ಯಳಂದೂರು ತಾಲೂಕಿನ ಅಂಬಳೆ ಗ್ರಾಮದಲ್ಲಿರುವ ಚಾಮುಂಡೇಶ್ವರಿ ದೇಗುಲ.
ಯಳಂದೂರು: ತಾಲೂಕಿನ ಅಂಬಳೆ ಗ್ರಾಮದ ಸುವರ್ಣಾವತಿ ನದಿ ದಡಲ್ಲಿರುವ ಐತಿಹಾಸಿಕ ಚಾಮುಂಡೇಶ್ವರಿ ದೇಗುದಲ್ಲಿ ಗುರುವಾರ ರಾತ್ರಿ ಕಳ್ಳತನ ನಡೆದಿದ್ದು, ಲಕ್ಷಾಂತರ ರೂ. ಹಣ, ಚಿನ್ನದ ವಡವೆಗಳು ಹಾಗೂ ಸಿಸಿ ಕ್ಯಾಮೆರಾವನ್ನು ಕಳ್ಳರು ಕದ್ದೊಯ್ದಿದ್ದಾರೆ.
ದೇಗುಲದ ಬಾಗಿಲು ಒಡೆದಿರುವ ಕಳ್ಳರು ಇಲ್ಲಿದ್ದ ಎರಡು ಹುಂಡಿಗಳನ್ನು ದೇಗುಲದ ಹೊರ ಭಾಗಕ್ಕೆ ತಂದು ಇದನ್ನು ಕಬ್ಬಿಣದ ರಾಡ್‌ಗಳ ಮೂಲಕ ಒಡೆದು ಅದರಲ್ಲಿದ್ದ ಲಕ್ಷಾಂತರ ರೂ.ಗಳನ್ನು ದೋಚಿದ್ದಾರೆ. ಅಲ್ಲದೆ ದೇವಸ್ಥಾನದ ಉತ್ಸವಮೂರ್ತಿಯಲ್ಲಿದ್ದ ಚಿನ್ನದ ತಾಳಿ ಬೊಟ್ಟುಗಳನ್ನು ಸಹ ಕಳ್ಳತನ ಮಾಡಲಾಗಿದೆ. ಇದರೊಂದಿಗೆ ಚಾಲಾಕಿ ಕಳ್ಳರು ಸಿಸಿ ಕ್ಯಾಮೆರಾ ಹಾಗೂ ಡಿವಿಆರ್‌ನ್ನು ಸಹ ಕಳ್ಳತನ ಮಾಡಿದ್ದಾರೆ. ಈ ಬಗ್ಗೆ ಪಟ್ಟಣದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರೊಂದಿಗೆ ಶ್ವಾನದಳ ಹಾಗೂ ಬೆರಳಚ್ಚು ತಜ್ಞರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಐತಿಹಾಸಿಕ ದೇಗುಲ: ಇದು ಐತಿಹಾಸಿಕ ದೇಗುಲವಾಗಿದ್ದು, ನೂರಾರುವ ವರ್ಷಗಳ ಐತಿಹ್ಯವಿದೆ. ಪ್ರತಿ ವರ್ಷ ಇಲ್ಲಿ ಒಂದು ತಿಂಗಳ ಕಾಲ ಗ್ರಾಮ ದೇವತೆಯ ಹಬ್ಬವನ್ನು ಆಚರಿಸುವ ವಾಡಿಕೆ ಇದೆ. ಈ ಬಾರಿಯೂ ಹಬ್ಬ ನಡೆದ ನಂತರ ಹುಂಡಿಯ ಹಣವನ್ನು ತೆಗೆದಿರಲಿಲ್ಲ. ಚಾಮುಂಡೇಶ್ವರಿ ಕೊಂಡೋತ್ಸವೂ ಕೂಡ ನಡೆಯುತ್ತದೆ. ಕೊಂಡದ ರಾತ್ರಿ ಇಲ್ಲಿನ ದೇವಿಗೆ ಚಿನ್ನಾಭರಣ ತೊಡಿಸಿ ದೇಗುಲದ ಬಾಗಿಲನ್ನೇ ಹಾಕುವುದಿಲ್ಲ. ಈ ಸಂದರ್ಭದಲ್ಲೂ ಕೂಡ ಇಲ್ಲಿ ಯಾವುದೇ ಕಳ್ಳತನ ನಡೆದಿರಲಿಲ್ಲ. ಈಗ ನಡೆದಿರುವ ಕಳ್ಳತನ ಹಲವು ಅನುಮಾನಗಳಿಗೆ ಆಸ್ಪದ ನೀಡಿದೆ. ತನಿಖೆಯ ಬಳಿಕ ಇದಕ್ಕೆಲ್ಲಾ ಉತ್ತರ ದೊರೆಯಲಿದೆ.