ಗುಂಡ್ಲುಪೇಟೆ ತಾಲೂಕಿನ ಚೌಡಹಳ್ಳಿ ಸಮೀಪ ಅಕ್ರಮಬೇಟೆಗಾರರಿಂದ ಜಿಂಕೆ ಮಾಂಸ ಹಾಗೂ ಕೃತ್ಯಕ್ಕೆ ಬಳಸಲಾಗಿದ್ದ ಆಯುಧಗಳನ್ನು ಅರಣ್ಯಾಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
- 30 ಕೆ.ಜಿ. ಚುಕ್ಕೆ ಜಿಂಕೆಯ ಮಾಂಸ, ಇತರೆ ಪರಿಕರಗಳ ವಶ
ಗುಂಡ್ಲುಪೇಟೆ: ಬಂಡೀಪುರದ ಹುಲಿ ಸಂರಕ್ಷಣಾ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಅಕ್ರಮವಾಗಿ ವನ್ಯಜೀವಿ ಕಳ್ಳಬೇಟೆಯಾಡಿದ್ದ ಇಬ್ಬರನ್ನು ಮಾಲು ಸಮೇತ ಬಂಧಿಸಿದ್ದಾರೆ.
ತಾಲೂಕಿನ ಚೌಡಹಳ್ಳಿ ಗ್ರಾಮದ ಸಮೀಪ ಗುರುವಾರ ಮುಂಜಾನೆ ನಡೆಸಿದ ಕಾರ್ಯಾಚರಣೆಯಲ್ಲಿ ಕೋಡಿಹಳ್ಳಿ ಗ್ರಾಮದ ನಿವಾಸಿ ಮಾಣಿಕಂಠ (27) ಹಾಗೂ ಚೌಡಳ್ಳಿ ಗ್ರಾಮದ ನಿವಾಸಿ ಶಿವಯ್ಯ (45) ನನ್ನು ಬಂಧಿಸಿದ್ದಾರೆ. ಆರೋಪಿಗಳಿಂದ 30 ಕೆ.ಜಿ. ಚುಕ್ಕೆ ಜಿಂಕೆಯ ಮಾಂಸ, ಒಂದು ಪರವಾನಗಿ ಇಲ್ಲದ ಮಜಲ್-ಲೋಡಿಂಗ್ ಬಂದೂಕು, ಮದ್ದುಗುಂಡುಗಳು, ಎರಡು ಚಾಕುಗಳು, ಹೆಡ್ ಟಾರ್ಚ್ ಹಾಗೂ ಒಂದು ಹೋಂಡಾ ಮೋಟಾರ್‌ಸೈಕಲ್ ಅನ್ನು ವಶಪಡಿಸಿಕೊಳ್ಳಲಾಗಿದೆ.
ಉಪವಲಯ ಅರಣ್ಯಾಧಿಕಾರಿ ಕಾರ್ತಿಕ್ ಯಾದವ್ ಅವರ ನೇತೃತ್ವದಲ್ಲಿ ಜ್ಞಾನಶೇಖರ್, ರವಿಕುಮಾರ್, ವಿನಯ್ ಹಾಗೂ ವಾಹನ ಚಾಲಕ ಸೋಮು ಅವರನ್ನು ಒಳಗೊಂಡ ಎಸ್‌ಟಿಪಿಎಫ್ ಗಸ್ತು ತಂಡವು ನಿಯಮಿತ ಗಸ್ತು ಕರ್ತವ್ಯದಲ್ಲಿದ್ದ ವೇಳೆ ಹೋಂಡಾ ಮೋಟಾರ್‌ಸೈಕಲ್‌ನಲ್ಲಿ ಅನುಮಾನಾಸ್ಪದವಾಗಿ ಸಂಚರಿಸುತ್ತಿದ್ದ ಇಬ್ಬರನ್ನು ತಡೆದು ತಪಾಸಣೆ ನಡೆಸಿದಾಗ ಅಕ್ರಮ ಬೇಟೆಗೆ ಬಳಸಲಾಗುತ್ತಿದ್ದ ಆಯುಧಗಳು, ಉಪಕರಣಗಳು ಹಾಗೂ ಚುಕ್ಕೆ ಜಿಂಕೆಯ ಮಾಂಸ ಪತ್ತೆಯಾಗಿ ವಶಪಡಿಸಿಕೊಳ್ಳಲಾಯಿತು.
ಕಾರ್ಯಾಚರಣೆಗೆ ಗೋಪಾಲಸ್ವಾಮಿಬೆಟ್ಟ ವಲಯದ ಸಿಬ್ಬಂದಿ, ಇಲಾಖೆಯ ಎರಡು ಶ್ವಾನಗಳನ್ನು ಬಳಸಿಕೊಳ್ಳಲಾಗಿತ್ತು. ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದ್ದು, ಆರೋಪಿಗಳನ್ನು ಹೆಚ್ಚಿನ ತನಿಖೆಗೆ ಗೋಪಾಲಸ್ವಾಮಿ ಬೆಟ್ಟ ವಲಯಕ್ಕೆ ಒಪ್ಪಿಸಲಾಗಿದ್ದು ಪ್ರಕರಣ ದಾಖಲಾಗಿದೆ.