ಚಾಮರಾಜನಗರದ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಬುಡಕಟ್ಟು ಸಮುದಾಯದವರು ಪಾಲ್ಗೊಂಡರು.
- ಜಿಲ್ಲಾ ಮಟ್ಟದ ಸ್ಪರ್ಧೆ
- ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಆಯೋಜನೆ
- ಬುಡಕಟ್ಟು ಜನಾಂಗದ ಕ್ರೀಡೆ ಮತ್ತು ಸಾಂಸ್ಕೃತಿಕ ಸ್ಪರ್ಧೆ
ಚಾಮರಾಜನಗರ: ಅರಣ್ಯ, ವನ್ಯಜೀವಿಗಳೊಂದಿಗಿನ ಸಹಬಾಳ್ವೆಯ ನಡುವಿನ ನನ್ನ 47 ವರ್ಷಗಳ ಜೀವನದಲ್ಲಿ ಇದೇ ಮೊದಲ ಬಾರಿಗೆ ಕ್ರೀಡಾಕೂಟದಲ್ಲಿ ಪಾಲ್ಗೊಂಡು ತುಂಬಾ ಸಂತೋಷವಾಯಿತು.
ಇದು ಹನೂರು ತಾಲೂಕಿನ ಕೋಣನಕೆರೆ ಗ್ರಾಮದ ಶೀಲಾ ಅವರ ಮಾತು. ಅತಿ ಹಿಂದುಳಿದ ಅರಣ್ಯಾಧಾರಿತ ಬುಡಕಟ್ಟು ವರ್ಗದವರಲ್ಲಿ ಇರುವ ಕ್ರೀಡೆ ಮತ್ತು ಸಾಂಸ್ಕೃತಿಕ ಕೌಶಲ್ಯಗಳನ್ನು ಉಳಿಸಿ, ಬೆಳೆಸಿ ಮತ್ತು ಮುಖ್ಯವಾಹಿನಿಗೆ ಪರಿಚಯಿಸುವ ನಿಟ್ಟಿನಲ್ಲಿ ಸಿಎಂ ಸಿದ್ದರಾಮಯ್ಯ 2025-26ನೇ ಸಾಲಿನ ಆಯವ್ಯಯದಲ್ಲಿ ಪ್ರತಿ ವರ್ಷ ಬುಡಕಟ್ಟು ಜನಾಂಗದ ಕ್ರೀಡೆ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳನ್ನು ಆಯೋಜಿಸಬೇಕೆಂದು ೋಷಣೆ ಮಾಡಿದ್ದಾರೆ.
ಈ ಹಿನ್ನೆಲೆಯಲ್ಲಿ ನಗರದ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆ ವಿಶೇಷತೆಯಿಂದ ಕೂಡಿತ್ತು. ಕ್ರೀಡೆಗಳಲ್ಲಿ ಪಾಲ್ಗೊಳ್ಳಲು ವೇದಿಕೆ ದೊರೆಯದೆ, ಅವಕಾಶಗಳಿಲ್ಲದೆ ಇರುವ ಬುಡಕಟ್ಟು ಸಮುದಾಯದ ಹಲವರು ಮೊದಲ ಬಾರಿಗೆ ಕ್ರೀಡಾಕೂಟದಲ್ಲಿ ಭಾಗವಹಿಸಿ ಸಂಭ್ರಮಿಸಿದರು. ಹಿರಿಯರಿಂದ ಕಿರಿಯವರೆಗೂ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಅವಕಾಶವಿದ್ದ ಹಿನ್ನೆಲೆಯಲ್ಲಿ ಕ್ರೀಡಾಕೂಟ ಹಳೆ ಬೇರು, ಹೊಸ ಚಿಗುರಿನ ಸಮ್ಮಿಳಿತವಾಗಿತ್ತು.
ಯಾವ್ಯಾವ ಕ್ರೀಡೆಗಳು?: ಗುರುವಾರ ಮತ್ತು ಶುಕ್ರವಾರ ಆಯೋಜಿಸಿರುವ ಕ್ರೀಡಾಕೂಟದಲ್ಲಿ ಪುರುಷರು ಮತ್ತು ಮಹಿಳೆಯರ ವಿಭಾಗ ಮಾಡಲಾಗಿತ್ತು. ಪುರುಷರ ವಿಭಾಗದ ಗುಂಪು ಸ್ಪರ್ಧೆಯಲ್ಲಿ ವಾಲಿಬಾಲ್, ಕಬಡ್ಡಿ, ಖೋ-ಖೋ, ಹಗ್ಗ-ಜಗ್ಗಾಟ, ವೈಯಕ್ತಿಕ ಸ್ಪರ್ಧೆಯಲ್ಲಿ ಬೆಟ್ಟ ಹತ್ತುವ ಸ್ಪರ್ಧೆ, ಮರ ಹತ್ತುವ ಸ್ಪರ್ಧೆ, 10. ಕಿಮೀ ಮ್ಯಾರಥಾನ್, 100 ಮೀ. ಓಟ, ಗುಂಡು ಎಸೆತ, ಮ್ಯೂಸಿಕಲ್ ಚೇರ್, ತೆಂಗಿನಕಾಯಿ ಒಡೆಯುವ ಸ್ಪರ್ಧೆಗಳು ನಡೆಯಲಿವೆ. ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಜಾನಪದ ನೃತ್ಯ ಜನಪದ ಗೀತೆ, ಗೊರುಕನ ನೃತ್ಯ, ಪಿನಾಸಿ ನೃತ್ಯ, ಗುಬ್ಬಿ ಅಲೆ, ಮಾರಿ ಕುಣಿತ, ಹಾಡುಕೆ ಸ್ಪರ್ಧೆಗಳಿವೆ. ಮಹಿಳೆಯರ ವಿಭಾಗದ ಗುಂಪು ಸ್ಪರ್ಧೆಯಲ್ಲಿ ಥ್ರೋಬಾಲ್, ಕಬಡ್ಡಿ, ಖೋ-ಖೋ, ಹಗ್ಗ-ಜಗ್ಗಾಟ, ವೈಯಕ್ತಿಕ ಸ್ಪರ್ಧೆಯಲ್ಲಿ ಬೆಟ್ಟ ಹತ್ತುವ ಸ್ಪರ್ಧೆ, 5 ಕಿಮೀ ಮ್ಯಾರಥಾನ್, 100 ಮೀ.ಓಟ, ಗುಂಡು ಎಸೆತ, ಮ್ಯೂಸಿಕಲ್ ಚೇರ್, ಲೆಮನ್ ಮತ್ತು ಸ್ಪೂನ್, ತೆಂಗಿನಕಾಯಿ ಒಡೆಯುವ ಸ್ಪರ್ಧೆ ಇದೆ. ಗುರುವಾರ ನಡೆದ ಸ್ಪರ್ಧೆಗಳಲ್ಲಿ ಸರತಿ ಸಾಲಿನಲ್ಲಿ ಕೊಳ್ಳೇಗಾಲದಿಂದ ಬುಡಕಟ್ಟು ಸಮುದಾಯದವರು ಬಂದಂತೆ ಕಾಣುತ್ತಿರಲಿಲ್ಲ. ಚಾಮರಾಜನಗರ, ಗುಂಡ್ಲುಪೇಟೆ, ಹನೂರು, ಯಳಂದೂರಿನಿಂದ ಮಹಿಳೆಯರು ಮತ್ತು ಪುರುಷರು ಉತ್ಸಾಹದಿಂದ ಪಾಲ್ಗೊಂಡರು.
ಕ್ರೀಡಾಕೂಟವನ್ನು ಕೊಳ್ಳೇಗಾಲ ಶಾಸಕ ಎ.ಆರ್.ಕೃಷ್ಣಮೂರ್ತಿ ಉದ್ಘಾಟಿಸಿದರು. ಚಾಮರಾಜನಗರ ಶಾಸಕ ಸಿ.ಪುಟ್ಟರಂಗಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕಾಡಾ ಅಧ್ಯಕ್ಷ ಪಿ.ಮರಿಸ್ವಾಮಿ, ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್.ವಿ.ಚಂದ್ರು, ಚುಡಾ ಅಧ್ಯಕ್ಷ ಮಹಮದ್ ಅಸ್ಗರ್, ಜಿಲ್ಲಾಧಿಕಾರಿ ಶ್ರೀರೂಪಾ, ಜಿಲ್ಲಾ ಪಂಚಾಯಿತಿ ಸಿಇಒ ಮೋನಾರೋತ್, ಸೋಲಿಗ ಸಮುದಾಯದ ಮುಖಂಡರಾದ ಡಾ.ಸಿ.ಮಾದೇಗೌಡ, ರಾಜೆಂದ್ರ, ಪುಟ್ಟಮ್ಮ, ರತ್ನಮ್ಮ, ಕ್ರೀಡಾಂಗಣ ಸಮಿತಿ ಸದಸ್ಯ ಶ್ರೀನಿವಾಸಪ್ರಸಾದ್, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಬಿಂದ್ಯಾ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಕೆ.ಸುರೇಶ್ ಇತರರಿದ್ದರು.
ಕ್ರೀಡಾಕೂಟದಲ್ಲಿ ವಿಜೇತರಿಗೆ ನೀಡುವ ಬುಡಕಟ್ಟು ಜನಾಂಗದ ಅಪ್ರತಿಮ ನಾಯಕ ಬಿರ್ಸಾ ಮುಂಡಾ ಅವರ ಪ್ರತಿಮೆಯ ಟ್ರೋಫಿ ಗಮನ ಸೆಳೆಯಿತು. ಈ ಪ್ರತಿಮೆಯನ್ನು ಪ್ರತಿಭಾವಂತ ಕಲಾವಿದ ಮಧುಸೂದನ್ ಹೊಸೂರು ಸೃಷ್ಟಿಸಿದ್ದು, ನೋಡುಗರ ಮೆಚ್ಚುಗೆಗೆ ಪಾತ್ರವಾಯಿತು. ಟ್ರೋಫಿಯನ್ನು ಶಾಸಕ ಸಿ.ಪುಟ್ಟರಂಗಶೆಟ್ಟಿ ಅನಾವರಣಗೊಳಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಡುವಾಸಿಗಳಿಗಾಗಿ ಕ್ರೀಡಾಕೂಟವನ್ನು ಆಯೋಜನೆ ಮಾಡಿಸಿದ್ದಾರೆ. ಇದು ದೇಶದಲ್ಲೇ ಮೊದಲ ಪ್ರಯತ್ನವಾಗಿದೆ. ಜಿಲ್ಲಾಮಟ್ಟದಲ್ಲಿ ನಡೆಯುತ್ತಿರುವ ಈ ಕ್ರೀಡಾಕೂಟ ಮುಂದೆ ವಿಭಾಗ ಮಟ್ಟ, ರಾಜ್ಯಮಟ್ಟದಲ್ಲಿ ನಡೆಯುವ ಚಿಂತನೆ ಸರ್ಕಾರಕ್ಕಿದೆ.
ಎ.ಆರ್.ಕೃಷ್ಣಮೂರ್ತಿ, ಕೊಳ್ಳೇಗಾಲ ಶಾಸಕ
ಬುಡಕಟ್ಟು ಜನಾಂಗ ಕ್ರೀಡಾಕೂಟಗಳಲ್ಲಿ ಪಾಲ್ಗೊಳ್ಳುವುದು ಕಡಿಮೆ. ರಾಜ್ಯ ಸರ್ಕಾರ ಆದಿವಾಸಿಗಳಿಗೆ ಎಲ್ಲ ಸೌಲಭ್ಯಗಳನ್ನೂ ಕೊಟ್ಟಿದೆ. ಕೇಂದ್ರ ಸರ್ಕಾರ ಅರಣ್ಯ ಇಲಾಖೆಯ ನಿಯಮಾವಳಿಗಳನ್ನು ಮುಂದಿಟ್ಟು ಸೌಲಭ್ಯಗಳಿಂದ ವಂಚನೆ ಮಾಡುತ್ತಿದೆ.
ಸಿ.ಪುಟ್ಟರಂಗಶೆಟ್ಟಿ, ಚಾಮರಾಜನಗರ ಶಾಸಕ