ಗುಂಡ್ಲುಪೇಟೆ ತಾಲೂಕಿನ ಮಲ್ಲಮ್ಮನಹುಂಡಿ ಸಮೀಪದಲ್ಲಿ ಅರಣ್ಯ ಸಿಬ್ಬಂದಿ ಹುಲಿ ಸೆರೆಗೆ ಬೋನು ಅಳವಡಿಸಿರುವುದು.
- ಮಲ್ಲಮ್ಮನಹುಂಡಿಯಲ್ಲಿ ಕಾಣಿಸಿಕೊಂಡ ವ್ಯಾಘ್ರ
- ಮಾದಾಪಟ್ಟಣ ಗ್ರಾಮದಲ್ಲಿ ಹಸು ಬಲಿ
ಗುಂಡ್ಲುಪೇಟೆ: ತಾಲೂಕಿನ ವಿವಿಧ ಗ್ರಾಮಗಳಲ್ಲಿ ಹುಲಿ ಕಾಣಿಸಿಕೊಂಡು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.
ಗುಂಡ್ಲುಪೇಟೆ ಬಫರ್ ವಲಯ ವ್ಯಾಪ್ತಿಯ ಮಲ್ಲಮ್ಮನಹುಂಡಿ ಗ್ರಾಮದಲ್ಲಿ ಜಮೀನಿಗೆ ಹೋಗುತ್ತಿದ್ದ ರೈತರಿಗೆ ಹುಲಿ ಕಾಣಿಸಿಕೊಂಡಿದೆ. ಇದರಿಂದ ಆತಂಕಕ್ಕೊಳಗಾದ ರೈತರು ತಮ್ಮ ಜಮೀನುಗಳಿಗೆ ಹೋಗದೆ ಮನೆಗಳಿಗೆ ಹಿಂದಿರುಗಿದರು. ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ತೆರಳಿದ ಬಫರ್ ವಲಯದ ಅಧಿಕಾರಿಗಳು ಹುಲಿ ಸೆರೆಗೆ ಗ್ರಾಮದ ಬಸವಣ್ಣ ಎಂಬುವರ ಜಮೀನಿನಲ್ಲಿ ಬೋನು ಅಳವಡಿಸಿದ್ದಾರೆ.
ಮಾದಾಪಟ್ಟಣ ಗ್ರಾಮದಲ್ಲಿ ಬುಧವಾರ ಹಸುವಿನ ಮೇಲೆ ಹುಲಿ ದಾಳಿ ನಡೆಸಿ ಕೊಂದು ಹಾಕಿದೆ. ಬಂಡೀಪುರದ ಓಂಕಾರ್ ವಲಯದ ಅರಣ್ಯದಿಂದ ಹೊರಬಂದ ಹುಲಿ ಬೆಳಗ್ಗೆ ಗ್ರಾಮದ ಗುರುಮಲ್ಲಪ್ಪ ಅವರ ಜಮೀನಿನಲ್ಲಿ ಮೇಯುತ್ತಿದ್ದ ಹಸುವನ್ನು ಕೊಂದು ಹಾಕಿದೆ. ಸ್ಥಳಕ್ಕೆ ಅರಣ್ಯ ಸಿಬ್ಬಂದಿ ಭೇಟಿ ನೀಡಿ ಮಹಜರು ನಡೆಸಿದರು. ಜಾನುವಾರು ನಷ್ಟಕ್ಕೆ ಪರಿಹಾರ ಕೊಡುವ ಭರವಸೆ ನೀಡಿದ್ದಾರೆ.