ಯಳಂದೂರು ತಾಲೂಕಿನ ಕೃಷ್ಣಾಪುರದ ಕೆರೆಯಲ್ಲಿ ಅಕ್ರಮವಾಗಿ ಮಣ್ಣನ್ನು ಜೆಸಿಬಿ ಯಂತ್ರದ ಮೂಲಕ ತೆಗೆಯುತ್ತಿರುವುದು.
- ಅನುಮತಿ ಪಡೆಯದೆ ಮಣ್ಣು ಸಾಗಿಸುವ ಕೆಲಸ
- ಇಲಾಖೆ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ
ಯಳಂದೂರು: ಅನುಮತಿ ಪಡೆಯದೆ ಮಣ್ಣು ಸಾಗಿಸುವ ಕೆಲಸ ತಾಲೂಕಿನಾದ್ಯಂತ ರಾಜಾರೋಷವಾಗಿ ನಡೆಯುತ್ತಿದ್ದು, ಅಕ್ರಮಕ್ಕೆ ಕಡಿವಾಣ ಹಾಕಿಬೇಕಿದ್ದ ಇಲಾಖೆ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ.
ಮಣ್ಣು ಮಾಫಿಯಾ ತಡೆಗಟ್ಟಬೇಕಿದ್ದ ಭೂ ಮತ್ತು ಗಣಿ ಇಲಾಖೆ, ಕಂದಾಯ ಹಾಗೂ ನೀರಾವರಿ ಇಲಾಖೆಗಳ ನಡುವೆ ಸಮನ್ವಯ ಕೊರತೆ ಇರುವುದು ಮಾಫಿಯಾಗೆ ಮತ್ತಷ್ಟು ಬಲ ಬಂದಂತಾಗಿದೆ.
ತಾಲೂಕಿನ ಸುತ್ತಮುತ್ತಲಿನ ಹೆದ್ದಾರಿ ಪ್ರದೇಶಗಳಲ್ಲಿ ಭತ್ತದ ಗದ್ದೆಗಳು ಟೀ, ಹೋಟೆಲ್, ಮನೆಗಳ ನಿರ್ಮಾಣ ಸೇರಿದಂತೆ ಇತರ ಉದ್ದೇಶಗಳಿಗೆ ಭೂ ಪರಿವರ್ತನೆಯಾಗುತ್ತಿವೆ. ಜಾಗಗಳನ್ನು ಸಮತಟ್ಟು ಮಾಡುವುದು ಸೇರಿದಂತೆ ಅನೇಕ ಉದ್ದೇಶಗಳಿಗಾಗಿ ಕಾನೂನು ಬಾಹಿರವಾಗಿ ಕೆರೆಯ ಮಣ್ಣನ್ನು ಅಕ್ರಮವಾಗಿ ಸಾಗಿಸಲಾಗುತ್ತಿದೆ. ಆದರೆ ಇದನ್ನು ತಡೆಗಟ್ಟಬೇಕಿರುವ ಅಧಿಕಾರಿ ವರ್ಗ ಕಣ್ಮುಚ್ಚಿ ಕುಳಿತಿರುವುದರಿಂದ ದಂಧೆಗೆ ಕಡಿವಾಣ ಹಾಕುವವರು ಯಾರು ಎಂಬ ಪ್ರಶ್ನೆಗೆ ಉತ್ತರ ದೊರಕದಂತಾಗಿದೆ.
ತಾಲೂಕಿನ ಅಂಬಳೆ, ವೈ.ಕೆ.ಮೋಳೆ, ಗುಂಬಳ್ಳಿ, ಯರಗಂಬಳ್ಳಿ, ಕೃಷ್ಣಪುರ, ವಡಗೆರೆ, ಗೌಡಹಳ್ಳಿ, ವಲಾರಪಾಳ್ಯ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದ ಕೆರೆಗಳಲ್ಲಿ ಶನಿವಾರ, ಭಾನುವಾರ ಸೇರಿದಂತೆ ಸರ್ಕಾರಿ ರಜೆ ದಿನಗಳಲ್ಲಿ ಬೆಳಗಿನ ಜಾವ ಹಾಗೂ ಸಂಜೆ ವೇಳೆ ಜೆಸಿಬಿ ಯಂತ್ರದ ಮೂಲಕ ನೂರಾರು ಟ್ರ್ಯಾಕ್ಟರ್‌ಗಳಲ್ಲಿ ಮಣ್ಣನ್ನು ತುಂಬಿಕೊಂಡು ಸಾಗಿಸಲಾಗುತ್ತದೆ. ಕೆಲವರು ಇದನ್ನು ದಂಧೆ ಮಾಡಿಕೊಂಡು ಕೆರೆಗಳ ಗರ್ಭವನ್ನು ಅಗೆದು ಲಕ್ಷಾಂತರ ರೂ. ಲಾಭ ಮಾಡಿಕೊಳ್ಳುತ್ತಿದ್ದಾರೆ.
ಕಂದಾಯ ಭೂಮಿಯಲ್ಲಿ ಹೆಚ್ಚಿನ ಪ್ರಮಾಣದ ಮಣ್ಣು ಗಣಿಗಾರಿಕೆ ನಡೆಯುತ್ತಿದೆ. ಇದನ್ನು ಪ್ರಶ್ನಿಸಬೇಕಿರುವ ಕಂದಾಯ ಇಲಾಖೆ ಅಧಿಕಾರಿಗಳು ಈಗ ಜಾಣ ಕುರುಡರಂತೆ ವರ್ತಿಸುತ್ತಿದ್ದಾರೆ. ಕೆರೆಯಲ್ಲಿ ಮಣ್ಣನ್ನು ತೆಗೆಯಲು ಗಣಿ ಮತ್ತು ಭೂ ವಿಜ್ಞಾನ, ಕಂದಾಯ, ನೀರಾವರಿ ಹಾಗೂ ಗ್ರಾಮ ಪಂಚಾಯಿತಿಯಿಂದ ಕಡ್ಡಾಯವಾಗಿ ಅನುಮತಿ ಪಡೆಯಬೇಕು. ಕೆರೆಯ ಮಣ್ಣನ್ನು ಜಮೀನು, ವ್ಯವಸಾಯ ಉದ್ದೇಶಕ್ಕಾಗಿ ಮಾತ್ರ ಬಳಸಿಕೊಳ್ಳಬೇಕೆಂಬ ನಿಯಮವಿದೆ. ಅಲ್ಲದೆ ಮಣ್ಣನ್ನು ಆಳವಾಗಿ ತೆಗೆಯುವಂತಿಲ್ಲ. ಇಂತಿಷ್ಟು ನಿಗದಿತ ಪ್ರದೇಶದಲ್ಲಿ ಮಾತ್ರ ತೆಗೆಯುವುದರ ಜತೆಗೆ ಪೂರಕ ದಾಖಲೆ ಸಲ್ಲಿಸಿ ಅನುಮತಿ ಪಡೆಯಬೇಕೆಂಬ ನಿಯಮವಿದೆ. ಇದನ್ನು ಮೀರಿದಾಗ ಅಂತಹವರ ವಿರುದ್ಧ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ದೂರು ದಾಖಲಿಸಿ, ದಂಡ ವಿಧಿಸಿ ಕಾನೂನು ಕ್ರಮ ಕೈಗೊಳ್ಳಲು ಅವಕಾಶವಿದೆ. ಆದರೆ ತಾಲೂಕಿನ ಎಲ್ಲೂ ಈ ನಿಯಮ ಪಾಲನೆಯಾಗುತ್ತಿಲ್ಲ. ಅವ್ಯಾಹತವಾಗಿ ನೂರಾರು ಲೋಡ್ ಮಣ್ಣನ್ನು ತೆಗೆಯುವ ಕೆಲಸ ನಡೆಯುತ್ತಲೇ ಇದ್ದು, ಇದಕ್ಕೆ ಕಡಿವಾಣ ಬೀಳದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ತಾಲೂಕಿನ ಪ್ರತಿ ಹಳ್ಳಿಯಲ್ಲಿ ಕೆರೆ, ಕಟ್ಟೆಗಳಿರುವ ಕಾರಣ ವೈಜ್ಞಾನಿಕವಾಗಿ ಮಣ್ಣುನ್ನು ತೆಗೆಯಲು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಅನುಮತಿ ನೀಡುವುದರ ಜತೆಗೆ ಕಂದಾಯ ಕಟ್ಟಿಸಿಕೊಳ್ಳಬೇಕು. ಇದರಲ್ಲಿ ಸರ್ಕಾರದ ನೀತಿ ಪಾಲನೆಯಾಗಬೇಕು. ಇದರಿಂದ ಸರ್ಕಾರಕ್ಕೂ ಆದಾಯ ಬರುತ್ತದೆ. ಜತೆಗೆ ವೈಜ್ಞಾನಿಕವಾಗಿ ಕೆರೆಗಳ ಅಭಿವೃದ್ಧಿಗೂ ಕಾರಣವಾಗುತ್ತದೆ. ಈ ನಿಟ್ಟಿನಲ್ಲಿ ಸಂಬಂಧಪಟ್ಟವರು ಗಮನ ಹರಿಸಬೇಕು ಎಂಬುದು ಸಾರ್ವಜನಿಕರ ಆಗ್ರಹ.
ಅನುಮತಿ ಇಲ್ಲದೆ ಕೆರೆಗಳಲ್ಲಿ ಅಕ್ರಮ ಹಾಗೂ ಅವೈಜ್ಞಾನಿಕವಾಗಿ ಮಣ್ಣು ಎತ್ತುತ್ತಿರುವ ವಿಷಯ ನನ್ನ ಗಮನಕ್ಕೆ ಬಂದಿಲ್ಲ. ಈ ಬಗ್ಗೆ ಯಾರೂ ದೂರು ನೀಡಿಲ್ಲ. ಸಂಬಂಧಪಟ್ಟವರಿಂದ ಈ ಬಗ್ಗೆ ಮಾಹಿತಿ ಪಡೆದು ಅಕ್ರಮ ಎಸಗಿದವರ ವಿರುದ್ಧ ಕಾನೂನು ಕ್ರಮ ವಹಿಸಲಾಗುವುದು.
ಎಸ್.ಎಲ್. ನಯನಾ ತಹಸೀಲ್ದಾರ್, ಯಳಂದೂರು