ಪ್ರತಿಭಟನೆಯಲ್ಲಿ ಶಾಸಕ ಎಂ.ಆರ್.ಮಂಜುನಾಥ್ ಮಾತನಾಡಿದರು.  
ಚಾಮರಾಜನಗರ

ಗುಂಡೇಟಿಗೆ ಮೂವರು ಬಲಿ ಮಾಜಿ-ಹಾಲಿ ಶಾಸಕರ ಕಳವಳ

ಪ್ರಮುಖ ಮುಖ್ಯಾಂಶಗಳು

  • ಮೃತ ಕುಟುಂಬಸ್ಥರಿಗೆ ಸರ್ಕಾರಿ ಉದ್ಯೋಗ, ಪರಿಹಾರ ಸಿಗಲಿ ಎಂದ ಮಂಜುನಾಥ್

ಹನೂರು:

ತೊಮಿಯಾರ್ ಪಾಳ್ಯ ಅರಣ್ಯ ಪ್ರದೇಶದಲ್ಲಿ ಗುಂಡೇಟಿಗೆ ಮೂವರು ಬಲಿಯಾಗಿರುವ ಬಗ್ಗೆ ಶಾಸಕ ಎಂ.ಆರ್.ಮಂಜುನಾಥ್ ಹಾಗೂ ಮಾಜಿ ಶಾಸಕ ಆರ್.ನರೇಂದ್ರ ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ ಆಗಮಿಸಿದ್ದ ವೇಳೆ ಪ್ರತಿಭಟನಾ ಸ್ಥಳದಲ್ಲಿದ್ದ ಶಾಸಕ ಎಂ.ಆರ್.ಮಂಜುನಾಥ್ ಮಾತನಾಡಿ, ತಾಲೂಕಿನಲ್ಲಿ ಇಂಥ ದುರ್ಘಟನೆ ನಡೆದಿರುವುದು ಖಂಡನೀಯ. ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಅಮಾನತು ಮಾಡಬೇಕು. ನಿವೃತ್ತ ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ಉನ್ನತಮಟ್ಟದ ತನಿಖೆಯಾಗಬೇಕು. ಮೃತ ಕುಟುಂಬಸ್ಥರಿಗೆ ಸರ್ಕಾರದಿಂದ ಉದ್ಯೋಗ ಹಾಗೂ 1 ರಿಂದ 2 ಕೋಟಿ ರೂ. ಪರಿಹಾರ ನೀಡುವ ಮೂಲಕ ನ್ಯಾಯ ದೊರಕಿಸಿಕೊಡಬೇಕು ಎಂದು ಒತ್ತಾಯಿಸಿದರು.
ಮಾಜಿ ಶಾಸಕ ಆರ್.ನರೇಂದ್ರ ಮಾತನಾಡಿ, ಕುಟುಂಬಸ್ಥರನ್ನು ಸಂಕಷ್ಟಕ್ಕೆ ದೂಡಿದೆ. ಯಾವುದೇ ವ್ಯಕ್ತಿಯನ್ನು ಸಾಯಿಸುವ ಅಧಿಕಾರ ಯಾರಿಗೂ ಕೊಟ್ಟಿಲ್ಲ. ತಪ್ಪಿತಸ್ಥರಿಗೆ ಕಾನೂನಿನಡಿ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದರು.
ಕಚೇರಿಗೆ ಮುತ್ತಿಗೆ ಹಾಕಲು ಯತ್ನ: ಘಟನೆ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಅರಣ್ಯ ಇಲಾಖೆ ಕಚೇರಿ ಗೇಟ್ ಬಂದ್ ಮಾಡಿ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು. ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ ತೆರಳುತ್ತಿದ್ದಂತೆ ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿ, ಅರಣ್ಯ ಇಲಾಖೆ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು. ಈ ವೇಳೆ ಪೊಲೀಸರು ತಡೆದಾಗ ಕೆಲಕಾಲ ಮಾತಿನ ಚಕಮಕಿ ನಡೆಯಿತು.