ಕೊಳ್ಳೇಗಾಲ ಪಟ್ಟಣದ ಬಸ್ ನಿಲ್ದಾಣದಲ್ಲಿ ಶುಕ್ರವಾರ ತೇರಂಬಳ್ಳಿ-ಗೊಬ್ಬಳಿಪುರ ಮಾರ್ಗದಲ್ಲಿ ನೂತನವಾಗಿ ಕೆಎಸ್‌ಆರ್‌ಟಿಸಿ ಬಸ್ ಸಂಚಾರಕ್ಕೆ ಕೊಳ್ಳೇಗಾಲ ಕೆಎಸ್‌ಆರ್‌ಟಿಸಿ ಬಸ್ ಘಟಕದ ಮ್ಯಾನೇಜರ್ ಭೋಗನಾಯಕ ಚಾಲನೆ ನೀಡಿದರು. ಪಿ.ಶಿವಸುಂದರ್, ಆನಂದ್, ಇ.ಮೂರ್ತಿ ಇತರರು ಇದ್ದರು.
- ಕೆಎಸ್‌ಆರ್‌ಟಿಸಿ ಬಸ್ ಸಂಚಾರಕ್ಕೆ ಚಾಲನೆ
ಕೊಳ್ಳೇಗಾಲ: ಪಟ್ಟಣದ ಬಸ್ ನಿಲ್ದಾಣದಲ್ಲಿ ಶುಕ್ರವಾರ ಸಾರ್ವಜನಿಕರು ಮತ್ತು ಶಾಲಾ-ಕಾಲೇಜು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ತೇರಂಬಳ್ಳಿ-ಗೊಬ್ಬಳಿಪುರ ಮಾರ್ಗಕ್ಕೆ ನೂತನವಾಗಿ ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಸೇವೆಗೆ ಚಾಲನೆ ದೊರೆಯಿತು.
ಕೆಎಸ್‌ಆರ್‌ಟಿಸಿ ಬಸ್ ಘಟಕದ ವ್ಯವಸ್ಥಾಪಕ ಭೋಗನಾಯಕ ಅವರು ನೂತನವಾಗಿ ತೇರಂಬಳ್ಳಿ-ಗೊಬ್ಬಳಿಪುರ ಮಾರ್ಗಕ್ಕೆ ಬಸ್ ಸೇವೆಗೆ ಚಾಲನೆ ನೀಡಿ ಮಾತನಾಡಿ, ಕೊಳ್ಳೇಗಾಲ ಬಸ್ ನಿಲ್ದಾಣದಿಂದ ಬೆಳಗ್ಗೆ 9 ಗಂಟೆಗೆ ತೇರಂಬಳ್ಳಿ ಮಾರ್ಗವಾಗಿ 1 ಬಸ್ ಗೊಬ್ಬಳಿಪುರ ತಲುಪಿ ಮತ್ತೆ ಕೊಳ್ಳೇಗಾಲದ ಬಸ್ ನಿಲ್ದಾಣಕ್ಕೆ ಹಿಂದಿರುಗಲಿದೆ. ಅಂತೆಯೇ ಸಂಜೆ 5 ಗಂಟೆಗೆ ಕೊಳ್ಳೇಗಾಲ ಬಸ್ ನಿಲ್ದಾಣದಿಂದ ಗೊಬ್ಬಳಿಪುರ ಮಾರ್ಗಕ್ಕೆ ಮತ್ತೊಂದು ಬಸ್ ತೆರಳಿ ಕೊಳ್ಳೇಗಾಲಕ್ಕೆ ಹಿಂದಿರುಗಲಿದೆ. ಈ ಮಾರ್ಗವಾಗಿ ದಿನಕ್ಕೆ ಎರಡು ಬಾರಿ ಬಸ್ ಸಂಚಾರ ಮಾಡಲಿದೆ ಎಂದು ಮಾಹಿತಿ ನೀಡಿದರು.
ಬಸ್ ಸಂಚಾರದಿಂದ ತೇರಂಬಳ್ಳಿ-ಗೊಬ್ಬಳಿಪುರ ಗ್ರಾಮಸ್ಥರು ಮತ್ತು ವಿದ್ಯಾರ್ಥಿಗಳಿಗೆ ಕೊಳ್ಳೇಗಾಲ ಪಟ್ಟಣಕ್ಕೆ ಬರಲು ಅನುಕೂಲವಾಗಿದೆ. ಇದಕ್ಕೂ ಮೊದಲು ಬಸ್ ವ್ಯವಸ್ಥೆಯಿಲ್ಲದೆ ಗ್ರಾಮಸ್ಥರು ಹಾಗೂ ಮಕ್ಕಳು ಕೊಳ್ಳೇಗಾಲ ಪಟ್ಟಣಕ್ಕೆ ಆಗಮಿಸಲು ಗೊಬ್ಬಳಿಪುರದಿಂದ ಮೂರು ನಾಲ್ಕು ಕಿ.ಮೀ. ನಡೆದು ಮೈಸೂರು ಮುಖ್ಯ ರಸ್ತೆಗೆ ಆಗಮಿಸಬೇಕಿತ್ತು. ಹಾಗಾಗಿ ಇತ್ತೀಚೆಗಷ್ಟೆ, ವಿಜಯ ಕರ್ನಾಟಕ ರಕ್ಷಣಾ ವೇದಿಕೆ ಪದಾಧಿಕಾರಿಗಳು ತೇರಂಬಳ್ಳಿ-ಗೊಬ್ಬಳಿಪುರ ಮಾರ್ಗಕ್ಕೆ ಕೆಎಸ್‌ಆರ್‌ಟಿಸಿ ಬಸ್ ವ್ಯವಸ್ಥೆ ಕಲ್ಪಿಸುವಂತೆ ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ಲಿಖಿತ ಮನವಿ ಸಲ್ಲಿಸಿದ್ದರು.
ಈ ವೇಳೆ ವಿಜಯ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಪಿ.ಶಿವಸುಂದರ್, ಉಪಾಧ್ಯಕ್ಷ ಎಸ್.ಆನಂದ್, ಜಿಲ್ಲಾ ಸಂಚಾಲಯ ಇ.ಮೂರ್ತಿ, ತಾಲೂಕು ಪ್ರಧಾನ ಕಾರ್ಯದರ್ಶಿ ಭರತ್, ನಗರ ಘಟಕದ ಪ್ರಧಾನ ಕಾರ್ಯದರ್ಶಿ ತಂಜನ್, ಸದಸ್ಯ ಸುನೀಲ್ ಇತರರು ಇದ್ದರು.