ಗಾಣಿಗಮಂಗಲದಲ್ಲಿ ಉದ್ಘಾಟನೆಗೆ ಸಿದ್ಧವಾಗಿರುವ ಬುಡಕಟ್ಟು ಆಶ್ರಮ ಶಾಲೆಯ ಸುಸಜ್ಜಿತ ವಸತಿ ನಿಲಯದ ಕಟ್ಟಡ
ಹನೂರು : ತಾಲೂಕಿನ ಕಾಡಂಚಿನ ಗ್ರಾಮ ಗಾಣಿಗಮಂಗಲದಲ್ಲಿ 7.5 ಕೋಟಿ ರೂ. ವೆಚ್ಚದಲ್ಲಿ ಬುಡಕಟ್ಟು ಆಶ್ರಮ ಶಾಲೆಯ ಕಟ್ಟಡವನ್ನು ಸುಸಜ್ಜಿತವಾಗಿ ನಿರ್ಮಿಸಲಾಗಿದ್ದು, ಜ.17 ರಂದು ಉದ್ಘಾಟನೆಗೆ ಸಿದ್ದವಾಗಿದೆ.
ಬುಡಕಟ್ಟು ಸಮುದಾಯದಲ್ಲಿ ಸಾಕ್ಷರತೆ ಮಟ್ಟವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸೋಲಿಗರ ಮಕ್ಕಳಿಗೆ ಮಾಧ್ಯಮಿಕ ಹಂತದವರೆಗೆ ಗುಣಮಟ್ಟದ ಶಿಕ್ಷಣವನ್ನು ನೀಡುವುದರ ಜತೆಗೆ ಊಟ, ವಸತಿ ಸೌಕರ್ಯವನ್ನು ಒದಗಿಸುವ ಉದ್ದೇಶದಿಂದ ಸರ್ಕಾರ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಬುಡಕಟ್ಟು ಆಶ್ರಮ ಶಾಲೆಗಳನ್ನು ಸ್ಥಾಪಿಸಿದೆ. ಹನೂರು ತಾಲೂಕಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗಿರಿಜನರಿದ್ದು, ಸುಮಾರು 80ಕ್ಕೂ ಹೆಚ್ಚು ಹಾಡಿಗಳಲ್ಲಿ ವಾಸಿಸುತ್ತಿದ್ದಾರೆ. ಈ ದೆಸೆಯಲ್ಲಿ ಹೆಚ್ಚು ಸೋಲಿಗರು ವಾಸಿಸುವ ಗಾಣಿಗಮಂಗಲ ಸೇರಿದಂತೆ ಅರ್ಧನಾರಿಪುರ, ಜೀರಿಗೆಗದ್ದೆ, ಕೋಣನಕೆರೆ, ಮಹದೇಶ್ವರ ಬೆಟ್ಟ ಸೇರಿದಂತೆ 10 ಕಡೆಗಳಲ್ಲಿ ಬುಡಕಟ್ಟು ಆಶ್ರಮ ಶಾಲೆಗಳನ್ನು ಸ್ಥಾಪಿಸಲಾಗಿದೆ. ಅಗತ್ಯ ಮೂಲ ಸೌಕರ್ಯದೊಂದಿಗೆ ಸುಸಜ್ಜಿತವಾಗಿ ನಿರ್ಮಿಸಲಾಗಿದೆ. ಹೀಗೀರುವಾಗ ಕಳೆದ ಏಳೆಂಟು ವರ್ಷದ ಹಿಂದೆ ಗಾಣಿಗಮಂಗಲ ಆಶ್ರಮ ಶಾಲೆಯು ಕಟ್ಟಡ ಹೆಂಚಿನ ಮನೆಯಿಂದ ಕೂಡಿದ್ದು, ಸಂಪೂರ್ಣ ಶಿಥಿಲಾವಸ್ಥೆಯ ಹಂತವನ್ನು ತಲುಪಿತ್ತು. ಈ ನಡುವೆಯೂ ಮಕ್ಕಳಿಗೆ ಇಲ್ಲಿಯೇ ಶಿಕ್ಷಣ ನೀಡಲಾಗುತ್ತಿತ್ತು. ಕಟ್ಟಡ ಅಪಾಯ ತಂದೊಡ್ಡುವಂತಿತ್ತು. ಇದರಿಂದ ಮಕ್ಕಳ ಶಿಕ್ಷಣಕ್ಕೆ ತೊಡುಕಾಗಿ ಪರಿಣಮಿಸಿತ್ತು.
ಹಂಚಿನ ಮನೆಯಿಂದ ಕೂಡಿದ ಶಾಲಾ ಕಟ್ಟಡ ಶಿಥಿಲಾವಸ್ಥೆ ಕೂಡಿದ್ದ ಕಾರಣ ಪಾಠ, ಪ್ರವಚನಕ್ಕೆ ತೊಡಕಾಗಿತ್ತು. ಗ್ರಾಮಸ್ಥರ ಹಾಗೂ ಪಾಲಕರ ಒತ್ತಾಯ ಮೇರೆಗೆ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ತಾತ್ಕಾಲಿಕವಾಗಿ 4 ಕೊಠಡಿಗಳನ್ನು ನಿರ್ಮಿಸಿ ಶಿಕ್ಷಣವನ್ನು ನೀಡಲಾಗುತ್ತಿತ್ತು. ಆದರೂ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಕೊಠಡಿ ಸೌಕರ್ಯವಿರಲಿಲ್ಲ.. ಜತೆಗೆ ಅಗತ್ಯ ಮೂಲ ಸೌಕರ್ಯಗಳ ಕೊರತೆ ಇತ್ತು. ಇನ್ನು ವಸತಿಗೆ ಕಟ್ಟಡ ಇಲ್ಲದರ ಪರಿಣಾಮ ಬಾಲಕಿಯರನ್ನು ಬಾಡಿಗೆ ಮನೆಯಲ್ಲಿ ವಸತಿ ಸೌಕರ್ಯ ಕಲ್ಪಿಸಿದ್ದರೆ, ಬಾಲಕರನ್ನು ಶಿಥಿಲಾವಸ್ಥೆಯ ಹಳೆ ಕಟ್ಟಡದಲ್ಲಿ ಇರಿಸಲಾಗಿತ್ತು. ಅಗತ್ಯ ಸೌಕರ್ಯ ಇಲ್ಲದ ಪರಿಣಾಮ ಮಕ್ಕಳು ಕಷ್ಟದ ನಡುವೆ ದಿನ ದೂಡಬೇಕಿತ್ತು. ಇದರಿಂದ ಶಿಕ್ಷಣಕ್ಕೆ ಪೂರಕ ವಾತಾವರಣ ಇರಲಿಲ್ಲ. ಇದನ್ನರಿತ ಗ್ರಾಮಸ್ಥರು ಹಾಗೂ ಪಾಲಕರಿಂದ ನೂತನ ಕಟ್ಟಡ ನಿರ್ಮಿಸುವಂತೆ ಒತ್ತಾಯ ಕೇಳಿ ಬಂದಿತ್ತು. ಇದನ್ನು ಮನಗಂಡ ಇಲಾಖೆ 7.5 ಕೋಟಿ ರೂ. ವೆಚ್ಚದಲ್ಲಿ ಕಟ್ಟಡವನ್ನು ನಿರ್ಮಿಸಲು ಮುಂದಾಯಿತು. ಇದಕ್ಕೆ ಶಾಸಕ ಎಂ.ಆರ್. ಮಂಜುನಾಥ್ ಅವರು 2024ರಲ್ಲಿ ಭೂಮಿಪೂಜೆಯನ್ನು ನೆರವೇರಿಸಿದ್ದರು. ಆದರೆ ಕೆಲ ತಿಂಗಳ ಕಾಲ ಕಾಮಗಾರಿ ನನೆಗುದಿಗೆ ಬಿದ್ದಿತ್ತು. ಈ ಬಗ್ಗೆ ಗ್ರಾಮಸ್ಥರ ಮನವಿ ಮೇರೆಗೆ ವಿಜಯವಾಣಿಯಲ್ಲಿ ವಿಶೇಷ ವರದಿಯನ್ನು ಪ್ರಕಟಿಸಲಾಗಿತ್ತು. ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿಗಳ ಗಮನಕ್ಕೂ ತರಲಾಗಿತ್ತು. ಇದೀಗ ಕಟ್ಟಡ ಸುಸಜ್ಜಿತವಾಗಿ ನಿರ್ಮಾಣವಾಗಿದ್ದು, ಉದ್ಘಾಟನೆಗೆ ಸಿದ್ಧಗೊಂಡಿದೆ. ಇದರಿಂದ ಹೊಸ ಕಟ್ಟಡ ಬುಡಕಟ್ಟು ಮಕ್ಕಳ ಶಿಕ್ಷಣಕ್ಕೆ ವರದಾನವಾಗಿದೆ.
1969ರಲ್ಲಿ ಗ್ರಾಮದಲ್ಲಿ ಸ್ಥಾಪನೆಯಾದ ಈ ಆಶ್ರಮ ಶಾಲೆಯಲ್ಲಿ ಗಾಣಿಗಮಂಗಲ ಸೇರಿದಂತೆ ಕಳ್ಳಿದೊಡ್ಡಿ, ಶಾಗ್ಯ, ಬಂಡಳ್ಳಿ, ಸತ್ತಿಮಂಗಲ ಹಾಗೂ ಕುಡುವಾಳೆ ಗ್ರಾಮದ ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ. 1ರಿಂದ 7ನೇ ತರಗತಿವರೆಗೆ ಶಿಕ್ಷಣವನ್ನು ನೀಡಲಾಗುತ್ತಿದ್ದು, ನಾಲ್ವರು ಶಿಕ್ಷಕರಿದ್ದಾರೆ. ಪ್ರಸ್ತುತ ಶಾಲೆಯಲ್ಲಿ 65 ಮಕ್ಕಳು ಶಿಕ್ಷಣ ಪಡೆಯುತ್ತಿದ್ದು, ತರಗತಿ ಕೊಠಡಿ ಹಾಗೂ ಹಾಸ್ಟೆಲ್ ಸಮಸ್ಯೆಯನ್ನು ಎದುರಿಸುತ್ತಿದ್ದರು. ಇದರಿಂದ ನೂತನ ಕಟ್ಟಡದ ಅವಶ್ಯಕತೆ ಇತ್ತು. ಇದೀಗ ಪ್ರತ್ಯೇಕವಾಗಿ ಶಾಲೆ ಹಾಗೂ ಹಾಸ್ಟೆಲ್ ಕಟ್ಟಡ ಸುಸಜ್ಜಿತವಾಗಿ ನಿರ್ಮಿಸಲಾಗಿದೆ. ಶಾಲಾ ಕಟ್ಟಡದಲ್ಲಿ ಮುಖ್ಯ ಶಿಕ್ಷಕರ ಕೊಠಡಿ, ಶಿಕ್ಷಕರ ಕೊಠಡಿ, ಗ್ರಂಥಾಲಯ ಕೊಠಡಿ ಸೇರಿದಂತೆ 8 ಕೊಠಡಿಗಳಿವೆ. ಇನ್ನು ವಸತಿ ನಿಲಯದ ಕಟ್ಟಡವು 3 ಅಂತಸ್ತನ್ನು ಹೊಂದಿದ್ದು, 12 ಕೊಠಡಿಗಳಿವೆ. ಇಲ್ಲಿ ಬಾಲಕ, ಬಾಲಕಿಯರಿಗೆ ಪ್ರತ್ಯೇಕ ವ್ಯವಸ್ಥೆ ಇದೆ. ಭೋಜನಾಲಯ, ಕಂಟ್ಯೂಟರ್ ಕೊಠಡಿ, ದಾಸ್ತಾನು ಕೊಠಡಿ, ಶೌಚಗೃಹ ಹಾಗೂ ಸ್ನಾನಗೃಹವನ್ನು ಒಳಗೊಂಡಿದೆ. ಇದರಿಂದ ಹೊಸ ಕಟ್ಟಡ ಮಕ್ಕಳ ಶಿಕ್ಷಣಕ್ಕೆ ವರದಾನವಾಗಿದ್ದು, ಈವರೆಗೂ ಅನುಭವಿಸುತ್ತಿದ್ದ ಸಮಸ್ಯೆಯಿಂದ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ನಿಟ್ಟುಸಿರು ಬಿಟ್ಟಂತಾಗಿದೆ. ಹರ್ಷ ಮೂಡಿಸಿದೆ. ಜತೆಗೆ ಗ್ರಾಮಸ್ಥರು ಹಾಗೂ ಪಾಲಕರಲ್ಲೂ ಸಂತಸವನ್ನು ಉಂಟು ಮಾಡಿದೆ.
ಬುಡಕಟ್ಟು ಮಕ್ಕಳ ಶಿಕ್ಷಣಕ್ಕೆ ಸರ್ಕಾರ ಹೆಚ್ಚಿನ ಒತ್ತನ್ನು ನೀಡಿದ್ದು, ಆಶ್ರಮ ಶಾಲೆಗಳನ್ನು ಸ್ಥಾಪಿಸಿದೆ. ಆದರೆ ಗಾಣಿಗಮಂಗಲ ಆಶ್ರಮ ಶಾಲೆಯು ಹಲವು ವರ್ಷಗಳಿಂದ ಶಿಥಿಲಾವಸ್ಥೆಯಿಂದ ಕೂಡಿತ್ತು. ಬೇರೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿತ್ತು. ಮಕ್ಕಳ ವಸತಿಗೆ ಸ್ವಂತ ಕಟ್ಟಡ ಇರಲಿಲ್ಲ. ಇದರಿಂದ ಮಕ್ಕಳ ಶಿಕ್ಷಣಕ್ಕೆ ಪೂರಕ ವಾತಾವರಣ ಇರಲಿಲ್ಲ. ಇದನ್ನು ಮನಗಂಡು ಪ್ರತ್ಯೇಕವಾಗಿ ಶಾಲೆ ಹಾಗೂ ವಸತಿ ನಿಲಯ ಕಟ್ಟಡವನ್ನು ನಿರ್ಮಿಸಲಾಗಿದ್ದು, ಜ.17 ರಂದು ಉದ್ಘಾಟನೆಯಾಗಲಿದೆ. ಇದರಿಂದ ಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗಲಿದೆ.