ಎಚ್.ಕೆ.ಟ್ರಸ್ಟ್ ಕಾರ್ಯದರ್ಶಿ ಪ್ರೇಮಲತಾ ಕೃಷ್ಣಸ್ವಾಮಿ ಮಾಹಿತಿ
ಕೊಳ್ಳೇಗಾಲ: ಪಟ್ಟಣದ ಎಂಜಿಎಸ್‌ವಿ ಜೂನಿಯರ್ ಕಾಲೇಜು ಮೈದಾನದಲ್ಲಿ ಡಿ.19 ಮತ್ತು 20 ರಂದು 2 ದಿನಗಳ ನಮ್ಮೂರ ಕನ್ನಡ ಹಬ್ಬ ಆರಕ್ಷಕರಿಗೆ ನಮನ ಹಾಗೂ ವಿಜಯ ಗಾಯನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಎಚ್.ಕೆ.ಟ್ರಸ್ಟ್ ಕಾರ್ಯದರ್ಶಿ ಪ್ರೇಮಲತಾ ಕೃಷ್ಣಸ್ವಾಮಿ ತಿಳಿಸಿದರು.
ರೋಟರಿ ಮಿಟ್ ಟೌನ್, ರೋಟರಿ ಕ್ಲಬ್, ಲಯನ್ಸ್ ಸಂಸ್ಥೆ, ಜೀ ಕನ್ನಡ ವಾಹಿನಿ ಇತರ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಎಚ್.ಕೆ ಟ್ರಸ್ಟ್ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಡಿ.19 ರಂದು ಸಂಜೆ 4 ಗಂಟೆಗೆ ನಮ್ಮೂರ ಕನ್ನಡ ಹಬ್ಬ ವೇದಿಕೆ ಕಾರ್ಯಕ್ರಮದ ಸಾನ್ನಿಧ್ಯವನ್ನು ತಿ.ನರಸೀಪುರ ವಾಟಾಳು ಸೂರ್ಯ ಸಿಂಹಾಸನ ಮಠದ ಶ್ರೀ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಮತ್ತು ಮುಡಿಗುಂಡ ವಿರಕ್ತ ಮಠದ ಶ್ರೀಕಂಠೇಶ್ವರ ಸ್ವಾಮೀಜಿ ವಹಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಎ.ಆರ್.ಕೃಷ್ಣಮೂರ್ತಿ ವಹಿಸಲಿದ್ದಾರೆ. ಶಾಸಕರಾದ ಸಿ.ಪುಟ್ಟರಂಗಶೆಟ್ಟಿ, ಎಂ.ಆರ್.ಮಂಜುನಾಥ್, ಗಣೇಶ್ ಪ್ರಸಾದ್, ಮಾಜಿ ಶಾಸಕ ಜಿ.ಎನ್.ನಂಜುಂಡಸ್ವಾಮಿ, ಎನ್.ಮಹೇಶ್, ಎಸ್.ಬಾಲರಾಜು, ಹನೂರು ಕ್ಷೇತ್ರದ ಮಾಜಿ ಶಾಸಕಿ ಪರಿಮಳಾ ನಾಗಪ್ಪ, ಬಿಜೆಪಿ ಮುಖಂಡರಾದ ಡಾ.ಪ್ರೀತನ್ ನಾಗಪ್ಪ, ನಿಶಾಂತ್ ಇನ್ನಿತರ ಗಣ್ಯರು ಉಪಸ್ಥಿತರಿರುವರು. ಬಳಿಕ ಸ್ಥಳೀಯ ಕಲಾವಿಧರು ಹಾಗು ಶಾಲಾ-ಕಾಲೇಜು ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಸಂಜೆ 7ಕ್ಕೆ ಜೀ ಕನ್ನಡ ವಾಹಿನಿ ತಂಡ ನಡೆಸುವ ಸಾಂಸ್ಕೃತಿಕ ಕಾರ್ಯಕ್ರಮವನ್ನು ಖ್ಯಾತ ನಿರೂಪಕಿ ಅನುಶ್ರೀ ನಡೆಸಿಕೊಡಲಿದ್ದಾರೆ.
ಡಿ.20ಕ್ಕೆ ಸಂಜೆ 4 ಗಂಟೆಗೆ ಆರಕ್ಷಕರಿಗೆ ನಮನ ಹಾಗೂ ವಿಜಯಗಾಯನ ಕಾರ್ಯಕ್ರಮದ ಸಾನ್ನಿಧ್ಯವನ್ನು ಶ್ರೀ ಮಲೈ ಮಹದೇಶ್ವರ ಬೆಟ್ಟದ ಸಾಲೂರು ಬೃಹನ್ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಮತ್ತು ಮೈಸೂರು ಉರಿಲಿಂಗ ಪೆದ್ದಿಮಠದ ಶ್ರೀ ಜ್ಞಾನ ಪ್ರಕಾಶ ಸ್ವಾಮೀಜಿ ವಹಿಸಲಿದ್ದಾರೆ. ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದ ಶಾಸಕ ಎ.ಆರ್. ಕೃಷ್ಣಮೂರ್ತಿ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಂಸದ ಸುನೀಲ್ ಬೋಸ್, ಹುಣಸೂರು ಕ್ಷೇತ್ರದ ಶಾಸಕ ಹರೀಶ್ ಗೌಡ, ವಿಜಯಪುರ ವಿಧಾನ ಪರಿಷತ್ ಸದಸ್ಯ ಸುನೀಲ್ ಗೌಡ ಪಾಟೀಲ್, ಮಾಜಿ ಶಾಸಕ ಜಿ.ಎನ್.ನಂಜುಂಡಸ್ವಾಮಿ, ಚಿತ್ರ ನಿರ್ದೇಶಕ ಎಸ್.ನಾರಾಯಣ್, ಮಾಸ್ಟರ್ ಎಸ್.ಆನಂದ್ ಉಪಸ್ಥಿತಿ ಇರುವರು ಎಂದು ವಿವರಿಸಿದರು.
ಬಳಿಕ ಖ್ಯಾತ ಗಾಯಕ ವಿಜಯಪ್ರಕಾಶ್ ನೇತೃತ್ವದಲ್ಲಿ ವಿಜಯಗಾಯನ ಸಂಗೀತ ಕಾರ್ಯಕ್ರಮ ನಡೆಯಲಿದೆ. ಬಳಿಕ ಜಿಲ್ಲೆಯಲ್ಲಿ ಸೇವೆ ಸಲ್ಲಿಸಿದ 20 ಆರಕ್ಷಕರು ಮತ್ತು ಸ್ಥಳೀಯ ಕಲಾವಿದರನ್ನು ಸನ್ಮಾನಿಸಿ ಗೌರವಿಸಲಾಗುತ್ತದೆ. ಡಿಸಿಪಿ ಎಚ್.ಕೆ. ಮಹಾನಂದ್ ರಚಿಸಿರುವ ಎರಡು ಗೀತೆಗಳನ್ನು ವೇದಿಕೆ ಮೇಲೆ ಬಿಡುಗಡೆಯಾಗಲಿದೆ ಎಂದು ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ನಗರಸಭೆ ಮಾಜಿ ಉಪಾಧ್ಯಕ್ಷ ಹರ್ಷ, ರೋಟರಿ ಕ್ಲಬ್ ಪುಟ್ಟ ಅರಸಶೆಟ್ಟಿ, ಸಂಪತ್ತು, ಶಿವಾನಂದ, ಲಯನ್ಸ್ ಕ್ಲಬ್ ಅಧ್ಯಕ್ಷ ಮಾದೇಶ್, ಶ್ರೀ ವಿಶ್ವ ಚೇತನ ವಿದ್ಯಾಸಂಸ್ಥೆ ಸಂಯೋಜಕ ರಾಜೇಶ್ ಇದ್ದರು.