ವರ್ಗಾವಣೆಯಾದ ಪ್ರೌಢಶಾಲಾ ಶಿಕ್ಷಕರನ್ನು ಹನೂರಿನಲ್ಲಿ ಸನ್ಮಾನಿಸಲಾಯಿತು. ಮಹೇಶ್, ಗುರುಸ್ವಾಮಿ, ಚಂದ್ರಶೇಖರ್, ವೆಂಕಟೇಶ್, ಶಿವಮಲ್ಲು ಇತರರಿದ್ದರು.
- ಕ್ಷೇತ್ರ ಶಿಕ್ಷಣಾಧಿಕಾರಿ ಮಹೇಶ್ ಬೇಸರ
ಹನೂರು: ನುರಿತ ಶಿಕ್ಷಕರ ವರ್ಗಾವಣೆಯಿಂದ ಹನೂರು ಶೈಕ್ಷಣಿಕ ವಲಯದ ಪ್ರಗತಿ ಹಾಗೂ ಮಕ್ಕಳ ಕಲಿಕೆಗೆ ನಷ್ಟವಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮಹೇಶ್ ಬೇಸರ ವ್ಯಕ್ತಪಡಿಸಿದರು.
ವರ್ಗಾವಣೆಗೊಂಡ ಪ್ರೌಢಶಾಲೆ ಶಿಕ್ಷಕರಿಗೆ ಪಟ್ಟಣದ ಪಿಎಂಶ್ರೀ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಪ್ರೌಢಶಾಲಾ ಶಿಕ್ಷಕರ ಸಂಘದಿಂದ ಆಯೋಜಿಸಿದ್ದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಶಿಕ್ಷಕರು ಮಕ್ಕಳ ಉತ್ತಮ ಭವಿಷ್ಯದ ರೂವಾರಿಗಳು. ಶೈಕ್ಷಣಿಕ ಪ್ರಗತಿ ಹಾಗೂ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಇವರ ಪಾತ್ರ ಅಪಾರ. ಸರ್ಕಾರಿ ಸೇವೆಯಲ್ಲಿ ವರ್ಗಾವಣೆ ಸಾಮಾನ್ಯ ಪ್ರಕ್ರಿಯೆ. ಆದರೂ ಶೈಕ್ಷಣಿಕ ವಲಯದಲ್ಲಿ ಹಲವು ವರ್ಷಗಳ ಕಾಲ ಉತ್ತಮ ಸೇವೆ ಸಲ್ಲಿಸಿ ವರ್ಗಾವಣೆಯಾಗಿರುವ ಶಿಕ್ಷಕರು ಸಂಪನ್ಮೂಲ ವ್ಯಕ್ತಿಗಳಾಗಿದ್ದು, ವಿಷಯವಾರು ಪ್ರೌಢಿಮೆ ಹೊಂದಿದ್ದರು. ಶೈಕ್ಷಣಿಕ ಪ್ರಗತಿ ಹಾಗೂ ಮಕ್ಕಳ ಕಲಿಕೆಗೆ ಹೆಚ್ಚಿನ ಒತ್ತು ನೀಡಿದ್ದರು. ಜತೆಗೆ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಉತ್ತಮ ಸಹಕಾರ ನೀಡುತ್ತಿದ್ದರು. ಇವರ ಸೇವೆ ಶೈಕ್ಷಣಿಕ ವಲಯಕ್ಕೆ ಇನ್ನೂ ಅಗತ್ಯವಾಗಿತ್ತು. ಆದರೆ ವಗಾವಣೆಯಾಗಿರುವುದು ಬೇಸರದ ಸಂಗತಿ. ಮುಂದಿನ ಸೇವಾ ಕಾರ್ಯವು ಇದೇ ರೀತಿ ಮುಂದುವರಿದು ಉನ್ನತ ಹುದ್ದೆ ಅಲಂಕರಿಸಲಿ ಎಂದು ಆಶಿಸಿದರು.
ನಿಯೋಜಿಸುವುದಿಲ್ಲ: ಪ್ರೌಢಶಾಲಾ ಶಿಕ್ಷಕರ ಸಂಘದ ಜಿಲ್ಲಾ ಸಹ ಕಾರ್ಯದರ್ಶಿ ಚಂದ್ರಶೇಖರ್ ಮಾತನಾಡಿ, ಹನೂರು ಶೈಕ್ಷಣಿಕ ವಲಯದಲ್ಲಿ ವಿಜ್ಞಾನ ಶಿಕ್ಷಕರ ಕೊರತೆ ಇದೆ. ಹೀಗಿರುವಾಗ ವಿಜ್ಞಾನ ಶಿಕ್ಷಕರೇ ವರ್ಗಾವಣೆಯಾಗಿರುವುದು ಮಕ್ಕಳ ಕಲಿಕೆಗೆ ಸಮಸ್ಯೆಯಾಗಲಿದೆ. ಆದ್ದರಿಂದ ಶಿಕ್ಷಕರನ್ನು ನಿಯೋಜನೆ ಮೇರೆಗೆ ಇತರ ಶಾಲೆಗೆ ನೇಮಿಸದೆ ಆಯಾ ಶಾಲೆಯಲ್ಲೇ ಕರ್ತವ್ಯ ನಿರ್ವಹಿಸುವಂತಾ ಗಬೇಕು ಎಂದು ತಿಳಿಸಿದರು. ಇದಕ್ಕೆ ಬಿಇಒ ಮಹೇಶ್ ಪ್ರತಿಕ್ರಿಯಿಸಿ, ಕೊರತೆ ಇರುವ ಶಾಲೆಗಳಿಗೆ ಬಿ.ಇಡಿ ಪದವೀಧರ ಶಿಕ್ಷಕರನ್ನು ನಿಯೋಜಿಸಲಾಗುವುದು. ಯಾವುದೇ ಕಾರಣಕ್ಕೂ ಬೇರೆ ಶಾಲೆಗಳಿಗೆ ಶಿಕ್ಷಕರನ್ನು ನಿಯೋಜಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ವರ್ಗಾವಣೆಯಾದ ಶಿಕ್ಷಕರಾದ ಮಧುಸೂದನ್, ಪ್ರಭುರಾಜ್, ಮೋಹನ್‌ಕುಮಾರ್ ಹಾಗೂ ಕುಸುಮಾ ಅವರನ್ನು ಸನ್ಮಾನಿಸಿ ಬೀಳ್ಕೊಡುಗೆ ನೀಡಲಾಯಿತು. ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಗುರುಸ್ವಾಮಿ, ಪ್ರೌಢಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಚಂದ್ರಶೇಖರ್, ಕಾರ್ಯದರ್ಶಿ ಚಂದ್ರಶೇಖರ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕೃಷ್ಣೇಗೌಡ, ಬಡ್ತಿ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಶಿವಮಲ್ಲು, ಬಿಆರ್‌ಸಿ ವೆಂಕಟೇಶ್, ಶಿಕ್ಷಣ ಸಂಯೋಜಕ ಅಶೋಕ್, ಎಸ್ಸಿ ಶಿಕ್ಷಕರ ಸಂಘದ ಅಧ್ಯಕ್ಷ ಮಾದೇಶ್, ಕಸಾಪ ಅಧ್ಯಕ್ಷ ಮಲ್ಲೇಶ್ ಮಾಲಿಂಕಟ್ಟೆ ಇತರರು ಇದ್ದರು.