ಗುಂಡ್ಲುಪೇಟೆ ತಾಲೂಕಿನ ಕುಣಗಳ್ಳಿಕಾಲನಿ ಬಳಿ ಹುಲಿ ದಾಳಿಗೆ ಕುರಿಗಾಹಿ ನೂರಾಳು ಗಾಯಗೊಂಡಿರುವುದು.  
ಚಾಮರಾಜನಗರ

ಹುಲಿ ದಾಳಿಯಿಂದ ಕುರಿಗಾಹಿಗೆ ಗಾಯ

ಎ. ಆರ್. ರಘುರಾಮ
ಗುಂಡ್ಲುಪೇಟೆ : ತಾಲೂಕಿನ ಕುಣಗಹಳ್ಳಿಕಾಲನಿ (ಗೋಪಾಲಪುರ) ಗ್ರಾಮದ ಬಳಿ ಭಾನುವಾರ ಬೆಳಗ್ಗೆ ಹುಲಿ ದಾಳಿಯಿಂದ ಕುರಿಗಾಹಿಯೊಬ್ಬ ಗಾಯಗೊಂಡ ಘಟನೆ ನಡೆದಿದೆ.
ಕಾಲನಿಯ ಸೋಲಿಗ ಸಮುದಾಯದ ನೂರಾಳು(56) ಗಾಯಗೊಂಡವರು. ಇವರು ಗೋಪಾಲಸ್ವಾಮಿ ಬೆಟ್ಟ ಅರಣ್ಯ ವಲಯ ವ್ಯಾಪ್ತಿಯ ತಮ್ಮ ಗ್ರಾಮದ ಬಳಿ ಎಂದಿನಂತೆ ಕುರಿ ಮೇಯಿಸಲು ಹೋಗಿದ್ದ ವೇಳೆ ಪೊದೆಯಲ್ಲಿ ಅಡಗಿದ್ದ ಹುಲಿ ಇವರ ಮೇಲೆ ದಾಳಿ ನಡೆಸಿದೆ.
ಎಡತೊಡೆ ಮತ್ತು ಎಡಗೈಗೆ ಗಾಯಗಳಾಗಿದೆ. ದಾಳಿ ವೇಳೆ ಕೆಳಗೆ ಬಿದ್ದ ಇವರು ಜೋರಾಗಿ ಕೂಗಿಕೊಂಡ ಕಾರಣ ಹುಲಿ ಅಲ್ಲಿಂದ ಓಡಿ ಹೋಗಿದೆ.
ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು.
ಆಸ್ಪತ್ರೆಗೆ ದಾಖಲು: ಗ್ರಾಮಸ್ಥರು ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಸ್ಥಳಕ್ಕೆ ತೆರಳಿ ಗಾಯಾಳು ನೂರಾಳು ರನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಅರಣ್ಯ ಇಲಾಖೆಯವರು ತಿಳಿಸಿದ್ದಾರೆ.
ಭಯದ ವಾತವರಣ: ಹುಲಿ ದಾಳಿಯಿಂದ ಜಾನುವಾರುಗಳು ಮೃತಪಡುವುದು, ಗಾಯಗೊಳ್ಳುವುದು ಸಾಮಾನ್ಯವಾಗಿದೆ. ಆದರೆ ಈಗ ಕುರಿಗಾಹಿ ಮೇಲೆ ನಡೆದಿರುವ ಹುಲಿ ದಾಳಿ ಹಿನ್ನೆಲೆಯಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಹುಲಿ ದಾಳಿ ಮಾಡಿದರೂ ಕುರಿಗಾಹಿ ಪವಾಡ ಸದೃಶ ರೀತಿಯಲ್ಲಿ ಬದುಕುಳಿದಿದ್ದಾರೆ. ಮನುಷ್ಯನ ಮೇಲೆರಗಿದ ಹುಲಿ ಮತ್ತೆ ದಾಳಿ ಮಾಡುವ ಸಾಧ್ಯತೆ ಇರುತ್ತದೆ. ಜಾನುವಾರು ಗಳನ್ನು ಮೇಯಿಸಲು, ಕೃಷಿ ಕಾರ್ಯ, ಪಂಪ್‌ಸೆಟ್‌ಗಳ ನೀರೆತ್ತಲು ಮತ್ತಿತರ ಉದ್ದೇಶಗಳಿಗೆ ಜಮೀನುಗಳಿಗೆ ಹೋಗಲು ಈ ಭಾಗದ ಜನರು ಭಯ ಬೀಳುತ್ತಿದ್ದಾರೆ. ಆದ್ದರಿಂದ ಕೂಡಲೇ ಹುಲಿ ಸೆರೆಗೆ ಕ್ರಮ ವಹಿಸಬೇಕು ಎಂದು ಕುಣಗಹಳ್ಳಿ ಮತ್ತು ಗೋಪಾಲಪುರ ಗ್ರಾಮಸ್ಥರು ಒತ್ತಾಯಿಸಿದ್ದಾರೆ.