ಚಾಮರಾಜನಗರದ ಪೌರಕಾರ್ಮಿಕರ ಬಡಾವಣೆಯಲ್ಲಿ ಜಲಜೀವನ್ ಮಿಷನ್ ಕಾಮಗಾರಿಯಿಂದ ರಸ್ತೆಯನ್ನು ಅಗೆದು ಗುಂಡಿ ಬಿದ್ದಿರುವುದು.
- ನಗರಸಭೆ ವಾರ್ಡ್‌ಗಳಲ್ಲಿ ಶೋಚನೀಯ ಸ್ಥಿತಿ
- ಸಾರ್ವಜನಿಕರು ಮತ್ತು ಪ್ರಾಯಾಣಿಕರ ಆಕ್ರೋಶ
- ಪೌರಕಾರ್ಮಿಕರ ಬಡಾವಣೆಯಲ್ಲಿ ಅವ್ಯವಸ್ಥೆ
ಚಾಮರಾಜನಗರ: ಜಿಲ್ಲಾ ಕೇಂದ್ರದಲ್ಲಿ ವಿವಿಧ ಕಾಮಗಾರಿಗಳಿಗೆ ರಸ್ತೆ ನಡುವೆ ಗುಂಡಿಗಳನ್ನು ತೆಗೆದು ಸಮರ್ಪಕವಾಗಿ ಮುಚ್ಚದೇ ಇರುವುದರಿಂದ, ವಾಹನ ಸವಾರರು ಹಾಗೂ ಪಾದಚಾರಿಗಳ ಜೀವಕ್ಕೆ ಕಂಟಕವಾಗಿದೆ.
ಚಾಮರಾಜನಗರ ನಗರಸಭೆ ವ್ಯಾಪ್ತಿಯಲ್ಲಿ 31 ವಾರ್ಡ್‌ಗಳಿದ್ದು, ಕೆಲವು ವಾರ್ಡ್‌ಗಳಲ್ಲಿ ರಸ್ತೆಗಳ ಪರಿಸ್ಥಿತಿ ತುಂಬಾ ಶೋಚನೀಯವಾಗಿದೆ. ಅದರಲ್ಲೂ ಇತ್ತೀಚೆಗೆ ಕೆಲವು ವಾರ್ಡ್‌ಗಳ ಮುಖ್ಯ ರಸ್ತೆಗಳನ್ನು ಕಾಂಕ್ರೀಟ್ ಮತ್ತು ಡಾಂಬರೀಕರಣಗೊಳಿಸಲಾಗಿದೆ. ಆದರೆ ಜಲಜೀವನ್ ಮಿಷನ್ ಕಾಮಗಾರಿ, ಕುಡಿಯುವ ನೀರಿನ ಕಾಮಗಾರಿ, ಗ್ಯಾಸ್ ಕೇಬಲ್ ಅಳವಡಿಕೆ ಹಾಗೂ ಇನ್ನಿತರೆ ಕಾಮಗಾರಿಗಳಲ್ಲಿ ಚೆನ್ನಾಗಿ ಇರುವ ರಸ್ತೆಗಳನ್ನು ಅಗೆದು ಗುಂಡಿಗಳನ್ನು ಮಾಡಲಾಗಿದೆ. ಕಾಮಗಾರಿ ಮುಗಿದ ಬಳಿಕ ರಸ್ತೆಗಳನ್ನು ಮೊದಲಿನಂತೆ ದುರಸ್ಥಿಗೊಳಿಸಿ ನಗರಸಭೆಗೆ ಹಸ್ತಾಂತರ ಮಾಡಬೇಕಿರುತ್ತದೆ. ಆದರೆ ಇದ್ಯಾವುದನ್ನು ಮಾಡದೇ ಇರುವುದರಿಂದ ಕೆಲವು ರಸ್ತೆಗಳಲ್ಲಿ ಗುಂಡಿಗಳು ಬಿದ್ದಿದ್ದು, ವಾಹನ ಸವಾರರು ಹಾಗೂ ಪಾದಚಾರಿಗಳು ತೊಂದರೆ ಅನುಭವಿಸುವಂತಾಗಿದೆ.
ಜಲಜೀವನ್ ಮಿಷನ್ ಕಾಮಗಾರಿಯ ವೇಳೆ ಈಗೇ ಹೆಚ್ಚು ರಸ್ತೆಗಳನ್ನು ಹಾಳುಮಾಡಲಾಗಿದ್ದು, ಯಾವುದೇ ರಸ್ತೆಗಳನ್ನು ಸಮರ್ಪಕವಾಗಿ ನಿರ್ಮಾಣ ಮಾಡದೇ ಇರುವಿದರಿಂದ ಸಮಸ್ಯೆ ಎದುರಾಗಿದೆ. ಇದರಿಂದ ಕಾಮಗಾರಿಗೆ ತಗುಲುವ ಹಣವಲ್ಲದೇ, ಕಾಮಗಾರಿ ಮಾಡುವಾಗ ಹಾಳಾದ ರಸ್ತೆಗಳನ್ನು ಸರಿಪಡಿಸಲು ಕೂಡ ಹಣವನ್ನು ಖರ್ಚು ಮಾಡುವಂತಾಗಿದೆ. ಇದು ಸರ್ಕಾರದ ಹಣ ವ್ಯರ್ಥವಾಗಲು ಕೂಡ ಕಾರಣವಾಗುತ್ತಿದೆ. ಕೆಲವು ವಾರ್ಡ್‌ಗಳಲ್ಲಿ ಇರುವ ಕಾಂಕ್ರೀಟ್ ರಸ್ತೆಗಳನ್ನು ಅಗೆದಿದ್ದು, ಇವುಗಳಿಗೆ ಮಣ್ಣು ಹಾಕಿ ಮುಚ್ಚಿರುವುದರಿಂದ ಗುಂಡಿ ಬಿದ್ದು, ವಾಹನಗಳು ಸಂಚಾರ ಮಾಡಲು ತೊಂದರೆಯಾಗುತ್ತಿದೆ. ಇನ್ನು ಕೆಲವು ಬಡಾವಣೆಗಳಲ್ಲಿ ಒಳಚರಂಡಿ ಕಾಮಗಾರಿಗಳಿಗೆ ತೆಗೆದಿರುವ ಹಳ್ಳಗಳನ್ನು ಸರಿಯಾಗಿ ಮುಚ್ಚದೇ ಇರುವುದರಿಂದ ವಾಹನ ಸವಾರರಿಗೆ ಸಮಸ್ಯೆಯಾಗುತ್ತಿದೆ. ಈ ಕೂಡಲೇ ಸಂಬಂಧಪಟ್ಟವರು ಎಚ್ಚೆತ್ತುಕೊಂಡು ರಸ್ತೆಯ ಗುಂಡಿಗಳನ್ನು ಮುಚ್ಚವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಎಲ್ಲಾವಾರ್ಡ್‌ಗಳಲ್ಲೂ ಸಮಸ್ಯೆ:
ನಗರಸಭೆ ವ್ಯಾಪ್ತಿಯ ಎಲ್ಲಾ ವಾರ್ಡ್‌ಗಳಲ್ಲೂ ರಸ್ತೆಗಳು ಗುಂಡಿ ಬಿದ್ದಿರುವ ಸಮಸ್ಯೆ ಸಾಮಾನ್ಯವಾಗಿದೆ. ಅದರಲ್ಲೂ ಸೋಮವಾರಪೇಟೆ, ಬುಧ್ಧನಗರ, ಹೌಸಿಂಗ್ ಬೋರ್ಡ್ ಕಾಲೋನಿ, ಕರಿನಂಜನಪುರ, ರಾಮಸಮುದ್ರ ದೊಡ್ಡಬೀದಿ, ಚಿಕ್ಕಬೀದಿ, ಶ್ರೀಭಗೀರಥ ಬಡಾವಣೆ, ರೈಲ್ವೆ ಬಡಾವಣೆ, ಪೌರಕಾರ್ಮಿಕರ ಬಡಾವಣೆ, ಗಾಳೀಪುರ, ಭ್ರಮರಾಂಭ ಬಡಾವಣೆ, ಪಿಡಬ್ಲ್ಯೂಡಿ ಕ್ವಾಟ್ರಸ್, ಡಾ.ಬಿ.ಆರ್.ಅಂಬೇಡ್ಕರ್ ಬಡಾವಣೆ ಹಾಗೂ ಇನ್ನಿತರೆ ಬಡಾವಣೆಗಳ ರಸ್ತೆಗಳು ಗುಂಡಿಮಯವಾಗಿದ್ದು, ಜನರ ಜೀವಕ್ಕೂ ಇದು ಕಂಟಕವಾಗಿದೆ. ಕೆಲವು ಪ್ರಮುಖ ರಸ್ತೆಗಳು ಚೆನ್ನಾಗಿದ್ದರೂ, ಅಡ್ಡ ರಸ್ತೆಗಳು ಇಂದಿಗೂ ಡಾಂಬರು ಕಾಣದೇ ಹಾಳಾಗಿದೆ. ಈ ನಡುವೆ ವಿವಿಧ ಕಾಮಗಾರಿಗಳಿಗೆ ಗುಂಡಿಗಳನ್ನು ತೆಗೆದು, ರಸ್ತೆಗಳನ್ನು ಮತ್ತಷ್ಟು ಗುಂಡಿಮಯ ಮಾಡಲಾಗಿದೆ.
ಪೌರಕಾರ್ಮಿಕರ ಬಡಾವಣೆಯಲ್ಲಿ ಅವ್ಯವಸ್ಥೆ:
ಬೆಳ್ಳಂಬೆಳಗ್ಗೆ ನಗರವನ್ನೆಲ್ಲಾ ಸ್ವಚ್ಛಗೊಳಿಸುವ ಪೌರಕಾರ್ಮಿಕರ ಬಡಾವಣೆಯಲ್ಲೇ ಜಲಜೀವನ್ ಮಿಷನ್ ಕಾಮಗಾರಿಯಿಂದ ಅವ್ಯವಸ್ಥೆ ತಾಂಡವವಾಡುತ್ತಿದೆ. 9ನೇ ವಾರ್ಡ್‌ನಲ್ಲಿರುವ ಪೌರಕಾರ್ಮಿಕರ ಬಡಾವಣೆಯಲ್ಲಿ ಸುಮಾರು 150 ಕುಂಟುಂಬಗಳು ವಾಸವಾಗಿದ್ದು, ಚಿಕ್ಕದಾದ ಮನೆಗಳು ಮತ್ತು ಕಿರಿದಾದ ರಸ್ತೆಗಳನ್ನು ಒಳಗೊಂಡಿದೆ. ದ್ವಿಚಕ್ರ ವಾಹನವಷ್ಟೇ ಸಾಗಬಹುದಾದ ರಸ್ತೆಗಳನ್ನು ಜಲಜೀವನ್ ಮಿಷನ್ ಕಾಮಗಾರಿಗಾಗಿ ಅಗೆದಿದ್ದು, ಅದನ್ನು ಸರಿಪಡಿಸದ ಪರಿಣಾಮ ರಸ್ತೆಯಲ್ಲವೂ ಗುಂಡಿಮಯವಾಗಿದೆ. ಇದರಿಂದ ರಸ್ತೆಯ ಒಳಗೆ ಹಾದುಹೋಗಿದ್ದ ಒಳಚರಂಡಿ ಪೈಪ್ಗಳು ಕೂಡ ಹೊಡೆದುಹೋಗಿದೆ. ಪರಿಣಾಮವಾಗಿ ಒಳಚರಂಡಿ ನೀರು ಸಂಗ್ರಹವಾಗಿ ಗಬ್ಬುನಾರುವಂತಾಗಿದೆ. ಬಡಾವಣೆಯ ನಿವಾಸಿಗಳು ನಗರಸಭೆ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಈ ನಿಟ್ಟಿನಲ್ಲಿ ರಸ್ತೆಗಳನ್ನು ಸರಿಪಡಿಸುವಂತೆ ನಿವಾಸಿಗಳು ಈ ಮೂಲಕ ಒತ್ತಾಯಿಸಿದ್ದಾರೆ.
ನಗರಸಭೆ ವ್ಯಾಪ್ತಿಯ ಹೆಚ್ಚಿನ ವಾರ್ಡ್‌ಗಳಲ್ಲಿ ವಿವಿಧ ಕಾಮಗಾರಿಗಳಿಗೆ ರಸ್ತೆಗಳಲ್ಲಿ ಗುಂಡಿ ತೆಗೆದಿದ್ದು, ಅದನ್ನು ಮುಚ್ಚದೇ ಇರುವುದರಿಂದ ನಿವಾಸಿಗಳಿಗೆ ತೊಂದರೆಯಾಗಿದೆ. ನಗರಸಭೆ ಅಧಿಕಾರಿಗಳನ್ನು ಕೇಳಿದರೇ ಯಾವುದೇ ಅನುದಾನ ಇಲ್ಲ ಎನ್ನುತ್ತಾರೆ. ಒಟ್ಟಾರೆಯಾಗಿ ಜನಪ್ರತಿನಿಧಿಗಳು ಹಾಗೂ ನಗರಸಭೆ ಅಧಿಕಾರಿಗಳ ನಿರ್ಲಕ್ಷ್ಯವೇ ಇದಕ್ಕೆ ಕಾರಣವಾಗಿದೆ.
ಎಂ.ಜಯಕುಮಾರ್, ಜಿಲ್ಲಾಧ್ಯಕ್ಷ, ಉಪ್ಪಾರ ಯುವಕರ ಸಂಘ, ಚಾಮರಾಜನಗರ
ನಮ್ಮ ಪೌರಕಾರ್ಮಿಕರ ಬಡಾವಣೆಯಲ್ಲಿ ಜಲಜೀವನ್ ಮಿಷನ್ ಕಾಮಗಾರಿಗೆ ಗುಂಡಿಗಳನ್ನು ತೆಗೆದು ನಲ್ಲಿಗಳ ಸಂಪರ್ಕ ನೀಡಲಾಗಿದೆ. ಆದರೆ ಗುಂಡಿಗಳನ್ನು ಅಮರ್ಪಕವಾಗಿ ಮುಚ್ಚದೇ ಇರುವುದರಿಂದ ನಿವಾಸಿಗಳ ಓಡಾಟಕ್ಕೆ ತೊಂದರೆಯಾಗುತ್ತಿದೆ. ಇದರಿಂದ ಒಳಚರಂಡಿ ಪೈಪ್ಗಳು ಕೂಡ ಹೊಡೆದುಹೋಗಿದೆ.
ಮಹದೇವಮ್ಮ, ನಿವಾಸಿ, ಪೌರಕಾರ್ಮಿಕರ ಬಡಾವಣೆ, ಚಾಮರಾಜನಗರ
ನಗರಸಭೆ ವ್ಯಾಪ್ತಿಯ ಬಡಾವಣೆಗಳಲ್ಲಿ ಒಳಚರಂಡಿ ಕಾಮಗಾರಿಗಳನ್ನು ನಡೆಸಿ ಅವುಗಳನ್ನು ಅಮರ್ಪಕವಾಗಿ ಮುಚ್ಚದೇ ಇರುವುದರಿಂದ ರಸ್ತೆಗಳಲ್ಲಿ ಗುಂಡಿ ಬಿದ್ದಿದ್ದು, ಸಾರ್ವಜನಿಕರಿಗೆ ಸಮಸ್ಯೆಯಾಗುತ್ತಿದೆ. ಕೂಡಲೇ ಸಂಬಂಧ ಪಟ್ಟವರು ರಸ್ತೆ ಗುಂಡಿಗಳನ್ನು ಮುಚ್ಚದಿದ್ದರೇ, ನಗರಸಭೆ ವಿರುದ್ಧ ಪ್ರತಿಭಟನೆ ನಡೆಸಲಾಗುವುದು.
ವೀರಭದ್ರಸ್ವಾಮಿ, ಹೋರಾಟಗಾರರು, ಚಾಮರಾಜನಗರ