ಕೊಳ್ಳೇಗಾಲ ಪಟ್ಟಣದ ಭ್ರಮಾರಂಭ ಕಲ್ಯಾಣ ಮಂಟಪದಲ್ಲಿ ಗುರುವಾರ ಆಯೋಜಿಸಿದ್ದ ಸಂಘಟನ್ ಸೃಜನ್ ಅಭಿಯಾನ ಕಾರ್ಯಕ್ರಮದಲ್ಲಿ ಶಾಸಕ ಎ.ಆರ್.ಕೃಷ್ಣಮೂರ್ತಿ ಮಾತನಾಡಿದರು. ಶಬರಿನಾಥನ್, ಎಸ್.ಸೋಮಶೇಖರ್, ಜಿ.ಎನ್ ನಂಜುಂಡಸ್ವಾಮಿ, ಕಾವೇರಪ್ಪ ಇದ್ದರು.
- ಎಐಸಿಸಿ ವೀಕ್ಷಕ ಶಬರಿನಾಥನ್ ಹೇಳಿಕೆ
- ಸಂಘಟನ್ ಸೃಜನ್ ಅಭಿಯಾನ
ಕೊಳ್ಳೇಗಾಲ:
ಕಾಂಗ್ರೆಸ್ ಪಕ್ಷವನ್ನು ತಳಮಟ್ಟದಿಂದ ಸದೃಢವಾಗಿ ಕಟ್ಟಲು ರಾಜ್ಯಾದ್ಯಂತ ಸಂಘಟನ್ ಸೃಜನ್ ಅಭಿಯಾನ ಆಯೋಜಿಸಲಾಗಿದೆ ಎಂದು ಅಖಿಲ ಭಾರತ ಕಾಂಗ್ರೆಸ್ ಸಮಿತಿ ವೀಕ್ಷಕ ಶಬರಿನಾಥನ್ ಹೇಳಿದರು.
ಪಟ್ಟಣದ ಭ್ರಮಾರಂಬ ಕಲ್ಯಾಣ ಮಂಟಪದಲ್ಲಿ ಗುರುವಾರ ಕಾಂಗ್ರೆಸ್ ಪಕ್ಷದಿಂದ ಆಯೋಜಿಸಿದ್ದ ಸಂಘಟನ್ ಸೃಜನ್ ಅಭಿಯಾನದಲ್ಲಿ ಮಾತನಾಡಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಪಾರದರ್ಶಕವಾಗಿ ನಡೆಯಲಿದೆ. ಈಗಾಗಲೇ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ. ಈ ಬಗ್ಗೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ಅಭಿಪ್ರಾಯ ಆಲಿಸಿ ರಾಷ್ಟ್ರೀಯ ನಾಯಕರಿಗೆ ಸಲ್ಲಿಸಲಾಗುವುದು ಎಂದು ಮಾಹಿತಿ ನೀಡಿದರು.
ಶಾಸಕ ಎ.ಆರ್.ಕೃಷ್ಣಮೂರ್ತಿ ಮಾತನಾಡಿ, ಜಿಲ್ಲಾ ಕಾಂಗ್ರೆಸ್ ಸಮಿತಿಗೆ ಹಿಂದೆಯೇ ರಚನೆ ಆಗಬೇಕಾಗಿತ್ತು. ಈ ಬಗ್ಗೆ ಪಕ್ಷದ ವರಿಷ್ಠರಿಗೆ ಅಭಿಪ್ರಾಯ ತಿಳಿಸಿದ್ದೆ. ಕಳೆದ ಲೋಕಸಭಾ ಚುನಾವಣೆ ವೇಳೆ ಈ ಪ್ರಕ್ರಿಯೆ ನಡೆಬೇಕಿತ್ತು. ಆದರೆ, ಆರ್.ಧ್ರುವನಾರಾಯಣ ಅವರು ಚುನಾವಣೆ ವೇಳೆ ಸಮಿತಿ ರಚನೆಯಾದರೆ ಗೆಲುವಿಗೆ ತೊಂದರೆಯಾಗಲಿದೆ ಎಂದು ಅಂದಿನ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಜತೆ ಚರ್ಚಿಸಿದ್ದರಿಂದ ಪ್ರಕ್ರಿಯೆ ಕೈಬಿಡಲಾಗಿತ್ತು. ಆದರೀಗ ಕೆಪಿಸಿಸಿ ಅಧ್ಯಕ್ಷ ಸ್ಥಾನ ಬಿ.ಕೆ.ಹರಿಪ್ರಸಾದ್ ವಹಿಸಿಕೊಂಡ ಬಳಿಕ ಸಮಿತಿ ಪುನಾರಚನೆ ಪ್ರಕ್ರಿಯೆ ನಡೆಯುತ್ತಿದೆ. ಜಿಲ್ಲಾ ಸಮಿತಿಗೆ 30 ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ. ಜಿಲ್ಲಾ ಅಧ್ಯಕ್ಷ ಸೇರಿದಂತೆ ಪದಾಧಿಕಾರಿಗಳು ಆಯ್ಕೆ ನಡೆಯಲಿದೆ. ಸಂಘಟನಾ ಕ್ಷೇತ್ರದಲ್ಲಿ ಶಕ್ತಿ ಹೊಂದಿರುವ ಅಭ್ಯರ್ಥಿಯನ್ನು ವರಿಷ್ಠರು ಆಯ್ಕೆ ಮಾಡಲಿದ್ದಾರೆ. ಜಿಲ್ಲಾ ಸಮಿತಿ ರಚನೆ ಬಳಿಕ ಬ್ಲಾಕ್ ಕಾಂಗ್ರೆಸ್ ಸಮಿತಿ ರಚನೆಯಾಗಲಿದೆ ಎಂದರು.
8 ಜನ ಅರ್ಜಿ ಸಲ್ಲಿಕೆ: ಕೊಳ್ಳೇಗಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ತೋಟೇಶ್ ಮಾತನಾಡಿ, ಕಾಂಗ್ರೆಸ್ ಪಕ್ಷದ ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ಕೊಳ್ಳೇಗಾಲ ಕ್ಷೇತ್ರದಿಂದ ಚಂದ್ರು, ಯೋಗೀಶ್, ತಿಮ್ಮರಾಜೀಪುರ ರಾಜು, ಚೇತನ್ ದೊರೈರಾಜ್, ಮಾಂಬಳ್ಳಿ ನಂಜುಂಡಸ್ವಾಮಿ, ಬಿ.ತೋಟೇಶ್, ಕೇತಮ್ಮ, ಡಿ.ಎನ್.ನಟರಾಜು ಅರ್ಜಿ ಸಲ್ಲಿಸಿದ್ದಾರೆ ಎಂದು ಮಾಹಿತಿ ನೀಡಿದರು. ಬಳಿಕ ವೀಕ್ಷಕ ಶಬರಿನಾಥನ್ ಅವರ ಬಳಿ ತಂಡೋಪ ತಂಡವಾಗಿ ಕಾರ್ಯಕರ್ತರು ತೆರಳಿ ಜಿಲ್ಲಾಧ್ಯಕ್ಷರ ಆಯ್ಕೆಯ ಬಗ್ಗೆ ಅಭಿಪ್ರಾಯ ತಿಳಿಸಿದರು.
ಮಾಜಿ ಶಾಸಕ ಜಿ.ಎನ್.ನಂಜುಂಡಸ್ವಾಮಿ, ಎಸ್.ಸೋಮಶೇಖರ್, ಎಐಸಿಸಿ ವೀಕ್ಷಕ ಕಾವೇರಪ್ಪ, ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಮರಿಸ್ವಾಮಿ, ಗ್ಯಾರಂಟಿ ಯೋಜನೆಗಳ ಜಿಲ್ಲಾಧ್ಯಕ್ಷ ಚಂದ್ರು, ಯಳಂದೂರು ತಾಲೂಕು ಅಧ್ಯಕ್ಷ ಪ್ರಭು ಪ್ರಸಾದ್, ಕೊಳ್ಳೇಗಾಲ ತಾಲೂಕು ಅಧ್ಯಕ್ಷ ರಾಜೇಂದ್ರ, ಜಿ.ಪಂ ಮಾಜಿ ಉಪಾಧ್ಯಕ್ಷ ಯೋಗೀಶ್ ಇತರರು ಇದ್ದರು.