- ಎರಡು ಹೆದ್ದಾರಿ ಹಾದು ಹೋಗಿರುವುದರಿಂದ ಸಂಚಾರ ವ್ಯವಸ್ಥೆಗೆ ಅನುಕೂಲ
ಗುಂಡ್ಲುಪೇಟೆ: ಈ ಬಾರಿಯ ಬಜೆಟ್‌ನಲ್ಲಿ ಸರ್ಕಾರ ಪಟ್ಟಣಕ್ಕೆ ಸಂಚಾರ ಪೊಲೀಸ್ ಠಾಣೆ ಮಂಜೂರು ಮಾಡಿರುವುದನ್ನು ಸಾರ್ವಜನಿಕರು ಸ್ವಾಗತಿಸಿದ್ದಾರೆ.
ಕೇರಳ ಹಾಗೂ ತಮಿಳುನಾಡಿಗೆ ಸಂಪರ್ಕಿಸುವ ಎರಡು ಹೆದ್ದಾರಿಗಳು ಪಟ್ಟಣದ ಮೂಲಕ ಹಾದುಹೋಗಿರುವುದರಿಂದ ಅತಿ ಹೆಚ್ಚಿನ ವಾಹನ ದಟ್ಟಣೆ ಜತೆಗೆ ರಸ್ತೆ ಅಪಘಾತಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ಅಲ್ಲದೆ ದಿನೇ ದಿನೆ ಬೆಳೆಯುತ್ತಿರುವ ಪಟ್ಟಣದಲ್ಲಿ ವಾಹನಗಳ ಸಂಚಾರ ಹೆಚ್ಚಾಗಿದ್ದರಿಂದ ಪೊಲೀಸರು ಎಷ್ಟೇ ಪ್ರಯತ್ನಿಸಿದರೂ ಸಂಚಾರ ನಿರ್ವಹಣೆ ಭಾರಿ ಸವಾಲಾಗಿತ್ತು.
ಇತ್ತೀಚಿನ ದಿನಗಳಲ್ಲಿ ಪಟ್ಟಣದಲ್ಲಿ ಮನೆಗಳ್ಳತನ, ಜನನಿಬಿಡ ಸ್ಥಳಗಳಲ್ಲಿ ಸರಗಳ್ಳತನ ಸೇರಿದಂತೆ ಅಕ್ರಮ ಚಟುವಟಿಕೆಗಳು ಹೆಚ್ಚಾಗುತ್ತಿವೆ. ಅಪರಾಧ ಚಟುವಟಿಕೆಗಳನ್ನು ಪೊಲೀಸರು ಸಮರ್ಥವಾಗಿ ನಿಭಾಯಿಸಲು ಕಷ್ಟವಾಗುತ್ತಿದೆ. ಕೌಟುಂಬಿಕ ಹಾಗೂ ಸಿವಿಲ್ ಪ್ರಕರಣಗಳಲ್ಲಿ ಠಾಣೆಗೆ ಬರುವ ಜನರ ದೂರುಗಳನ್ನು ಸಕಾಲದಲ್ಲಿ ವಿಚಾರಣೆ ನಡೆಸಿ ನ್ಯಾಯ ಒದಗಿಸಲು ಸಾಧ್ಯವಾಗುತ್ತಿಲ್ಲ. ಗ್ರಾಮಾಂತರ ಪ್ರದೇಶಗಳಿಂದ ಪ್ರತಿದಿನವೂ ಸಾವಿರಾರು ಜನರು ಬರುವ ಜತೆಗೆ ನೆರೆರಾಜ್ಯಗಳವರೂ ಬರುತ್ತಿರುವುದರಿಂದ ವಾಹನಗಳ ದಟ್ಟಣೆ ಹೆಚ್ಚಾಗುತ್ತಿದೆ. ಎರಡೂ ರಾಷ್ಟ್ರೀಯ ಹೆದ್ದಾರಿಗಳು ಹಾದುಹೋಗಿರುವುದರಿಂದ ಪಟ್ಟಣಕ್ಕೆ ಪ್ರತ್ಯೇಕ ಸಂಚಾರ ಪೊಲೀಸ್ ಠಾಣೆ ಮಂಜೂರು ಮಾಡುವಂತೆ ಹಲವಾರು ಬಾರಿ ಸಾರ್ವಜನಿಕರು ಒತ್ತಾಯಿಸುತ್ತಿದ್ದರು.