ಹನೂರು: ತಾಲೂಕಿನ ಹೂಗ್ಯಂ-ಜಲ್ಲಿಪಾಳ್ಯ ಮಾರ್ಗದಲ್ಲಿ ಭಾನುವಾರ ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಆಯತಪ್ಪಿ ಬಿದ್ದು ತಮಿಳುನಾಡು ಮೂಲದ ಮೂವರು ಯುವಕರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿ, ಚಿಕಿತ್ಸೆ ಪಡೆಯುತ್ತಿದ್ದಾರೆ.
ತಮಿಳುನಾಡಿನ ಮೆಟ್ಟುಪಾಳ್ಯಂನ ನಿವಾಸಿಗಳಾದ ಕಿಶೋರ್, ಯುವರಾಜ್ ಹಾಗೂ ಸತೀಶ್ ಗಾಯಗೊಂಡವರು. ಈ ಮೂವರು ಒಂದೇ ಬೈಕ್‌ನಲ್ಲಿ ಕಾರ್ಯನಿಮಿತ್ತ ತಾಲೂಕಿನ ಹೂಗ್ಯಂಗೆ ಆಗಮಿಸಿ ವಾಪಸ್ಸಾಗುತ್ತಿದ್ದರು. ಈ ವೇಳೆ ಹೂಗ್ಯಂ-ಜಲ್ಲಿಪಾಳ್ಯ ಮಾರ್ಗಮಧ್ಯೆ ಆಯತಪ್ಪಿದ ಪರಿಣಾಮ ಬೈಕ್ ರಸ್ತೆ ಬದಿಯ ಹಳ್ಳಕ್ಕೆ ಬಿದ್ದು ಮೂವರು ಗಾಯಗೊಂಡಿದ್ದಾರೆ. ಈ ಬಗ್ಗೆ ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಗಾಯಾಳುವನ್ನು ಸಮೀಪದ ಕೂಡಲೂರು ಸರ್ಕಾರಿ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಕೊಳ್ಳೇಗಾಲದ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ರಾಮಾಪುರ ಪೊಲೀಸರು ಮುಂದಿನ ಕ್ರಮಕೈಗೊಂಡಿದ್ದಾರೆ.