ಕೋಣನಕೆರೆ ಗ್ರಾಮ ಸಮೀಪ ನಡೆದ ಅಪಘಾತದಲ್ಲಿ ಜಖಂಗೊಂಡ ಕಾರು ಹಾಗೂ ಆಟೋ.
ಹನೂರು: ತಾಲೂಕಿನ ಮಲೆಮಹದೇಶ್ವರ ಬೆಟ್ಟದ ಕೋಣನಕೆರೆ ತಾಳುಬೆಟ್ಟ ಮಾರ್ಗದಲ್ಲಿ ಮಂಗಳವಾರ ಕಾರು ಹಾಗೂ ಆಟೋ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಮೂವರು ಗಾಯಗೊಂಡಿದ್ದಾರೆ.
ಆಟೋದಲ್ಲಿದ್ದ ಮೈಸೂರಿನ ಕೂರ್ಗಳ್ಳಿಯ ಅರುಣ್ (30), ಪವನ್ (28) ಹಾಗೂ ಕಾರಿನಲ್ಲಿದ್ದ ಮೈಸೂರಿನ ಮಂಡಿ ಮೊಹಲ್ಲಾದ ಯಶಸ್ (12) ಗಾಯಗೊಂಡವರು.
ಬೆಳಗ್ಗೆ ಸುಮಾರು 8ರ ವೇಳೆಯಲ್ಲಿ ಕೋಣನಕೆರೆ ಗ್ರಾಮದ ಸಮೀಪದ ಮೂಕಳ್ಳಿ ಮಾರಮ್ಮ ದೇಗುಲದ ಬಳಿ ಮ.ಬೆಟ್ಟಕ್ಕೆ ತೆರಳುತ್ತಿದ್ದ ಆಟೋ ಹಾಗೂ ಎದುರಿನಿಂದ ಆಗಮಿಸಿದ ಕಾರಿನ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಪರಿಣಾಮ ಮೂವರು ಗಾಯಗೊಂಡರು. ಬಳಿಕ ಸ್ಥಳೀಯರು ಗಾಯಾಳುಗಳನ್ನು ಆಂಬುಲೆನ್ಸ್ ಮೂಲಕ ಕೊಳ್ಳೇಗಾಲ ಸರ್ಕಾರಿ ಉಪ ವಿಭಾಗೀಯ ಆಸ್ಪತ್ರೆಗೆ ಕಳುಹಿಸಿ ಕೊಟ್ಟರು. ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಮ.ಬೆಟ್ಟದ ಪೊಲೀಸರು ಜಖಂಗೊಂಡಿದ್ದ ಕಾರು ಹಾಗೂ ಆಟೋವನ್ನು ವಶಕ್ಕೆ ಪಡೆದು ಮುಂದಿನ ಕ್ರಮಕೈಗೊಂಡಿದ್ದಾರೆ.