ಹಲಗೂರು:ಅಕ್ರಮವಾಗಿ ಗಾಂಜಾ ಮಾರಾಟ ಮಾಡಲು ಯತ್ನಿಸಿದ ಇಬ್ಬರನ್ನು ಬುಧವಾರ ಹಲಗೂರು ಪೊಲೀಸರು ಬಂಧಿಸಿದ್ದಾರೆ.
ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಗಾಣಿಗ ಮಂಗಲ ಗ್ರಾಮದ ರಾಜಪ್ಪ ಮತ್ತು ಬೆಂಗಳೂರು ದಕ್ಷಿಣ ಜಿಲ್ಲೆಯ ಕನಕಪುರ ತಾಲೂಕಿನ ನಾಗರಸನಕೋಟೆ ಗ್ರಾಮದ ಎನ್.ವಿ.ಯೋಗೇಶ್ ಬಂಧಿತ ಆರೋಪಿಗಳು.
ಹಲಗೂರು ಸಮೀಪದ ಗುಂಡಾಪುರ ಮತ್ತು ದಳವಾಯಿ ಕೋಡಿಹಳ್ಳಿ ಮಧ್ಯೆ ಇರುವ ಬೆಂಗಳೂರು ನೀರು ಸರಬರಾಜು ಪೈಪ್‌ಲೈನ್ ರಸ್ತೆಯಲ್ಲಿ ಗಾಂಜಾ ಸೊಪ್ಪು ಮಾರಾಟ ಮಾಡಲು ಕಾಯುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಹಲಗೂರು ಠಾಣೆ ಪೊಲೀಸರು ದಾಳಿ ಮಾಡಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ಅವರ ಬಳಿ ಇದ್ದ 1.06 ಕಿ.ಗ್ರಾಂ. ಗಾಂಜಾ ಸೊಪ್ಪನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.