ಚಾಮರಾಜನಗರ ತಾಲೂಕಿನ ಹೊನ್ನಹಳ್ಳಿ ಸಮೀಪ ಬೋನಿಗೆ ಬಿದ್ದ ಚಿರತೆ
- ಹೊನ್ನಹಳ್ಳಿ, ನಾಗಮಲೆ ಬಳಿ ಬೋನಿನಲ್ಲಿ ಬಂಧಿ
- ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಎರಡು ಚಿರತೆಗಳ ಸೆರೆ ಸಿಕ್ಕಿವೆ
ಚಾಮರಾಜನಗರ: ಜಿಲ್ಲೆಯಲ್ಲಿ ಎರಡು ಪ್ರತ್ಯೇಕ ಕಡೆಗಳಲ್ಲಿ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಎರಡು ಚಿರತೆಗಳ ಸೆರೆ ಸಿಕ್ಕಿವೆ.
ತಾಲೂಕಿನ ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯ ಪ್ರದೇಶದ ಪ್ರಾದೇಶಿಕ ವಲಯ ವ್ಯಾಪ್ತಿಯ ಹರದನಹಳ್ಳಿ ಹೋಬಳಿಯ ಹೊನ್ನಹಳ್ಳಿದ ಬಳಿ ಇಟ್ಟಿದ್ದ ಬೋನಿನಲ್ಲಿ ಸುಮಾರು 5 ವರ್ಷದ ಗಂಡು ಚಿರತೆ ಸೆರೆಯಾಗಿದೆ. ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಚಿರತೆಯನ್ನು ಸುರಕ್ಷಿತವಾಗಿ ಸೆರೆಹಿಡಿದಿದ್ದಾರೆ. ಪಶು ವೈದ್ಯರ ತಪಾಸಣೆ ನಡೆಸಿದ ನಂತರ ಚಿರತೆಯು ಆರೋಗ್ಯವಾಗಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯ ಮಾರ್ಗಸೂಚಿಗಳ ಅನ್ವಯ ಕಾಡಿಗೆ ಬಿಡುಗಡೆ ಮಾಡಲಾಯಿತು.
ನಾಗಮಲೆಯಲ್ಲಿ ಸಿಕ್ಕಿಬಿದ್ದ ಚಿರತೆ: ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದ ನಾಗಮಲೆಯಲ್ಲಿ ಇಟ್ಟಿದ್ದ ಬೋನಿನಲ್ಲಿ ಚಿರತೆ ಬಂಧಿಯಾಗಿದೆ. ಬಹುದಿನಗಳಿಂದ ಈ ಭಾಗದಲ್ಲಿ ಚಿರತೆ ಹಾವಳಿ ಹೆಚ್ಚಾಗಿದೆ. ನಾಗಮಲೆಗೆ ಪಾದಯಾತ್ರೆ ಬಂದಿದ್ದ ಬೆಂಗಳೂರಿನ ಬಾಲಕ ಹರ್ಷಿತ್(10) ಮೇಲೆ ಚಿರತೆ ದಾಳಿ ಮಾಡಿ ಸಾಯಿಸಿತ್ತು. ಆಗ ಬೋನು ಇಟ್ಟು ಅರಣ್ಯ ಇಲಾಖೆ ಕಾರ್ಯಾಚರಣೆ ಕೈಗೊಂಡಿತ್ತು. ಸೆರೆ ಸಿಕ್ಕ ಚಿರತೆಯನ್ನು ಬನ್ನೇರುಘಟ್ಟದ ಪುನರ್ವಸತಿ ಕೇಂದ್ರಕ್ಕೆ ರವಾನಿಸಲಾಗಿತ್ತು. ಇದಾದ ನಂತರವೂ ಸಾಕು ಪ್ರಾಣಿಗಳ ಮೇಲೆ ಚಿರತೆ ದಾಳಿ ಮುಂದುವರೆದಿದ್ದರಿಂದ ಅರಣ್ಯ ಇಲಾಖೆ ಬೋನು ಇಟ್ಟಿ ಕಾರ್ಯಾಚರಣೆ ಮುಂದುವರೆಸಿತ್ತು. ಬೋನಿಗೆ ಬಿದ್ದ ಚಿರತೆಯನ್ನು ರಕ್ಷಣೆ ಮಾಡಿ ಪಶು ವೈದ್ಯರ ಮೂಲಕ ತಪಾಸಣೆ ನಡೆಸಿ ಬಳಿಕ ಕಾಡಿಗೆ ಬಿಡುವುದೋ ಅಥವಾ ಪುನರ್ವಸತಿ ಕೇಂದ್ರಕ್ಕೆ ಕಳುಹಿಸುವುದೋ ಎಂದು ಅರಣ್ಯ ಇಲಾಖೆ ತೀರ್ಮಾನ ಮಾಡಲಿದೆ.