ಸತ್ಯಮಂಗಲ-ಕೊಪ್ಪ ಮಾರ್ಗದ ರಸ್ತೆ ಬದಿಯ ಅರಣ್ಯ ಪ್ರದೇಶದಲ್ಲಿ ಕಾಣಿಸಿಕೊಂಡ ಹುಲಿ.
ಹನೂರು ತಾಲೂಕಿನ ಸತ್ಯಮಂಗಳ-ಕೊಪ್ಪ ಮಾರ್ಗ
ಹನೂರು: ತಾಲೂಕಿನ ಸತ್ಯಮಂಗಲ-ಕೊಪ್ಪ ಮಾರ್ಗದ ಅರಣ್ಯ ಪ್ರದೇಶದ ರಸ್ತೆ ಬದಿಯಲ್ಲಿ ಮಂಗಳವಾರ ಹುಲಿಯೊಂದು ಕಾಣಿಸಿಕೊಂಡಿದ್ದು, ಜನರಲ್ಲಿ ಆತಂಕ ಉಂಟು ಮಾಡಿದೆ.
ಕಳೆದ 5 ತಿಂಗಳ ಹಿಂದೆ ಇದೇ ಮಾರ್ಗದ ಮಿಣ್ಯಂ ರಸ್ತೆ ಬದಿಯ ಅರಣ್ಯ ಪ್ರದೇಶದಲ್ಲಿ ತಾಯಿ ಹುಲಿ ಸೇರಿದಂತೆ 5 ಹುಲಿ ಮರಿಗಳು ವಿಷ ಪ್ರಾಶನದಿಂದ ಮೃತಪಟ್ಟಿದ್ದವು. ಹಸುವನ್ನು ಕೊಂದ ಕಾರಣಕ್ಕೆ ಈ ದುರ್ಘಟನೆ ನಡೆದಿತ್ತು. ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ಸ್ಥಳಕ್ಕಾಗಮಿಸಿ ಅಂತ್ಕಕ್ರಿಯೆಯಲ್ಲಿ ಭಾಗಿಯಾಗಿದ್ದರು.
ಈ ವೇಳೆ ಈ ಭಾಗದಲ್ಲಿ ಗಸ್ತು ಹೆಚ್ಚಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು. ಆದರೆ ಕಳೆದ 2 ದಿನದ ಹಿಂದೆ ಕೊಪ್ಪ ಗ್ರಾಮದ ಗೋವಿಂದರಾಜು ಎಂಬುವರ ಹಸು ಅರಣ್ಯದಂಚಿನಲ್ಲಿ ಮೇಯುತ್ತಿದ್ದ ವೇಳೆ ಹುಲಿ ದಾಳಿಗೆ ಒಳಗಾಗಿ ಗಾಯಗೊಂಡಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿತ್ತು. ಇದರಿಂದ ಈ ಭಾಗದ ಜನರು ಭಯಭೀತರಾಗಿದ್ದು, ಆಕ್ಷೇಪವನ್ನು ವ್ಯಕ್ತಪಡಿಸಿದ್ದರು.
ಈಗೀರುವಾಗ ಮಂಗಳವಾರ ಬೆಳಗ್ಗೆ 9ರ ವೇಳೆಯಲ್ಲಿ ಹೂಗ್ಯಂನಿಂದ ಹನೂರಿಗೆ ತೆರಳುತಿದ್ದ ಬಸ್ಸಿನಲ್ಲಿದ್ದವರಿಗೆ ಈ ಮಾರ್ಗದ ರಸ್ತೆ ಬದಿಯಲ್ಲೇ ಹುಲಿಯೊಂದು ನಿಧಾನಗತಿಯಲ್ಲಿ ಅರಣ್ಯ ಪ್ರದೇಶದತ್ತ ಹೆಜ್ಜೆ ಹಾಕುತ್ತಾ ಸಾಗುತ್ತಿರುವುದು ಕಂಡಿದೆ. ಇದನ್ನು ಗಮನಿಸಿದ ಬಸ್ಸಿನಲ್ಲಿದ್ದವರು ಭಯದಿಂದಲೇ ವೀಕ್ಷಿಸಿ ಆತಂಕಕ್ಕೆ ಒಳಗಾದರು. ಇದರ ದೃಶ್ಯವನ್ನು ಸಾರ್ವಜನಿಕರೊಬ್ಬರೂ ಮೊಬೈಲ್ ಮೂಲಕ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.
ಆತಂಕದಲ್ಲಿ ಜನರು: ಈ ಮಾರ್ಗವು ಮಲೆಮಹದೇಶ್ವರ ವನ್ಯಜೀವಿ ಧಾಮದ ಮೂಲಕ ಹಾದು ಹೋಗಿದ್ದು, ಕಾಡಾನೆ, ಚಿರತೆ, ಕಾಡೆಮ್ಮೆ ಹಾಗೂ ಇನ್ನಿತರ ಕಾಡುಪ್ರಾಣಿಗಳು ಆಗಾಗ್ಗೆ ರಸ್ತೆಯಲ್ಲೇ ಕಾಣಿಸಿಕೊಳ್ಳುತ್ತಿವೆ. ಆದರೆ ಹುಲಿ ರಸ್ತೆಯಲ್ಲಿ ಕಾಣಿಸಿಕೊಂಡಿರಲಿಲ್ಲ. ಇದೀಗ ರಸ್ತೆ ಬದಿಯಲ್ಲೇ ಕಾಣಿಸಿಕೊಂಡಿರುವುದು ಈ ಭಾಗದ ಜನರಲ್ಲಿ ಅದರಲ್ಲೂ ಈ ಮಾರ್ಗದಲ್ಲಿ ಸಂಚರಿಸುವ ಬೈಕ್ ಸವಾರರಲ್ಲಿ ಭಯವನ್ನು ಉಂಟು ಮಾಡಿದೆ. ಆದ್ದರಿಂದ ಅರಣ್ಯ ಇಲಾಖೆಯ ಅಧಿಕಾರಿಗಳು ಈ ಮಾರ್ಗದಲ್ಲಿ ಅಗತ್ಯ ಸಿಬ್ಬಂದಿ ನಿಯೋಜಿಸುವುದರ ಮೂಲಕ ಕಾಡು ಪ್ರಾಣಿಗಳಿಂದ ಪ್ರಾಣಾಪಾಯ ಸಂಭವಿಸದಂತೆ ಅಗತ್ಯ ಕ್ರಮವಹಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.