ಚಾಮರಾಜನಗರದ ಅಂಗಡಿಯಲ್ಲಿ ಮಾರಾಟಕ್ಕೆ ಇಟ್ಟಿರುವ ಸೌದೆ 
ಚಾಮರಾಜನಗರ

‘ಗ್ಯಾಸ್ ಟ್ರಬಲ್’ಗೆ ಸೌದೆ ವ್ಯಾಪಾರ ಪ್ರಜ್ವಲಿಸುವ ನಿರೀಕ್ಷೆ

ಪ್ರಮುಖ ಮುಖ್ಯಾಂಶಗಳು

  • ಮಧ್ಯಪ್ರಾಚ್ಯದ ಯುದ್ಧದ ಇಂಧನ ಪೂರೈಕೆಯ ಮೇಲೆ ಪರಿಣಾಮ
  • ವಾಣಿಜ್ಯ ಸಿಲಿಂಡರ್ ಕೊರತೆ ಸೌದೆ ವ್ಯಾಪಾರ ಚುರುಕಾಗುವ ಲೆಕ್ಕಾಚಾರ
ಚಾಮರಾಜನಗರ: ಮಧ್ಯಪ್ರಾಚ್ಯದ ಕದನ ಭಾರತದ ಇಂಧನ ಪೂರೈಕೆ ಮೇಲೂ ಪರಿಣಾಮ ಬೀರಿದ್ದು, ಅಡುಗೆ ಅನಿಲಕ್ಕಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿರುವ ಈ ಸಂದರ್ಭದಲ್ಲಿ ಸೌದೆ ವ್ಯಾಪಾರ ಪ್ರಜ್ವಲಿಸುವ ನಿರೀಕ್ಷೆ ಮೂಡಿದೆ.
ಇರಾನ್ ಮೇಲೆ ಅಮೆರಿಕಾ-ಇಸ್ರೇಲ್ ನಡೆಸುತ್ತಿರುವ ಯುದ್ಧದ ನಡುವೆ ರಾಜ್ಯದಲ್ಲಿ ಎಲ್ಪಿಜಿ ಸಿಲಿಂಡರ್ ಸಿಗದೆ ದಿನದಿಂದ ದಿನಕ್ಕೆ ಸಮಸ್ಯೆ ಹೆಚ್ಚಾಗುತ್ತಿದೆ. ಚಾಮರಾಜನಗರ ಜಿಲ್ಲೆಯಲ್ಲೂ ಗ್ಯಾಸ್ ಸಿಲಿಂಡರ್ ಸಿಗದೆ ಹೋಟೆಲ್‌ಗಳು ಬಾಗಿಲು ಬಂದ್ ಮಾಡುವ ಸ್ಥಿತಿ ಬಂದಿದೆ. ಶುಭ - ಸಮಾರಂಭಗಳಿಗೂ ಇದರ ಬಿಸಿ ತಟ್ಟಿದೆ. ಹಾಗಾಗಿ ಅಡುಗೆ ಅನಿಲದ ಬದಲಾಗಿ ಎಲೆಕ್ಟ್ರಿಕಲ್ ಇಂಡಕ್ಷನ್ ಸ್ಟೌ ಮತ್ತು ಈ ಹಿಂದಿನ ಸೌದೆ ಒಲೆಯ ಅಡುಗೆ ಪದ್ಧತಿಯನ್ನು ಬಳಕೆ ಮಾಡಬೇಕಾದ ಅನಿವಾರ್ಯತೆ ಬಂದಿದೆ. ಇದು ಸೌದೆ ವ್ಯಾಪಾರ ಹೆಚ್ಚಳವಾಗುವ ಆಶಾಭಾವ ಮೂಡಿಸಿದೆ.
ಕಾದುನೋಡುತ್ತಿರುವ ವ್ಯಾಪಾರಿಗಳು:
ಹೊಟೇಲ್, ಶುಭ-ಸಮಾರಂಭಗಳಿಗೆ ಅಡುಗೆ ಅನಿಲ ಸಿಗುತ್ತಿಲ್ಲ ಎಂಬ ಸುದ್ದಿ ಹಬ್ಬಿದ ಬಳಿಕ ಸೌದೆಗೆ ಬೇಡಿಕೆ ಬರಬಹುದು ಎಂದು ವ್ಯಾಪಾರಿಗಳು ಕಾದುನೋಡುತ್ತಿದ್ದಾರೆ. ವ್ಯಾಪಾರಿಗಳು ಮರದ ಮಿಲ್‌ಗಳಿಂದ ಹಣ ಕೊಟ್ಟು ಸೌದೆ ತಂದು ಡಿಪೋಗಳಲ್ಲಿ ಮಾರಾಟ ಮಾಡುತ್ತಾರೆ. ಒಂದು ಮಣ(10 ಕೆ.ಜಿ) ಸೌದೆಗೆ 50-60 ರೂ. ನಿಗದಿ ಮಾಡಿದ್ದಾರೆ. ಅಡುಗೆ ಅನಿಲದ ಕೊರತೆಯಿಂದ ಸೌದೆ ಖರೀದಿ ಹೆಚ್ಚಾಗುವುದೆಂದು ನಂಬಿ ಮಿಲ್‌ಗಳಿಂದ ಹೆಚ್ಚು ಸೌದೆ ತಂದು ದಾಸ್ತಾನು ಇಟ್ಟುಕೊಂಡರೆ ಅವು ಬಿಸಿಲಿಗೆ ಒಣಗಿ ತೂಕ ಕಡಿಮೆಯಾಗುತ್ತವೆ. ಆಗ ವ್ಯಾಪಾರದಲ್ಲಿ ನಷ್ಟ ಉಂಟಾಗುವ ಸಾಧ್ಯತೆಗಳಿವೆ. ಆದ್ದರಿಂದ ವ್ಯಾಪಾರಿಗಳು ಸೌದೆ ಖರೀದಿಯ ಬೇಡಿಕೆಯನ್ನು ಗಮನಿಸಿ ಬಳಿಕ ದಾಸ್ತಾನು ಹೆಚ್ಚಳ ಮಾಡಿಕೊಳ್ಳಲು ನಿರ್ಧರಿಸಿದ್ದಾರೆ.
ಶುಭ-ಸಮಾರಂಭಗಳ ಮೇಲಷ್ಟೇ ಭರವಸೆ:
ಅಡುಗೆ ಅನಿಲ ಕೊರತೆ ಸಂದರ್ಭದಲ್ಲಿ ಸೌದೆ ವ್ಯಾಪಾರಿಗಳಿಗೆ ಹೋಟೆಲ್‌ಗಳಿಂದ ವ್ಯಾಪಾರ ಹೆಚ್ಚಳವಾಗುವ ನಂಬಿಕೆ ಇಲ್ಲ, ಬದಲಾಗಿ ಶುಭ-ಸಮಾರಂಭಗಳ ಮೇಲೆ ಭರವಸೆ ಇದೆ. ಸೌದೆ ಒಲೆಯಲ್ಲಿ ಅಡುಗೆ ಮಾಡುವ ಹೋಟೆಲ್‌ಗಳು ನಿಯಮಿತವಾಗಿ ಸೌದೆ ಖರೀದಿಸುತ್ತಿವೆ. ಈ ಹೋಟೇಲ್‌ಗಳು ಸೌದೆ ಅಂಗಡಿಗೆ ಖಾಯಂ ಗಿರಾಕಿಗಳಾಗಿವೆ. ಆದರೆ ಅಡುಗೆ ಅನಿಲವನ್ನು ಮಾತ್ರ ಬಳಕೆ ಮಾಡುವ ಹೋಟೆಲ್‌ಗಳು ಸೌದೆ ಬಳಕೆ ಮಾಡಬೇಕಾದರೆ ಈಗ ಸೌದೆ ಒಲೆ ನಿರ್ಮಾಣ ಮಾಡಿಸಿಕೊಳ್ಳಬೇಕು. ಹೋಟೆಲ್ ಮಾಲೀಕರು ಇದರ ಬದಲಾಗಿ ಎಲೆಕ್ಟ್ರಿಕ್ ಇಂಡಕ್ಷನ್ ಸ್ಟೌಗಳಿಗೆ ಬಂಡವಾಳ ಹಾಕುತ್ತಾರೆಯೇ ಹೊರತು ಸೌದೆ ಒಲೆ ಕಟ್ಟಿಸುವುದು ಕಡಿಮೆ. ಶುಭ-ಸಮಾರಂಭಗಳ ಸ್ಥಿತಿ ಹೀಗಿಲ್ಲ. ಅಡುಗೆ ಮಾಡಲು ಗ್ಯಾಸ್ ಸಿಲಿಂಡರ್ ಸಿಗದಿದ್ದರೆ ಬಾಣಸಿಗರು ಸೌದೆ ಬಳಸುತ್ತಾರೆ. ಪ್ರಸ್ತುತ ಹಲವೆಡೆ ಜಾತ್ರಾ ಮಹೋತ್ಸವಗಳು, ಮದುವೆ, ನಾಮಕರಣ ಇನ್ನಿತರ ಶುಭ-ಸಮಾರಂಭಗಳು ನಡೆಯುತ್ತಿವೆ. ಈ ವೇಳೆ ಅಡುಗೆ ಮಾಡಲು ಸೌದೆಗಳನ್ನೇ ಬಳಕೆ ಮಾಡಿಕೊಳ್ಳಲಾಗುತ್ತಿದೆ.
ಅನಿಲದ ಹಂಗಿಲ್ಲದವರಿಗಿಲ್ಲ ಚಿಂತೆ:
ಗ್ಯಾಸ್ ಸಿಲಿಂಡರ್ ಬಳಕೆ ಮಾಡದೆ ಇಂದಿಗೂ ಸೌದೆ ಒಲೆಯಲ್ಲೇ ಅಡುಗೆ ಮಾಡುತ್ತಿರುವ ಹೋಟೆಲ್‌ಗಳಿಗೆ ಈ ಸಂದರ್ಭದಲ್ಲಿ ಚಿಂತೆ ಇಲ್ಲದಂತಾಗಿದೆ. ಇದರೊಂದಿಗೆ ಜಿಲ್ಲೆಯ ಕೆಲವು ರೈತರು ತನ್ನ ಮನೆಗಳಲ್ಲಿ ಗೋಬರ್ ಗ್ಯಾಸ್ ಅಳವಡಿಸಿಕೊಂಡಿದ್ದು, ಇವರಿಗೂ ಕೂಡ ಗ್ಯಾಸ್ ಸಮಸ್ಯೆಯ ದಿಗಿಲು ಇಲ್ಲ.
"

ಗ್ಯಾಸ್ ಸಿಲಿಂಡರ್ ಸಿಗುತ್ತಿಲ್ಲ. ಹೋಟೆಲ್ ಮತ್ತು ಶುಭ-ಸಮಾರಂಭಗಳಿಗೆ ಸೌದೆ ಖರೀದಿ ಮಾಡಬಹುದು. ವ್ಯಾಪಾರ ಹೆಚ್ಚಳವಾಗಬಹುದು ಎಂದು ಭಾವಿಸಿದ್ದೇನೆ. ಮಿಲ್‌ನಿಂದ ಒಂದೇ ಸಲಕ್ಕೆ ಸೌದೆ ತಂದು ಡಿಪೋದಲ್ಲಿ ಹಾಕುವ ಬದಲು ಖರೀದಿಯನ್ನು ನೋಡಿ ಬಳಿಕ ಸೌದೆ ತರಲು ನಿರ್ಧರಿಸಿದ್ದೇನೆ.