ಗುಂಡ್ಲುಪೇಟೆ ಸುಲ್ತಾನ್ ಭತ್ತೇರಿ ರಸ್ತೆಯಲ್ಲಿ ಹಾಡಹಗಲೇ ಓವರ್ ಲೋಡ್ ಟಿಪ್ಪರ್ ಸಂಚರಿಸುತ್ತಿರುವುದು.
ಸಾರ್ವಜನಿಕರ ಆಕ್ರೋಶ * ಕ್ರಮಕ್ಕೆ ಒತ್ತಾಯ
ಗುಂಡ್ಲುಪೇಟೆ: ಶಾಲಾ ಸಮಯದಲ್ಲಿ ಟಿಪ್ಪರ್ ಸಂಚಾರ ನಿಲ್ಲಿಸುವಂತೆ ಶಾಸಕರೇ ಅಧಿಕಾರಿಗಳಿಗೆ ಸೂಚನೆ ನೀಡಿದ್ದರೂ ತಾಲೂಕಿನಲ್ಲಿ ಅವಿರತವಾಗಿ ಟಿಪ್ಪರ್‌ಗಳು ಸಂಚರಿಸುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದ್ದು ಶಾಸಕರ ಮಾತಿಗೂ ಬೆಲೆ ಇಲ್ಲವೇ? ಎಂದು ಸಾರ್ವಜನಿಕರು ಆಕ್ರೊಶ ವ್ಯಕ್ತಪಡಿಸಿದ್ದಾರೆ.
ಮಾ 17ರಂದು ತಾಲೂಕಿನ ಚಿಕ್ಕಪುತ್ತೂರು ಗೇಟ್‌ನಲ್ಲಿ ಓವರ್ ಲೋಡ್ ಟಿಪ್ಪರ್ ಡಿಕ್ಕಿ ಹೊಡೆದ ಪರಿಣಾಮ ಟೆಂಪೋದಲ್ಲಿ ಪ್ರಯಾಣಿಸುತ್ತಿದ್ದ 7 ವಿದ್ಯಾರ್ಥಿಗಳಿಗೆ ಪೆಟ್ಟುಬಿದ್ದು ಚಾಲಕನ ಕಾಲು ಮುರಿದ ಹಿನ್ನೆಲೆಯಲ್ಲಿ ಸಾರ್ವಜನಿಕರ ಆಕ್ರೋಶ ಭುಗಿಲೆದ್ದಿತ್ತು. ಅಕ್ರಮವಾಗಿ ಸಂಚರಿಸುತ್ತಿರುವ ಟಿಪ್ಪರ್‌ಗಳ ಸಂಚಾರಕ್ಕೆ ಬ್ರೇಕ್ ಹಾಕುವಂತೆ ಒತ್ತಾಯಿಸಿ ಶಿಂಡನಪುರ, ಚಿಕ್ಕತುಪ್ಪೂರು ಗೇಟ್ ಬಳಿ ಪ್ರತಿಭಟನೆ ನಡೆಸಿದರೆ ವಕೀಲರು ನ್ಯಾಯಾಲಯದ ಕಲಾಪ ಬಹಿಷ್ಕರಿಸಿ ಪ್ರತಿಭಟನೆ ಕೈಗೊಂಡಿದ್ದರು. ಅದೇ ದಿನ ಮಾಜಿ ಶಾಸಕ ಸಿ.ಎಸ್.ನಿರಂಜನಕುಮಾರ್ ಸುದ್ದಿಗೋಷ್ಠಿ ನಡೆಸಿ ತಾಲೂಕು ಆಡಳಿತ ಹಾಗೂ ಶಾಸಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಡಿವೈಎಸ್‌ಪಿ, ಗಣಿ ಮತ್ತು ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಜತೆ ಚರ್ಚಿಸಿ ಮುಂದೆ ಸಾರ್ವಜನಿಕರ ಜತೆ ಸಭೆ ನಡೆಸುವವರೆಗೆ ಟಿಪ್ಪರ್ ಸಂಚಾರ ಬಂದ್ ಮಾಡುವಂತೆ ಒತ್ತಾಯಿಸಿದ್ದರು.
ಆದರೆ ಶಾಸಕರ ಸೂಚನೆಯನ್ನು ಲೆಕ್ಕಿಸದೆ ಪಟ್ಟಣದಿಂದ ಕೇರಳಕ್ಕೆ ಅರಣ್ಯ ಇಲಾಖೆಯ ಮದ್ದೂರು ಚೆಕ್‌ಪೋಸ್ಟ್ ಮೂಲಕ ಬೆಳಗ್ಗೆ 6 ಗಂಟೆಯಿಂದ ರಾತ್ರಿ 9 ಗಂಟೆವರೆಗೂ ಟಿಪ್ಪರ್‌ಗಳು ಸಂಚರಿಸುತ್ತಿವೆ. ಶಾಸಕರ ಹಾಗೂ ಮಾಜಿ ಶಾಸಕರ ಮಾತಿಗೂ ಬೆಲೆಯಿಲ್ಲವೇ? ಎಂದು ಸ್ಥಳೀಯರಾದ ಶಿವಪುರ ಮಂಜು, ಶಾಂತಪ್ಪ ಹಾಗೂ ಗುರುಪ್ರಸಾದ್ ಆಕ್ರೋಶ ಹೊರಹಾಕಿದ್ದಾರೆ.