಯಾಪ್ತಿಯಲ್ಲಿ ಪೌರಕಾರ್ಮಿಕರಿಲ್ಲದಿರುವುದರಿಂದ ಚರಂಡಿಗಳಲ್ಲಿ ಹೂಳೆತ್ತಿಸಲು ಸಾಧ್ಯವಾಗಿಲ್ಲ. ಅಲ್ಲದೆ ಹೆಚ್ಚಿನ ಊರುಗಳಲ್ಲಿ ಜಾತ್ರೆ ನಡೆಯುತ್ತಿರುವುದರಿಂದ ಪೌರಕಾರ್ಮಿಕರು ದೊರಕುತ್ತಿಲ್ಲ. ಈ ಬಗ್ಗೆ ಆಡಳಿತಾಧಿಕಾರಿಗಳ ಗಮನಕ್ಕೆ ತಂದು ಇನ್ನು ಕೆಲವೇ ದಿನಗಳಲ್ಲಿ ಒಳಚರಂಡಿಗಳ ಸ್ವಚ್ಛತೆ ಮಾಡುವ ಕೆಲಸ ಮಾಡಿಸಲಾಗುವುದು.
ರವಿಚಂದ್ರ ಪಿಡಿಒ, ಬೇರಂಬಾಡಿ ಗ್ರಾಮಪಂಚಾಯಿತಿ