ಕಾಡಂಚಿನ ಗ್ರಾಮ ಪಚ್ಚೆದೊಡ್ಡಿ ವಿದ್ಯಾರ್ಥಿಗಳಿಗೆ ಅರಣ್ಯ ಇಲಾಖೆ ವತಿಯಿಂದ ವಾಹನ ಸೌಕರ್ಯಕ್ಕೆ ಚಾಲನೆ ನೀಡಲಾಯಿತು. ಭಾಸ್ಕರ್, ವಿರಾಜ್ ಹೊಸೂರ್, ನಾಗರಾಜು ಇತರರು ಇದ್ದರು.  
ಚಾಮರಾಜನಗರ

ಪಚ್ಚೆದೊಡ್ಡಿ ವಿದ್ಯಾರ್ಥಿಗಳಿಗೆ ವಾಹನ ಸೌಕರ್ಯ

ಪ್ರಮುಖ ಮುಖ್ಯಾಂಶಗಳು

  • ಸಮಸ್ಯೆ ಬಗ್ಗೆ ಸಿಎಂಗೆ ಮನವಿ ಮಾಡಿದ್ದ ಮಕ್ಕಳು
  • ಅರಣ್ಯ ಇಲಾಖೆಯ ಅಧಿಕಾರಿಗಳಿಂದ ಚಾಲನೆ
ಹನೂರು: ಶಾಲೆ, ಕಾಲೇಜಿಗೆ ತೆರಳಲು ವಾಹನ ಸೌಕರ್ಯ ಕಲ್ಪಿಸುವಂತೆ ಹಾಗೂ ರಸ್ತೆ ಅಭಿವೃದ್ಧಿಪಡಿಸುವಂತೆ ತಾಲೂಕಿನ ಪಚ್ಚೆದೊಡ್ಡಿ ಗ್ರಾಮದ ವಿದ್ಯಾರ್ಥಿಗಳು ವಿಡಿಯೋ ಹಾಗೂ ಪತ್ರದ ಮೂಲಕ ಮುಖ್ಯಮಂತ್ರಿ ಅವರಿಗೆ ಮನವಿ ಮಾಡಿದ್ದ ಬೆನ್ನಲ್ಲೇ ಮಂಗಳವಾರ ಅರಣ್ಯ ಇಲಾಖೆ ಅಧಿಕಾರಿಗಳು ಸ್ಪಂದಿಸಿ ವಾಹನ ಸೌಕರ್ಯ ಕಲ್ಪಿಸಿದ್ದಾರೆ.
ಮಲೆ ಮಹದೇಶ್ವರ ವನ್ಯಜೀವಿ ಧಾಮದ ವ್ಯಾಪ್ತಿಯಲ್ಲಿರುವ ಪಚ್ಚೆದೊಡ್ಡಿ ಗ್ರಾಮದಿಂದ ಸುಮಾರು 15 ವಿದ್ಯಾರ್ಥಿಗಳು ಕಾಂಚಳ್ಳಿ, ಅಜ್ಜೀಪುರ ಹಾಗೂ ರಾಮಾಪುರ ಶಾಲಾ, ಕಾಲೇಜಿಗೆ ತೆರಳುತ್ತಿದ್ದಾರೆ. ಆದರೆ ವಾಹನ ಸೌಕರ್ಯ ಇಲ್ಲದೆ ವಿದ್ಯಾರ್ಥಿಗಳು ಅರಣ್ಯ ಪ್ರದೇಶದೊಳಗೆ ಹಾದು ಹೋಗಿರುವ ಮಣ್ಣಿನಿಂದ ಕೂಡಿದ ಹದಗೆಟ್ಟ ರಸ್ತೆಯಲ್ಲಿ ಕಾಡುಪ್ರಾಣಿಗಳ ಭಯದ ನಡುವೆ ನಡೆದುಕೊಂಡೇ ಸಾಗುತ್ತಿದ್ದರು.
ಕಳೆದ ಒಂದೂವರೆ ವರ್ಷದ ಹಿಂದೆ ಅರಣ್ಯ ಇಲಾಖೆಯಿಂದ ಜನವನ ವಾಹನವನ್ನು ವಿದ್ಯಾರ್ಥಿಗಳಿಗೆ ಕಲ್ಪಿಸಿ ಕೊಡಲಾಗಿತ್ತು. ಬಳಿಕ ಸ್ಥಗಿತಗೊಂಡಿತ್ತು. ವಾಹನ ಸೌಕರ್ಯ ಒದಗಿಸುವಂತೆ ಹಾಗೂ ರಸ್ತೆ ಅಭಿವೃದ್ಧಿಪಡಿಸುವಂತೆ ಗ್ರಾಮಸ್ಥರು ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿಯೂ ಮಾಡಿದ್ದರು. ಆದರೆ ಯಾವುದೇ ಪ್ರಯೋಜನವಾಗಿರಲಿಲ್ಲ. ಇದರಿಂದ ಬೇಸತ್ತ ವಿದ್ಯಾರ್ಥಿಗಳು ಡಿ.6 ರಂದು ಈ ಸಮಸ್ಯೆ ಬಗೆಹರಿಸುವಂತೆ ವಿದ್ಯಾರ್ಥಿಗಳು ವಿಡಿಯೋ ಹಾಗೂ ಪತ್ರದ ಮೂಲಕ ಸಿಎಂ ಸಿದ್ದರಾಮಯ್ಯ ಅವರಲ್ಲಿ ಮನವಿ ಮಾಡಿದ್ದರು.
ಇದಕ್ಕೆ ಸ್ಪಂದಿಸಿದ ಅರಣ್ಯ ಇಲಾಖೆಯ ಅಧಿಕಾರಿಗಳು ಮಂಗಳವಾರದಿಂದ ಇಲಾಖೆಯ ವಾಹನದ ಸೌಕರ್ಯವನ್ನು ಕಲ್ಪಿಸಿದ್ದು, ಶಾಲಾವಧಿಯ ಬೆಳಗ್ಗೆ ಹಾಗೂ ಸಂಜೆ ವೇಳೆಗೆ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಸಂಚರಿಸುವ ವ್ಯವಸ್ಥೆ ಮಾಡಿದ್ದಾರೆ. ಇದರಿಂದ ವಿದ್ಯಾರ್ಥಿಗಳು ನಿಟ್ಟುಸಿರುಬಿಟ್ಟಿದ್ದಾರೆ.
ಬೆಳಗ್ಗೆ ಗ್ರಾಮಕ್ಕೆ ಆಗಮಿಸಿದ ವಾಹನವನ್ನು ಕಂಡು ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಸಂತಸವ್ಯಕ್ತಪಡಿಸಿದರು. ಗ್ರಾಮಸ್ಥರು ಹಾಗೂ ಅಧಿಕಾರಿಗಳ ಸಮ್ಮುಖದಲ್ಲಿ ವಿದ್ಯಾರ್ಥಿಗಳೇ ವಾಹನಕ್ಕೆ ಪೂಜೆ ಸಲ್ಲಿಸಿ ಚಾಲನೆ ನೀಡಿದರು. ಬಳಿಕ ಖುಷಿಯಿಂದ ವಾಹನವನ್ನೇರಿ ಶಾಲೆ, ಕಾಲೇಜಿಗೆ ತೆರಳಿದರು. ಅರಣ್ಯ ಇಲಾಖೆ ಕೂಡಲೇ ಸ್ಪಂದಿಸಿದ್ದಕ್ಕೆ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಮೆಚ್ಚುಗೆವ್ಯಕ್ತಪಡಿಸಿದರು. ಹಾಗೆಯೇ ರಸ್ತೆಯನ್ನೂ ಅಭಿವೃದ್ಧಿಪಡಿಸುವಂತೆ ಒತ್ತಾಯವೂ ಕೇಳಿಬಂತು.
ಈ ವೇಳೆ ಡಿಸಿಎಫ್ ಭಾಸ್ಕರ್ ಮಾತನಾಡಿ, ಗ್ರಾಮಕ್ಕೆ ಹಿಂದೆ ಒದಗಿಸಲಾಗಿದ್ದ ಜನವನ ವಾಹನ ಸ್ಥಗಿತಗೊಂಡಿದ್ದು, ಪ್ರಾಧಿಕಾರಕ್ಕೆ ನೀಡಲಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಮುಂದಿನ ದಿನಗಳಲ್ಲಿ ಜನವನ ವಾಹನ ಸೌಕರ್ಯವನ್ನು ಒದಗಿಸಲಾಗುವುದು. ಜತೆಗೆ ಯಾವುದೇ ಕಾರಣಕ್ಕೂ ಸ್ಥಗಿತಗೊಳಿಸದೆ ಮುಂದುವರಿಸಲಾಗುವುದು ಎಂದು ತಿಳಿಸಿದರು.
ಎಸಿಎಫ್ ವಿರಾಜ್ ಹೊಸೂರು, ಆರ್‌ಎಫ್‌ಒ ನಾಗರಾಜು ಇತರರಿದ್ದರು.