ಗುಂಡ್ಲುಪೇಟೆ ತಾಲೂಕಿನ ಗೋಪಾಲಸ್ವಾಮಿಬೆಟ್ಟಕ್ಕೆ ಹೋಗಲು ಕಿಲೋಮೋಟರ್ ಉದ್ದದ ಕ್ಯೂನಲ್ಲಿ ಕಾದು ನಿಂತಿರುವ ಪ್ರವಾಸಿಗರು,
- ಅರಣ್ಯ ಇಲಾಖೆ-ಸಾರಿಗೆ ಸಂಸ್ಥೆಗಳ ತಿಕ್ಕಾಟದಿಂದ ಜನರು ಹೈರಾಣ
ಗುಂಡ್ಲುಪೇಟೆ: ಅರಣ್ಯ ಇಲಾಖೆ ಹಾಗೂ ಸಾರಿಗೆ ಸಂಸ್ಥೆಗಳ ತಿಕ್ಕಾಟದಿಂದ ಗೋಪಾಲಸ್ವಾಮಿ ಬೆಟ್ಟಕ್ಕೆ ಬರುವ ಪ್ರವಾಸಿಗರು ಬಿಸಿಲಿನಲ್ಲಿ ಬಸವಳಿಯುವಂತಾಗಿದೆ.
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಪರಿಸರ ಸೂಕ್ಷ್ಮ ಪ್ರದೇಶಕ್ಕೆ ಸೇರಿದ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಅರಣ್ಯ ಇಲಾಖೆ ಖಾಸಗಿ ವಾಹನಗಳ ಪ್ರವೇಶವನ್ನು ನಿರ್ಬಂಧಿಸಿದೆ. ಬೆಟ್ಟಕ್ಕೆ ಹೋಗುವ ಪ್ರವಾಸಿಗರು ತಪ್ಪಲಿನಲ್ಲಿ ತಮ್ಮ ವಾಹನಗಳನ್ನು ನಿಲ್ಲಿಸಿ ಸಾರಿಗೆ ಬಸ್ಸುಗಳಲ್ಲಿಯೇ ಹೋಗಬೇಕಾಗಿದೆ. ಸಾರಿಗೆ ಇಲಾಖೆ ಬಸ್‌ಗಳ ಸೌಲಭ್ಯ ಒದಗಿಸುತ್ತಿದೆ. ಬೆಟ್ಟದ ತಪ್ಪಲಿನಲ್ಲಿ ಸಾರಿಗೆ ಸಂಸ್ಥೆ ತೆರೆದಿರುವ ಕೌಂಟರ್‌ನಲ್ಲಿ ಟಿಕೆಟ್ ಪಡೆದ ಪ್ರಯಾಣಿಕರು ಗೇಟ್ ಒಳಗೆ ಪ್ರವೇಶಿಸಿ ಅಲ್ಲಿಂದ ಬಸ್ಸುಗಳಲ್ಲಿ ಬೆಟ್ಟಕ್ಕೆ ಹೋಗಿಬರುತ್ತಿದ್ದರು. ಬಸ್ಸುಗಳು ತಡವಾದರೆ ಮರಗಳ ನೆರಳಿನಲ್ಲಿ ನಿಂತು ಬಿಸಿಲು, ಮಳೆಯಿಂದ ರಕ್ಷಣೆ ಪಡೆದುಕೊಳ್ಳುತ್ತಿದ್ದರು.
ನಿನ್ನೆಯವರೆಗೂ ಗೇಟ್‌ನಲ್ಲಿ ಟಿಕೆಟ್ ಖರೀದಿಸಿದ ಪ್ರವಾಸಿಗರನ್ನು ಒಳಗೆ ಬಿಟ್ಟುಕೊಳ್ಳುತ್ತಿದ್ದ ಅರಣ್ಯಾಧಿಕಾರಿಗಳು ಶನಿವಾರದಿಂದ ಬಸ್ಸು ಬರುವವರೆಗೆ ಒಳಗೆ ಪ್ರವೇಶಿಸದಂತೆ ನಿರ್ಬಂಧಿಸಿದ್ದಾರೆ. ಟಿಕೆಟ್ ಪಡೆದರೂ ಪ್ರಯಾಣಿಕರನ್ನು ಒಳಗೆ ಬಿಡದೆ ಗೇಟ್‌ಬಳಿಯೇ ತಡೆಗಟ್ಟುತ್ತಿದ್ದಾರೆ. ಇತ್ತೀಚೆಗೆ ಮಹದೇಶ್ವರಬೆಟ್ಟದಲ್ಲಿ ನಾಗಮಲೆಗೆ ಹೋಗುತ್ತಿದ್ದ ಬಾಲಕನ ಮೇಲೆ ಚಿರತೆ ದಾಳಿ ನಡೆಸಿದ್ದರಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳುತ್ತಿದ್ದಾರೆ. ಬೆಟ್ಟಕ್ಕೆ ಹೋಗುವ ಪ್ರವಾಸಿಗರ ಅನುಕೂಲಕ್ಕೆ ಹಂಗಳ ಗ್ರಾಮ ಪಂಚಾಯಿತಿ ಬಸ್ ನಿಲ್ದಾಣ ನಿರ್ಮಿಸಿದ್ದರೂ ಇನ್ನೂ ಬಳಕೆಗೆ ತರದ ಪರಿಣಾಮ ಪ್ರವಾಸಿಗರು ಬಳಲುವಂತಾಗಿದೆ.
ಸಣ್ಣ ಮಕ್ಕಳೊಂದಿಗೆ ಬರುವ ಮಹಿಳೆಯರು ಬಿಸಿಲಿನಿಂದ ರಕ್ಷಣೆ ಪಡೆಯಲು ಪರದಾಡುವಂತಾಗಿದೆ. ಮಕ್ಕಳು, ವೃದ್ಧರು ಬಿಸಿಲು, ಮಳೆಯಲ್ಲಿ ಸರತಿ ಸಾಲಿನಲ್ಲಿ ಕಾದು ನಿಲ್ಲುವಂತಾಗಿದೆ. ಬಿಸಿಲಿನ ತಾಪದಿಂದ ಪಾರಾಗಲು ಕೊಡೆ, ವೇಲು, ಸೀರೆ ಹಾಗೂ ಟೋಪಿಗಳ ಮೊರೆಹೋಗುತ್ತಿದ್ದಾರೆ. ಇನ್ನಾದರೂ ಸಂಬಂಧಪಟ್ಟವರು ಪ್ರಯಾಣಿಕರ ನೆರವಿಗೆ ಬರಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಬೆಟ್ಟಕ್ಕೆ ಹೋಗುವ ಪ್ರವಾಸಿಗರ ಅನುಕೂಲಕ್ಕೆ ತಪ್ಪಲಿನಲ್ಲಿ ವಾಹನಗಳ ಪಾರ್ಕಿಂಗ್ ಸ್ಥಳದಲ್ಲಿ ಹಂಗಳ ಗ್ರಾಮ ಪಂಚಾಯಿತಿ 20 ಲಕ್ಷ ರೂ. ಅನುದಾನದಲ್ಲಿ ಬಸ್ ಶೆಲ್ಟರ್ ನಿರ್ಮಿಸಿದೆ. ಇದರ ಕಾಮಗಾರಿ ಬಹುತೇಕ ಮುಗಿದಿದೆ. ಇದರಲ್ಲಿ ಟಿಕೆಟ್ ಕೌಂಟರ್ ಹಾಗೂ ಪ್ರವಾಸಿಗರಿಗೆ ನೆರಳಿನ ವ್ಯವಸ್ಥೆ ಮಾಡಲಾಗಿದೆ. ಆದರೂ ಇದನ್ನು ಬಳಕೆಗೆ ನೀಡದ ಪರಿಣಾಮ ಅರಣ್ಯ ಇಲಾಖೆ ಮತ್ತು ಸಾರಿಗೆ ಸಂಸ್ಥೆಗಳ ಕಿತ್ತಾಟಕ್ಕೆ ಕಾರಣವಾಗಿದೆ.