ಕೊಳ್ಳೇಗಾಲದ ತಾಲೂಕು ಕಚೇರಿ ಆವರಣದಲ್ಲಿ ಕುಡಿಯುವ ನೀರಿನ ನಾಮ ಫಲಕವಿದೆಯಾದರೂ ನೀರಿನ ವ್ಯವಸ್ಥೆ ಇಲ್ಲ. 
ಚಾಮರಾಜನಗರ

ಕೊಳ್ಳೇಗಾಲ ತಾಲೂಕು ಕಚೇರಿಯಲ್ಲಿಲ್ಲ ಕುಡಿವ ನೀರು

ಪ್ರಮುಖ ಮುಖ್ಯಾಂಶಗಳು

  • ಬೇಸಿಗೆ ಆರಂಭ
  • ದಿನದಿಂದ ದಿನಕ್ಕೆ ಬಿಸಿಲಿನ ತಾಪ ಏರಿಕೆ
ಕೊಳ್ಳೇಗಾಲ: ಬೇಸಿಗೆ ಆರಂಭಗೊಂಡು ದಿನದಿಂದ ದಿನಕ್ಕೆ ಬಿಸಿಲಿನ ತಾಪ ಏರಿಕೆಯಾಗುತ್ತಿದ್ದು, ವಿವಿಧ ಕೆಲಸಗಳಿಗಾಗಿ ತಾಲೂಕು ಕಚೇರಿಗೆ ಬರುವ ಜನರಿಗೆ ನೀರಿಲ್ಲದಂತಾಗಿದೆ.
ಕೊಳ್ಳೇಗಾಲ ತಾಲೂಕು ಕಚೇರಿಗೆ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಿಂದ ವಿವಿಧ ಕೆಲಸ ಕಾರ್ಯಗಳಿಗೆ ಬರುವ ಸಾರ್ವಜನಿಕರಿಗೆ ಕನಿಷ್ಠ ಕುಡಿಯುವ ನೀರಿನ ಸೌಲಭ್ಯವಿರುವುದು ವಿಪರ್ಯಾಸವೇ ಸರಿ. ಈ ಪರಿಸ್ಥಿತಿ ಕಳೆದ ಎರಡ್ಮೂರು ವರ್ಷಗಳಿಂದ ಇದೆ.
ತಳ ಮಹಡಿ ಸೇರಿದಂತೆ 2 ಕಟ್ಟಡಗಳನ್ನು ಹೊಂದಿರುವ ತಾಲೂಕು ಕಚೇರಿಯಲ್ಲಿ ಉಪವಿಭಾಗಾಧಿಕಾರಿ ಮತ್ತು ತಹಸೀಲ್ದಾರ್ ಕಚೇರಿಗೆ ನಿತ್ಯ ನೂರಾರು ಜನರು ಭೇಟಿ ನೀಡುತ್ತಾರೆ. ಸರ್ಕಾರದ ವಿವಿಧ ಸೌಲಭ್ಯ ಪಡೆಯಲು ಮತ್ತು ದಾಖಲೆಗಳ ಕ್ರೋಡೀಕರಣಕ್ಕಾಗಿ ಆಗಮಿಸುತ್ತಾರೆ. ದೂರದ ಗ್ರಾಮಗಳಿಂದ ಬರುವವರು ಬಿಸಿಲಿನಲ್ಲಿ ಬಸವಳಿದು ಬರಲಿದ್ದು, ಕುಡಿಯುವ ನೀರು ದೊರಕದಿರುವುದು ದುರಂತವೇ ಸರಿ.
ಈ ನಡುವೆ ಅಧಿಕಾರಿಗಳೂ ಸಹ ಇತ್ತ ಗಮನ ಹರಿಸದಿರುವುದು ಸೋಜಿಗವಾಗಿದೆ. ಕಚೇರಿ ಮುಂಭಾಗವಿರುವ ಹೋಟೆಲ್, ಅಂಗಡಿ ಮುಂಗಟ್ಟುಗಳಲ್ಲಿ ಜನರು ದುಡ್ಡು ಖರೀದಿಸಿ ನೀರು ಕುಡಿಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ವ್ಯವಸ್ಥೆ ವಿರುದ್ಧ ಸಾರ್ವಜನಿಕರು ಅಸಮಾಧಾನ ಹೊರ ಹಾಕುತ್ತಿದ್ದಾರೆ.
ಆಧಾರ್ ತಿದ್ದುಪಡಿ, ಪಡಿತರ ಕಾರ್ಡ್ ತಿದ್ದುಪಡಿ, ಪಿಂಚಣಿ ಸೌಲಭ್ಯ ಸೇರಿದಂತೆ ಇತರ ಮಾಹಿತಿ ಪಡೆಯಲು ವೃದ್ಧರು ನೂರಾರು ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆ. ಈ ವೇಳೆ ದಣಿವು ಹಾರಿಸಿಕೊಳ್ಳೋಣ ಎಂದರೆ ಹುಡುಕಿದರೂ ನೀರಿಲ್ಲ. ಅಧಿಕಾರಿಗಳು ಕೆಲಸ ಮಾಡುವ ಕೊಠಡಿಯಲ್ಲಿ ಕ್ಯಾನ್ ವಾಟರ್ ವ್ಯವಸ್ಥೆ ಇರುತ್ತದೆ. ಸಾರ್ವಜನಿಕವಾಗಿ ನೀರಿನ ವ್ಯವಸ್ಥೆ ಇಲ್ಲದೆ ಕಚೇರಿಗೆ ಬಂದ ಜನರು ದಣಿದು ಹೋಗುತ್ತಿದ್ದಾರೆ.
ಕೊಳ್ಳೇಗಾಲದ ತಾಲೂಕು ಕಚೇರಿಗೆ ಬರುವ ಜನರಿಗೆ ಕುಡಿಯುವ ನೀರಿನ ಸೌಲಭ್ಯ ಅತ್ಯಗತ್ಯವಾಗಿ ಬೇಕಿದೆ. ಆದ್ದರಿಂದ ಕುಡಿಯುವ ನೀರಿನ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ವಹಿಸಲಾಗುವುದು. ಆ ಮೂಲಕ ಜನರಿಗೆ ಅನುಕೂಲ ಕಲ್ಪಿಸಲಾಗುವುದು.
ಬಸವರಾಜು ತಹಸಿಲ್ದಾರ್, ಕೊಳ್ಳೇಗಾಲ