ಶ್ರೀಮಲೆಮಹದೇಶ್ವರ ಬೆಟ್ಟದ ಸಾಲೂರು ಬೃಹನ್ಮಠದಲ್ಲಿ ಕೌಶಲಾಭಿವೃದ್ಧಿ ಮತ್ತು ತರಬೇತಿ ಕೇಂದ್ರವನ್ನು ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಉದ್ಘಾಟಿಸಿದರು. ಶ್ರೀ ಶರತ್‌ಚಂದ್ರ ಸ್ವಾಮೀಜಿ, ಡಾ.ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಎ.ಆರ್ ಕೃಷ್ಣಮೂರ್ತಿ, ಡಾ.ಎಸ್ ದತ್ತೇಶ್‌ಕುಮಾರ್, ಶಿವರಾಜಪ್ಪ ಇತರರಿದ್ದರು.
- ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅಭಿಪ್ರಾಯ
ಹನೂರು: ತಾಲೂಕಿನ ಶ್ರೀಮಲೆ ಮಹದೇಶ್ವರ ಬೆಟ್ಟದ ಸಾಲೂರು ಬೃಹನ್ಮಠದಲ್ಲಿ ಬುಧವಾರ ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಕೌಶಲಾಭಿವೃದ್ಧಿ ಮತ್ತು ತರಬೇತಿ ಕೇಂದ್ರವನ್ನು ಉದ್ಘಾಟಿಸಿದರು.
ಈ ವೇಳೆ ಅವರು ಮಾತನಾಡಿ, ಮ.ಬೆಟ್ಟದ ತಪ್ಪಲಿನಲ್ಲಿ ಹಲವು ಗ್ರಾಮಗಳಿವೆ. ಆದರೆ ಉದ್ಯೋಗಾವಕಾಶವನ್ನು ಕಲ್ಪಿಸುವ ಯಾವುದೇ ಕೈಗಾರಿಕೆ ಹಾಗೂ ಕೇಂದ್ರಗಳಿಲ್ಲ. ಇದರಿಂದ ಇಲ್ಲಿನ ಜನರು ಮಳೆಯಾಶ್ರಿತ ಪ್ರದೇಶದಲ್ಲಿ ಕೃಷಿ ಮಾಡುತ್ತಾ ಜೀವನ ನಡೆಸುತ್ತಿದ್ದಾರೆ. ಇನ್ನು ಹೆಣ್ಣು ಮಕ್ಕಳು ಸ್ವಯಂ ಉದ್ಯೋಗವನ್ನು ಹೊಂದುವುದರ ಮೂಲಕ ಸ್ವಾವಲಂಬಿ ಜೀವನ ನಡೆಸಲು ಯಾವುದೇ ಅವಕಾಶಗಳಿಲ್ಲ. ಈ ದೆಸೆಯಲ್ಲಿ ಸಾಲೂರು ಮಠದಲ್ಲಿ ಹೆಣ್ಣು ಮಕ್ಕಳಿಗೆ ಕೌಶಲವನ್ನು ವೃದ್ಧಿಸುವ ಹಾಗೂ ತರಬೇತಿ ನೀಡುವ ಸಲುವಾಗಿ ಕೇಂದ್ರವನ್ನು ಸ್ಥಾಪಿಸಿರುವುದು ನಿಜಕ್ಕೂ ಅನುಕೂಲಕರ. ಇದೀಗ ಟೈಲರಿಂಗ್ ತರಬೇತಿ ಆರಂಭಿಸಿರುವುದು ಹೆಣ್ಣು ಮಕ್ಕಳ ಸ್ವಾವಲಂಬನೆ ಜೀವನಕ್ಕೆ ಸಹಕಾರಿಯಾಗಿದೆ. ಆದ್ದರಿಂದ ಪ್ರತಿಯೊಬ್ಬರೂ ತರಬೇತಿ ಪಡೆದುಕೊಂಡು ಉತ್ತಮ ಜೀವನವನ್ನು ರೂಪಿಸಿಕೊಳ್ಳಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮೈಸೂರು ಕುಂದೂರು ಮಠದ ಶ್ರೀ ಶರತ್‌ಚಂದ್ರ ಸ್ವಾಮೀಜಿ, ಸಾಲೂರು ಬೃಹನ್ಮಠದ ಪೀಠಾಧಿಪತಿ ಡಾ. ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಮುಡಿಗುಂಡ ವಿರಕ್ತ ಮಠದ ಶ್ರೀಕಂಠ ಸ್ವಾಮೀಜಿ, ನೀಲಕಂಠ ಸ್ವಾಮೀಜಿ, ಗುಂಡೇಗಾಲ ಮಠದ ಮಲ್ಲಿಕಾರ್ಜುನ ಸ್ವಾಮೀಜಿ, ಕೊಳ್ಳೇಗಾಲದ ಶಾಸಕ ಎ.ಆರ್ ಕೃಷ್ಣಮೂರ್ತಿ, ಶ್ರೀ ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎ.ಈ ರಘು, ಮಾನಸ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಡಾ.ಎಸ್ ದತ್ತೇಶ್‌ಕುಮಾರ್, ನಿವೃತ್ತ ಪ್ರಾಧ್ಯಾಪಕ ಶಿವರಾಜಪ್ಪ ಇತರರಿದ್ದರು.