ಹೊಗೇನಕಲ್ ಫಾಲ್ಸ್‌ಗೆ ಭಾನುವಾರ ಹೆಚ್ಚಿನ ಪ್ರವಾಸಿಗರು ಆಗಮಿಸಿದ್ದು, ತೆಪ್ಪದಲ್ಲಿ ತೆರಳಿ ಫಾಲ್ಸ್ ವೀಕ್ಷಿಸಿದರು.
ಹನೂರು: ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣ ಹೊಗೇನಕಲ್ ಫಾಲ್ಸ್‌ಗೆ ಭಾನುವಾರ ಪ್ರವಾಸಿಗರ ದಂಡೇ ಹರಿದು ಬಂದಿದ್ದು, ತೆಪ್ಪ ವಿಹಾರದಲ್ಲಿ ತೆರಳಿ ಫಾಲ್ಸ್ ಹಾಗೂ ಪ್ರಕೃತಿ ಸೊಬಗನ್ನು ಸವಿದರು.
ಮ.ಬೆಟ್ಟದಿಂದ ಸುಮಾರು 50 ಕಿ.ಮೀ ಅಂತರ ಹೊಂದಿರುವ ಹೊಗೇನಕಲ್ ಫಾಲ್ಸ್ ಕಾವೇರಿ ವನ್ಯಜೀವಿ ಧಾಮದ ನಡುವೆ ಹಾದು ಹೋಗಿದ್ದು, ಇಲ್ಲಿಗೆ ಕರ್ನಾಟಕ ಹಾಗೂ ತಮಿಳುನಾಡಿನ ಪ್ರವಾಸಿಗರು ಹೆಚ್ಚು ಭೇಟಿ ನೀಡುತ್ತಾರೆ. ಜತೆಗೆ ಮ.ಬೆಟ್ಟಕ್ಕೆ ಆಗಮಿಸುವ ಭಕ್ತರು ಅದರಲ್ಲೂ ಯುವಕರು ಹೆಚ್ಚು ಆಗಮಿಸುತ್ತಾರೆ. ಸಾಮಾನ್ಯ ದಿನಗಳಲ್ಲಿ ಫಾಲ್ಸ್‌ಗೆ ಭೇಟಿ ನೀಡುವವರ ಸಂಖ್ಯೆ ಕಡಿಮೆ. ವಾರಾಂತ್ಯದ ದಿನಗಳಲ್ಲಿ ಹೆಚ್ಚಿನ ಪ್ರವಾಸಿಗರು ಆಗಮಿಸುತ್ತಾರೆ. ಆದರೆ ಕಳೆದ 2 ತಿಂಗಳಿನಿಂದ ಚಳಿಯ ವಾತಾವರಣ ಇದ್ದುದರಿಂದ ಫಾಲ್ಸ್‌ಗೆ ಭಾನುವಾರವು ಸಹ ನಿರೀಕ್ಷೆಯಂತೆ ಹೆಚ್ಚಿನ ಪ್ರವಾಸಿಗರು ಆಗಮಿಸುತ್ತಿರಲಿಲ್ಲ. ಇದೀಗ ಬೇಸಿಗೆ ಸಮೀಪಿಸುತ್ತಿದ್ದು, ಬಿಸಿಲಿನ ಬೇಗೆ ಹೆಚ್ಚಾಗುತ್ತಿದೆ. ಹಾಗಾಗಿ ಭಾನುವಾರ ಫಾಲ್ಸ್‌ನತ್ತ ಪ್ರವಾಸಿಗರ ದಂಡೇ ಹರಿದು ಬಂತು. ಇದರಿಂದ ಫಾಲ್ಸ್ ಆವರಣ ಕಳೆಗಟ್ಟಿತ್ತು.
ಮಹಾ ಶಿವರಾತ್ರಿ ಜಾತ್ರೆಗೆ ರಾಮನಗರ ಸಂಗಮದ ಮೂಲಕ ಲಕ್ಷಾಂತರ ಭಕ್ತರು ಕಾವೇರಿ ನದಿಯನ್ನು ದಾಟಿ ಮ.ಬೆಟ್ಟಕ್ಕೆ ಕಾಲ್ನಡಿಗೆಯಲ್ಲಿ ಆಗಮಿಸುವ ಹಿನ್ನೆಲೆ ಕಾವೇರಿ ನದಿಯಲ್ಲಿ ಹರಿಯುವ ನೀರಿನ ಪ್ರಮಾಣ ಕಡಿಮೆ ಮಾಡಲಾಗಿದೆ. ಹಾಗಾಗಿ ಫಾಲ್ಸ್‌ನಲ್ಲಿ ಹಾಲ್ನೊರೆಯಂತೆ ಧುಮ್ಮಿಕ್ಕುತ್ತಿದ್ದ ನೀರು ಸಾಧಾರಣ ಪ್ರಮಾಣದಲ್ಲಿ ಬೀಳುತ್ತಿದೆ. ಆಗಮಿಸಿದ ಪ್ರವಾಸಿಗರು ತೆಪ್ಪದ ಮೂಲಕ ತೆರಳಿ ಫಾಲ್ಸ್ ಹಾಗೂ ಸುತ್ತಮುತ್ತಲ ಪ್ರಕೃತಿ ಸೊಬಗನ್ನು ಸವಿದು ಖುಷಿ ಪಟ್ಟರು. ಕೆಲವರು ತಮಿಳುನಾಡು ಭಾಗದಲ್ಲಿ ನಿರ್ಮಿಸಿರುವ ವೀಕ್ಷಣಾ ಗೋಪುರಕ್ಕೆ ತೆರಳಿ ಫಾಲ್ಸ್ ವೀಕ್ಷಿಸಿದರು. ಹಾಗಾಗಿ ಭಣಗುಡುತ್ತಿದ್ದ ಫಾಲ್ಸ್ ಭಾನುವಾರ ಪ್ರವಾಸಿಗರಿಂದ ಜೀವಕಳೆ ಪಡೆಯಿತು.
ಇದರಿಂದ ತೆಪ್ಪ ನಡೆಸುವುದನ್ನೇ ನಂಬಿಕೊಂಡು ಜೀವನ ನಡೆಸುತ್ತಿರುವ ಅಂಬಿಗರಿಗೆ ಈ ಭಾನುವಾರ ಕೊಂಚ ಆದಾಯವನ್ನು ತಂದು ಕೊಟ್ಟಿತ್ತು. ಅಲ್ಲದೇ ಫಾಲ್ಸ್‌ನಲ್ಲಿ ಅಂಗಡಿಗಳನ್ನು ಇಟ್ಟುಕೊಂಡು ವ್ಯಾಪಾರ ನಡೆಸುತ್ತಿರುವವವರ ಆದಾಯದಲ್ಲಿ ಸ್ಪಲ್ಪ ಏರಿಕೆ ಕಂಡಿತ್ತು. ಹೋಟೆಲ್‌ನಲ್ಲಿ ಮೀನೂಟದ ವ್ಯಾಪಾರ ಜೋರಾಗಿತ್ತು. ಇದರಿಂದ ಸ್ಥಳೀಯ ವ್ಯಾಪಾರ ವಹಿವಾಟಿನಲ್ಲಿ ಕೊಂಚ ಸಮಾಧಾನ ಮೂಡಿಸಿತು.