ಕೊಳ್ಳೇಗಾಲ ತಾಲೂಕಿನ ಶಿವನಸಮುದ್ರ ಗ್ರಾಮದ ಪ್ರಸಿದ್ಧ ಭರಚುಕ್ಕಿ ಜಲಪಾತವನ್ನು ಶನಿವಾರ ಪ್ರವಾಸಿಗರು ವೀಕ್ಷಿಸಿ ಸಂತಸಪಟ್ಟರು. 
ಚಾಮರಾಜನಗರ

ಭರಚುಕ್ಕಿ ಜಲಪಾತ ವೈಭವಕ್ಕೆ ಪ್ರವಾಸಿಗರು ಫಿದಾ!

ಪ್ರಮುಖ ಮುಖ್ಯಾಂಶಗಳು

  • ಕಾವೇರಿ ನದಿಯಲ್ಲಿ ಹೆಚ್ಚಿದ ಹರಿವಿನಿಂದ ಕಳೆಗಟ್ಟಿದ ಫಾಲ್ಸ್

ಕೊಳ್ಳೇಗಾಲ:

ತಾಲೂಕಿನ ಶಿವನಸಮುದ್ರ ಗ್ರಾಮದ ಪ್ರಸಿದ್ಧ ಭರಚುಕ್ಕಿ ಜಲಪಾತವನ್ನು ಶನಿವಾರ ಸಾವಿರಾರು ಪ್ರವಾಸಿಗರು ವೀಕ್ಷಣೆ ಮಾಡಿದರು.

ಕಾವೇರಿ ಜಲಾನಯನ ಪ್ರದೇಶದಲ್ಲಿ ಕಳೆದ ಒಂದು ವಾರದಿಂದ ಮಳೆ ಚುರುಕುಕೊಂಡ ಹಿನ್ನೆಲೆಯಲ್ಲಿ ಕೆಆರ್‌ಎಸ್ ಹಾಗೂ ಕಬಿನಿ ಜಲಾಶಯದಿಂದ ಸಾವಿರಾರು ಕ್ಯೂಸೆಕ್ ನೀರನ್ನು ಕಾವೇರಿ ನದಿಗೆ ಹರಿಬಿಡಲಾಗಿತ್ತು. ಹೀಗಾಗಿ ಕಳೆದ ಐದು ದಿನಗಳಿಂದ ಭರಚುಕ್ಕಿ ಮೈದುಂಬಿ ಹರಿಯುತ್ತಿದೆ. ವಾರಾಂತ್ಯದ ರಜೆ ಇರುವ ಕಾರಣ ರಾಜ್ಯದ ನಾನಾ ಕಡೆಗಳಿಂದ ಪ್ರವಾಸಿಗರು ಸಾವಿರಾರು ಸಂಖ್ಯೆಯಲ್ಲಿ ಭೇಟಿ ನೀಡಿ ಜಲಪಾತ ವೈಭವವನ್ನು ವೀಕ್ಷಿಸಿದರು.
ಜಲಪಾತ ಅಂಗಳಕ್ಕೆ ಕುಟುಂಬ ಸಮೇತರಾಗಿ ಬಂದ ಪ್ರವಾಸಿಗರು ಫೋಟೋ, ಸೆಲ್ಫಿ ತೆಗೆದುಕೊಂಡು ಖುಷಿಪಟ್ಟರು. ಮುಂಗಾರು ಅಭಾವದಿಂದ ಜೂನ್, ಜುಲೈ ತಿಂಗಳಲ್ಲಿ ಭರಚುಕ್ಕಿ ಭಣಗುಡುತ್ತಿತ್ತು. ಆದರೀಗ ಭರಚುಕ್ಕಿ ಫಾಲ್ಸ್ ಕಳೆಕಟ್ಟಿದ್ದು ಪ್ರವಾಸಿಗರು ಭೇಟಿ ನೀಡುತ್ತಿರುವುದರಿಂದ ಸ್ಥಳೀಯವಾಗಿ ಹೋಟೆಲ್, ಮೀನು ಮಾರಾಟ ಅಂಗಡಿ, ಹಣ್ಣು, ಚಾಟ್ಸ್ ಇನ್ನಿತರ ವ್ಯಾಪಾರಿಗಳ ಮೊಗದಲ್ಲಿ ಮಂದಹಾಸ ಮೂಡಿದೆ.