ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದ ಮಾದಪ್ಪನ ದೇಗುಲ.
- ಚಂದ್ರಗ್ರಹಣ ಸಮಯದಲ್ಲೂ ತೆರೆದಿರಲಿದೆ ದೇವಾಲಯ
ಹನೂರು: ಮಾರ್ಚ್ 3 ರಂದು ಚಂದ್ರಗ್ರಹಣ ಗೋಚರಿಸುವ ಹಿನ್ನೆಲೆಯಲ್ಲಿ ಬಹುತೇಕ ದೇಗುಲಗಳು ಬಂದ್ ಆಗಲಿವೆ. ಆದರೆ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದ ಮಾದಪ್ಪನ ದೇಗುಲ ಎಂದಿನಂತೆ ತೆರೆಯಲಿದ್ದು, ದೇವರ ದರ್ಶನ ಇರಲಿದೆ.
ಈ ಸಂಬಂಧ ಶ್ರೀ ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎ.ಈ ರಘು ಸೋಮವಾರ ಸುದ್ದಿಗಾರದೊಂದಿಗೆ ಮಾತನಾಡಿ, ಮಂಗಳವಾರ ಮಧ್ಯಾಹ್ನ 3.50 ರಿಂದ ಸಂಜೆ 6.40ರ ವೆರೆಗೆ ಚಂದ್ರಗ್ರಹಣ ಗೋಚರಿಸಲಿದೆ. ಆದರೆ ದೇಗುಲದಲ್ಲಿ ಸ್ವಾಮಿಯ ದರ್ಶನಕ್ಕೆ ಯಾವುದೇ ತೊಂದರೆ ಇಲ್ಲ. ಹಾಗಾಗಿ ಮಾದಪ್ಪನ ದೇಗುಲವು ಎಂದಿನಂತೆ ತೆರೆಯಲಿದ್ದು, ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಇರುತ್ತದೆ. ಆದ್ದರಿಂದ ಭಕ್ತರು ಆಗಮಿಸಿ ದೇವರ ದರ್ಶನ ಪಡೆದು ಸೇವೆಗಳಲ್ಲಿ ಭಾಗಿಯಾಗಬಹುದು. ಗ್ರಹಣ ಮುಗಿದ ಬಳಿಕ ಧಾರ್ಮಿಕ ಸಂಪ್ರದಾಯದಂತೆ ದೇಗುಲವನ್ನು ಶುದ್ಧೀಕರಿಸಿ ಸ್ವಾಮಿಗೆ ಪೂಜೆ ಸಲ್ಲಿಸಿದ ಬಳಿಕ ಮತ್ತೆ ಭಕ್ತರಿಗೆ ದೇಶವರ ದರ್ಶನಕ್ಕೆ ಅವಕಾಶ ನೀಡಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ದೇಗುಲದ ಪ್ರಧಾನ ಆಗಮಿಕ ಕರವೀರಸ್ವಾಮಿ, ಪಾರು ಪತ್ತೇದಾರರಾದ ಮಹಾಲಿಂಗನಕಟ್ಟೆ ಮಹದೇವಸ್ವಾಮಿ, ರಾಜಶೇಖರ್ ಇದ್ದರು.
ಮ.ಬೆಟ್ಟದಲ್ಲಿ ಬಂದ್ ಪ್ರಮೇಯವೇ ಇಲ್ಲ: ಗ್ರಹಣ ಸಂಭವಿಸುವ ವೇಳೆ ಬಹುತೇಕ ದೇಗುಲಗಳಲ್ಲಿ ಬಾಗಿಲನ್ನು ಬಂದ್ ಮಾಡಿ ಭಕ್ತರಿಗೆ ದೇವರ ದರ್ಶನವನ್ನು ನಿರ್ಬಂಧಿಸಲಾಗುತ್ತದೆ. ಆದರೆ ಮಲೆಮಹದೇಶ್ವರ ಬೆಟ್ಟದ ಮಾದಪ್ಪನ ಸನ್ನಿಧಿಯಲ್ಲಿ ಸೂರ್ಯ ಹಾಗೂ ಚಂದ್ರಗ್ರಹಣದ ಸಂದರ್ಭದಲ್ಲಿ ಇಂತಹ ಪ್ರಮೇಯವೇ ಇಲ್ಲ. ಗ್ರಹಣದ ವೇಳೆ ದೇವರ ದರ್ಶನ ಪಡೆದರೆ ಶುಭವಾಗುತ್ತದೆ ಎಂಬುದು ನಂಬಿಕೆ. ಹಾಗಾಗಿ ಚಂದ್ರಗ್ರಹಣದ ವೇಳೆಯೂ ಎಂದಿನಂತೆ ದೇವರ ದರ್ಶನವಿರುತ್ತದೆ ಎಂದು ಮಾದಪ್ಪನ ದೇಗುಲದ ಪ್ರಧಾನ ಆಗಮಿಕ ಕರವೀರಸ್ವಾಮಿ ಅವರು ವಿಜಯವಾಣಿಗೆ ತಿಳಿಸಿದರು.