- ಮೂರು ಹಂತದಲ್ಲಿ ಮಾ.26ರವರೆಗೆ ಸರ್ವೇ
- ಡಿಸಿಎಫ್ ಭಾಸ್ಕರ್ ಮಾಹಿತಿ
ಹನೂರು: ಅಖಿಲ ಭಾರತ ಹುಲಿ ಗಣತಿ ಜ.5ರಿಂದ ಮಾ.26ರವರೆಗೆ ನಡೆಯಲಿದ್ದು, ಎಂಎಸ್ ಟ್ರಿಪ್ಸ್ ಎಕೋಲಾಜಿಕಲ್ ಆ್ಯಪ್ ಮೂಲಕ ನಡೆಸಲಾಗುತ್ತದೆ ಎಂದು ಮಲೆಮಹದೇಶ್ವರ ವನ್ಯಜೀವಿ ವಿಭಾಗದ ಡಿಸಿಎಫ್ ಭಾಸ್ಕರ್ ಹೇಳಿದ್ದಾರೆ.
ಮಲೆಮಹದೇಶ್ವರ ವನ್ಯಜೀವಿ ವಿಭಾಗವು 949.28 ಚದರ ಕಿ.ಮೀ.ವಿಸ್ತೀರ್ಣವನ್ನು ಹೊಂದಿದ್ದು, 7 ವಲಯಗಳಿವೆ. 56 ಗಸ್ತುಗಳಿದ್ದು, ಹುಲಿ ಗಣತಿಗೆ ಸಜ್ಜಾಗಿದೆ. ಮೊದಲ ಹಂತದಲ್ಲಿ ಜ.5 ರಿಂದ 7ರವರೆಗೆ 3 ದಿನಗಳ ಕಾಲ ವೀಕ್ಷಣೆ ಸರ್ವೇ ಮೂಲಕ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಕಾರ್ಯಕ್ಕೆ ಎಂಎಸ್ ಟ್ರಿಪ್ಸ್ ಎಕೋಲಾಜಿಕಲ್ ಆ್ಯಪ್ ಮೂಲಕ ನಡೆಸಲಾಗುವುದು. ಒಂದು ತಂಡದಲ್ಲಿ ನಾಲ್ವರಂತೆ 223 ಅರಣ್ಯ ಇಲಾಖೆ ಅಧಿಕಾರಿ ಹಾಗೂ ಸಿಬ್ಬಂದಿ ಭಾಗವಹಿಸಲಿದ್ದಾರೆ. ಹುಲಿ ಗಣತಿಯನ್ನು ಬೆಳಗ್ಗೆ 6 ರಿಂದ 10 ಗಂಟೆಯವರೆಗೆ ನಡೆಸಲಾಗುತ್ತದೆ. ಗಣತಿಯಲ್ಲಿ ಸಿಗುವ ಮಾಂಸಾಹಾರಿ ಪ್ರಾಣಿಗಳು ಹಾಗೂ ಸಸ್ಯಾಹಾರಿ ಪ್ರಾಣಿಗಳಾದ ಆನೆ, ಕಾಡೆಮ್ಮೆಯನ್ನು ನೇರವಾಗಿ ನೋಡಿ ಗುರುತಿಸುವುದು. ಇವುಗಳ ಹೆಜ್ಜೆ ಗುರುತು, ಲದ್ದಿ, ಶಬ್ದ ಹಾಗೂ ಇನ್ನಿತರ ಚಿಹ್ನೆಗಳ ಆಧಾರದ ಮೇಲೆ ನಡೆಸಲಾಗುತ್ತದೆ.
2ನೇ ಹಂತದಲ್ಲಿ ಲೈನ್ ಟ್ರಾನ್ಸ್‌ಕ್ಟ್ ಮೂಲಕ ಜ.15 ರಿಂದ 18ರವರೆಗೆ ರೇಂಜ್ ಫೈಂಡರ್, ಕಂಪಾಸ್, ಜಿಪ್ ಕವರ್ ಹಾಗೂ ಟೇಪ್‌ಗಳ ಸಹಾಯದಿಂದ ಗಣತಿ ನಡೆಯಲಿದೆ. ಒಟ್ಟು 56 ಲೈನ್ ಟ್ರಾನ್ಸ್‌ಕ್ಟ್ ಇದ್ದು, ಈ ಕಾರ್ಯದಲ್ಲಿ ಸ್ವಯಂ ಸೇವಕರು ಒಳಗೊಂಡಂತೆ 168 ಅರಣ್ಯ ಇಲಾಖೆ ಅಧಿಕಾರಿ ಹಾಗೂ ಸಿಬ್ಬಂದಿ ಭಾಗವಹಿಸಲಿದ್ದಾರೆ. ಬೆಳಗ್ಗೆ 6ರಿಂದ 8 ಗಂಟೆ ಹಾಗೂ ಸಂಜೆ 4ರಿಂದ 6ರವರೆಗೆ 2 ಕಿ.ಮೀ ದೂರ ಕಾಲ್ನಡಿಗೆಯಲ್ಲಿ ಕ್ರಮಿಸಿ ಗಣತಿ ನಡೆಸಲಾಗುತ್ತದೆ. ಈ ವೇಳೆ ಸಿಗುವ ಪ್ರಾಣಿಗಳ ದತ್ತಾಂಶವನ್ನು ದಾಖಲು ಮಾಡಲಾಗುವುದು. ಪ್ರತಿ 400 ಮೀ ಅಂತರದಲ್ಲಿ ಸಿಗುವ ಸಸ್ಯವರ್ಗ, ಹುಲ್ಲು, ಕಳೆ ಸಸ್ಯ, ಮಾನವ ಅಡಚಣೆ ಹಾಗೂ ಪ್ರಾಣಿಗಳ ಹಿಕ್ಕೆಗಳನ್ನು ದಾಖಲು ಮಾಡಲಾಗುವುದು ಹಾಗೂ ಸಂಗ್ರಹಿಸಲಾಗುವುದು.
3ನೇ ಹಂತವು ಕ್ಯಾಮರಾ ಟ್ರ್ಯಾಪ್ ಮೂಲಕ ಜ.26 ರಿಂದ ಮಾ.26ರವರೆಗೆ ನಡೆಸಲಾಗುವುದು. ಒಟ್ಟು 454 ಗ್ರಿಡ್‌ಗಳಿದ್ದು, ಒಂದು ಗ್ರಿಡ್‌ಗೆ 2 ಕ್ಯಾಮರಾದಂತೆ 908 ಕ್ಯಾಮರಾವನ್ನು ಅಳವಡಿಸಿ ವನ್ಯಜೀವಿಗಳ ಚಲನ ವಲನಗಳ ದತ್ತಾಂಶವನ್ನು ದಾಖಲು ಮಾಡಲಾಗುವುದು ಎಂದು ತಿಳಿಸಿದ್ದಾರೆ.